ದೈಹಿಕ ಕಾಯಿಲೆಗಳಿಂದ ಮುಕ್ತವಾಗಿರುವುದೇ ಆರೋಗ್ಯವಲ್ಲ

ದೈಹಿಕ ಕಾಯಿಲೆಗಳಿಂದ ಮುಕ್ತವಾಗಿರುವುದೇ ಆರೋಗ್ಯವಲ್ಲ

ಬಾಪೂಜಿ ವಿವೇಕ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಡಾ. ಸ್ನೇಹರೂಪ ಪೂಜಾರ್

ದಾವಣಗೆರೆ, ಮಾ.20- ಆರೋಗ್ಯ ಎಂದರೆ ಬರಿಯ ದೈಹಿಕ ಕಾಯಿಲೆಗಳಿಂದ ಮುಕ್ತವಾಗಿರುವುದಲ್ಲ, ಬದಲಾಗಿ ವಿಶ್ವ ಆರೋಗ್ಯ ಸಂಸ್ಥೆ ವಿವರಿಸುವ ಪ್ರಕಾರ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಅಧ್ಯಾತ್ಮಿಕವಾಗಿ ಸ್ವಸ್ಥವಾಗಿರುವುದೇ ಸಂಪೂರ್ಣ ಆರೋಗ್ಯ ಎಂದು ಮಕ್ಕಳ ತಜ್ಞರಾದ ಡಾ. ಸ್ನೇಹರೂಪ ಪೂಜಾರ್ ಹೇಳಿದರು.

ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ  ವಿವೇಕ ಪೋಷಕರ ವೇದಿಕೆ ವತಿಯಿಂದ ನಿನ್ನೆ ಏರ್ಪಾಡಾಗಿದ್ದ ಕಾರ್ಯಾಗಾರದಲ್ಲಿ `ಮೌಲ್ಯಾಧಾರಿತ ಜೀವನದಿಂದ  ಸಂಪೂರ್ಣ ಆರೋಗ್ಯ’ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಮಾನವ ಸಂಘ ಜೀವಿ, ಜೀವ ಸಂಕುಲದ ಇತರೆ ಪ್ರಾಣಿಗಳಿಗೆ ಹೋಲಿಸಿದರೆ ಬುದ್ಧಿವಂತ, ಬುದ್ಧಿ ಜೀವಿಯಿಂದ ಕೃತಕ ಬುದ್ಧಿಮತ್ತೆಯವರೆಗೆ ಸಾಗಿರುವ ಈ ಪಯಣದಲ್ಲಿ ಮನುಷ್ಯನ ಸಾಧನೆಗೆ ಮಿತಿ ಇಲ್ಲ. ಆದರೆ ಈ ನಾಗಾಲೋಟದಿಂದ ಮಾನವ ಪಡೆದುಕೊಂಡದ್ದೆಷ್ಟು? ಕಳೆದುಕೊಂಡದ್ದೆಷ್ಟು? ಪಡೆದುಕೊಂಡದ್ದೆಲ್ಲ ಕ್ಷಣಿಕ ಸುಖ ಕೊಟ್ಟು ಮಾಯವಾಗು ವಂತದ್ದು, ಆದರೆ ಕಳೆದುಕೊಂಡದ್ದು ಬೆಲೆ ಕಟ್ಟಲಾರದಂತಹ ಜೀವನ ಮೌಲ್ಯಗಳು ಎಂದು ಅವರು ಹೇಳಿದರು.

ತೋರಿಕೆಯ ಈ ಮಾಯಾ ಪ್ರಪಂಚದಲ್ಲಿ ಪಾಲಕರಾಗಿ ನಾವೆಲ್ಲರೂ ಮಕ್ಕಳಿಗೆ ಕೊಡಬೇಕಾದ ಶಿಕ್ಷಣ ಬಹಳ ಮಹತ್ವದ್ದು. ಈ ಶಿಕ್ಷಣ ಪುಸ್ತಕಗಳಿಗೆ ಸೀಮಿತವಾದುದಲ್ಲ.  ನಾವು ರೂಢಿಸಿ ಕೊಂಡ ಆರೋಗ್ಯವಂತ ಜೀವನ ಶೈಲಿಯೇ ಮಕ್ಕಳಿಗೆ ಮಾದರಿ ಯಾಗಬೇಕು. ನಮ್ಮ ದಿನಚರಿಯ ಮುಖ್ಯ ಅಂಶಗಳಲ್ಲಿ ಪ್ರಾರ್ಥ ನೆ, ಆಹಾರ ಪದ್ಧತಿ, ವ್ಯಾಯಾಮ, ವಿಶ್ರಾಂತಿ, ಸಕಾರಾತ್ಮಕ ಹವ್ಯಾಸಗಳು ಸಹಕಾರಿ ಆಗಿವೆ ಎಂದು ಅವರು ತಿಳಿಸಿದರು.

ನಾವು ಸೇವಿಸುವ ಆಹಾರ ದೇಹವಷ್ಟೇ ಅಲ್ಲ ನಮ್ಮ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ನಾವಿರುವ ಪ್ರದೇಶಕ್ಕೆ, ಕಾಲಕ್ಕೆ ಅನುಗುಣವಾದ   ಸ್ವಚ್ಛ, ಶುದ್ಧ, ಸಾತ್ವಿಕ, ತಾಜಾ ಆಹಾರ ಮತ್ತು ಯಥೇಚ್ಛ ನೀರಿನ ಸೇವನೆಯಿಂದ ಎಷ್ಟೋ ರೋಗಗಳಿಂದ ಮುಕ್ತವಾಗಿರಬಹುದು ಎಂದು ಡಾ. ಸ್ನೇಹರೂಪ ಪೂಜಾರ್ ಕಿವಿಮಾತು ಹೇಳಿದರು.

ವ್ಯಾಯಾಮದಿಂದ ದೇಹ ಮತ್ತು ಮನಸ್ಸೆರಡಕ್ಕೂ ಮುದ ಸಿಗುವುದು. ಕಲುಷಿತ ಹವೆ, ನೀರು, ಆಹಾರದಿಂದ ಹೆಚ್ಚಾಗಿರುವ ಅಲರ್ಜಿ, ಅಜೀರ್ಣತೆ, ನಿದ್ರಾಹೀನತೆ, ನರ ದೌರ್ಬಲ್ಯ ಮುಂತಾದ ಸಮಸ್ಯೆಗಳನ್ನು ಪ್ರಾಣಾಯಾಮ, ಯೋಗಾಸನಗಳಿಂದ ಸಾಕಷ್ಟು ಹತೋಟಿಯಲ್ಲಿಡ ಬಹುದು. ಇವೆಲ್ಲ ಅಂಶಗಳನ್ನು ನಮ್ಮ ದಿನಚರಿಯಲ್ಲಿ ಒಡಗೂಡಿಸಿಕೊಂಡು  ಸರಳ ಜೀವನ ನಡೆಸಿ, ಮುಂದಿನ ಪೀಳಿಗೆಯನ್ನು ಮುನ್ನಡೆಸಬೇಕಾದ ಗುರುತರ ಹೊಣೆಯನ್ನು ಪಾಲಕರು ಹೊರಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ.ಜಿ.ಗುರುಪ್ರಸಾದ್, ಮಕ್ಕಳ ತಜ್ಞರಾದ ಡಾ.ಬಾಣಾಪುರ್ ಮಠ್, ಡಾ.ಶೋಭಾ, ಡಾ.ಎಸ್.ಎಸ್.ಪ್ರಕಾಶ್, ಡಾ.ರೇವಪ್ಪ, ಡಾ.ಮೃತ್ಯುಂಜಯ, ಡಾ.ಕೌಜಲಗಿ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ ಸೇರಿದಂತೆ ಇತರರು ಇದ್ದರು.  

error: Content is protected !!