ದಾವಣಗೆರೆ, ಮಾ.21- ಪ್ರಸ್ತುತ ದಿನಗಳಲ್ಲಿ ಜಲ ಸಂರಕ್ಷಣೆಗೆ ಅಂತರ್ಜಲ ಮರುಪೂರಣ ಮಾಡುವ ಕಾರ್ಯ ಎಲ್ಲರಿಂದ ಆಗಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಎಂ. ಕರೆಣ್ಣನವರ್ ತಿಳಿಸಿದರು.
ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಬಿಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಜಲ ದಿನ-2025ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನೆಗಳಲ್ಲಿ ಅವಶ್ಯಕತೆಗೆ ತಕ್ಕಷ್ಟೇ ನೀರನ್ನು ಬಳಸದಿರುವುದರಿಂದ ಸಿಹಿ ನೀರು ಹೆಚ್ಚಾಗಿ ಪೋಲಾಗುತ್ತಿದೆ. ಕೆಲವೆಡೆ ಕೃಷಿ ಕ್ಷೇತ್ರದಲ್ಲೂ ಅನಾವಶ್ಯಕವಾಗಿ ನೀರು ಹರಿದು ವ್ಯರ್ಥವಾಗುತ್ತಿದೆ. ಇದನ್ನು ತಡೆಯಲು ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಮನುಷ್ಯ ಪರಿಸರದ ಮೇಲೆ ಮಾಡುವ ಅನಾಚಾರ ದಿಂದ ಪರಿಸರದಲ್ಲಿನ ಯೋಗ್ಯ ನೀರು ಕಲುಷಿತವಾಗುತ್ತಿದೆ. ಇಂತಹ ನೀರು ಭೂಮಿಯಲ್ಲಿ ಇಂಗಿದರೇ ಅಂತರ್ಜಲವೂ ಮಾಲಿನ್ಯವಾಗಲಿದೆ. ಆದ್ದರಿಂದ ನೀರಿನ ಉಳಿವಿಗಾಗಿ ಎಲ್ಲರೂ ಯೋಚಿಸಬೇಕಿದೆ ಎಂದರು.
ಭೂ ಮಂಡಲದಲ್ಲಿ ಸಿಹಿ ನೀರಿನ ಪ್ರಮಾಣ ಶೇ.2.5ರಷ್ಟಿದ್ದು, ಇದನ್ನು ಕಲುಷಿತಗೊಳಿಸುವುದು ಮಹಾ ಅಪರಾಧ. ಪ್ರಸಕ್ತ ದಿನಗಳಲ್ಲಿ ಎಲ್ಲರ ಆರೋಗ್ಯದಲ್ಲಿ ವ್ಯತ್ಯಾಸ ಕಾಣುತ್ತಿರುವುದೇ ಜಲ ಮಾಲಿನ್ಯ ಆಗುತ್ತಿರುವುದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ ಮಾತನಾಡಿ, ಪರಿಸರದ ಮೇಲಾಗುತ್ತಿರುವ ದೌರ್ಜನ್ಯದಿಂದಾಗಿ ಜಾಗತೀಕ ತಾಪಮಾನ ಹೆಚ್ಚಾಗಿ, ಪರಿಸರದ ಹವಾಗುಣ ಬದಲಾಗಿ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ವಿವರಿಸಿದರು.
ಪರಿಸರ ಒಳಿತಿಗಾಗಿ ಮರ-ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು ಮತ್ತು ಪ್ರೋತ್ಸಾಹಿಸಬೇಕು. ಪ್ಲಾಸ್ಟಿಕ್ ಬಳಕೆ ಮಾಡದೇ, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಾಪಾಡಬೇಕು ಎಂದು ಹೇಳಿದರು.
ವಿಶ್ವ ಜಲ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ದೀಪಾ ದೇವಗಿರಿ ಪ್ರಥಮ, ಎಂ.ಪಿ. ಸಹನಾ ದ್ವಿತೀಯ ಮತ್ತು ಫರಾನಾ ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.ಎ.ಜೆ. ನೀತಾ, ಎ.ಕೆ. ಫೌಂಡೇಶನ್ ಅಧ್ಯಕ್ಷ ಕೆ.ಬಿ. ಕೊಟ್ರೇಶ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಗುರುಸಿದ್ದಸ್ವಾಮಿ, ಜಿ.ಪಂ ಯೋಜನಾಧಿಕಾರಿ ಮಲ್ಲನಾಯ್ಕ್, ಐಕ್ಯೂಎಸಿ ಸಂಚಾಲಕ ಕೆ. ಮುರುಗೇಶಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ನೆರವು ಸೇವೆಗಳ ಪ್ರಾಧಿಕಾರ, ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಬಾಲ ಭವನ ಸಮಿತಿ, ಕರ್ನಾಟಕ ವಿಜ್ಞಾನ ಪರಿಷತ್ತು ಮತ್ತು ಎ.ಕೆ. ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.