ಸನಾತನ ಕಾಲದಿಂದಲೂ ಮಹಿಳೆಗೆ ಗೌರವದ ಸ್ಥಾನಮಾನವಿದೆ

ಸನಾತನ ಕಾಲದಿಂದಲೂ ಮಹಿಳೆಗೆ ಗೌರವದ ಸ್ಥಾನಮಾನವಿದೆ

ಕದಳಿ ಮಹಿಳಾ ವೇದಿಕೆಯ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ

ದಾವಣಗೆರೆ, ಮಾ. 20- ಭಾರತಕ್ಕೆ ತನ್ನದೇ ಆದ ಪ್ರಾಚೀನ ಇತಿಹಾಸವಿದೆ. ಸನಾತನ ಕಾಲದಿಂದಲೂ ಮಹಿಳೆಯರನ್ನು ಅತ್ಯಂತ ಗೌರವ ಮತ್ತು ಪೂಜ್ಯ  ಭಾವನೆಯಿಂದ ಕಾಣಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಕದಳಿ ಮಹಿಳಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ 163 ನೇ ಕದಳಿ ಕಮ್ಮಟ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆಯರ ಹಕ್ಕಿಗಾಗಿ ಅಮೆರಿಕಾದಲ್ಲಿ ಉಂಟಾದ ಹೋರಾಟದ ಪ್ರತಿಫಲವಾಗಿ ವಿಶ್ವ ಸಂಸ್ಥೆಯು ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವ ಮಹಿಳಾ ದಿನವನ್ನು ಆಚರಿಸುತ್ತಾ ಬರುತ್ತಿದೆ. ಇದರ ಅಂಗವಾಗಿ ದಾವಣಗೆರೆ ಕದಳಿ ಮಹಿಳಾ ವೇದಿಕೆಯೂ ಸಹ ದತ್ತಿ ಉಪನ್ಯಾಸದ ಜೊತೆಗೆ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಪ್ರಶಂಸನೀಯ ಎಂದರು.

ಕಾಶಿಯಲ್ಲಿ ಶ್ರೀ ವಿಶ್ವನಾಥ ಮಂದಿರವನ್ನು ಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

ಜೀಜಾಬಾಯಿಯಂತವರು ಶಿವಾಜಿ ಮಹಾರಾಜ್ ಅಂತವರನ್ನು, ಭಗತ್ ಸಿಂಗ್ ನಂತಹ  ಸ್ವಾತಂತ್ರ್ಯ ವೀರ ಪುತ್ರನಿಗೆ ಜನ್ಮ ನೀಡಿದ ಭಾರತ ಮಾತೆಯರು ನಿಜಕ್ಕೂ ಧನ್ಯರು ಎಂದು ಹೇಳಿದರು.

12 ನೇ ಶತಮಾನದ ಬಸವಾದಿ ಶಿವಶರಣರ ಕಾಲ ದಲ್ಲಿನ ಅನುಭವ ಮಂಟಪದಲ್ಲಿ ಪುರುಷರಷ್ಟೇ ಸ್ತ್ರೀಯರಿಗೂ ಸರಿ ಸಮಾನತೆಯನ್ನು ಕಲ್ಪಿಸಿಕೊಟ್ಟಿರುವುದನ್ನು ಸ್ಮರಿಸಿದರು.

ಭಾರತ ಸ್ವಾತಂತ್ರ್ಯ ನಂತರ ಸಂವಿಧಾನಾತ್ಮಕವಾಗಿ ಯೂ ಸಹ ಸ್ತ್ರೀ ಪುರುಷರಷ್ಟೇ ಸಮಾನರು ಎಂಬುದಕ್ಕೆ ಭಾರತದ ಅತ್ಯುನ್ನತ ಹುದ್ದೆಗಳಾದ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಎಲ್ಲಾ ರಂಗಗಳಲ್ಲೂ ಸ್ಥಾನಮಾನ ನೀಡಿ ಗೌರವಿಸಿರುವುದನ್ನು ಕಾಣಬಹುದು ಎಂದರು.

`ಶರಣ ಸಾಹಿತ್ಯದಲ್ಲಿ ಮಹಿಳೆಯರ ಸಾಧನೆಗಳು’ ಕುರಿತು ಮಾತನಾಡಿದ ದತ್ತಿ ಅನುಭಾವಿಗಳಾದ ಉಮಾ ಶ್ರೀನಿವಾಸ್ ಅವರು, ಹನ್ನೆರಡನೇ ಶತಮಾನದಲ್ಲಿನ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಅತ್ಯಂತ ಗೌರವದ ಸ್ಥಾನ ಇತ್ತು. ಸಮಾನತೆಯನ್ನು ಕಲ್ಪಿಸಿಕೊಡಲಾಗಿತ್ತು. ಶರಣ ಸಾಹಿತ್ಯದಲ್ಲಿ ಮಹಿಳೆ ತನ್ನದೇ ಆದ ಛಾಪು ಮೂಡಿಸಿದ್ದಳು. ಶರಣ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ದತ್ತಿ ಅನುಭಾವಿಗಳಾದ ಉಮಾ ಶ್ರೀನಿವಾಸ್ ಹೇಳಿದರು.

ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಸಲಾಡ್ ಸ್ಪರ್ಧೆ, ಭಾವಗೀತೆ, ಶರಣೆಯರ ಅಂಕಿತನಾಮ ಜೋಡಣೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನಿರ್ಮಲ ವಾಲಿ, ಮಮತಾ ಮಧು, ಉಮಾ ಮಹಾದೇವ್, ಉಮಾ ಶ್ರೀನಿವಾಸ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಕದಳಿ ಮಹಿಳಾ ವೇದಿಕೆ ರಾಜ್ಯ ಉಪ ಸಂಚಾಲಕ ರಾದ ಪ್ರಮೀಳಾ ನಟರಾಜ್ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮಹತ್ವ ಕುರಿತು ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಕದಳಿ ವೇದಿಕೆ ಜಿಲ್ಲಾಧ್ಯಕ್ಷರಾದ ಗಾಯತ್ರಿ ವಸ್ತ್ರದ್, ತಾಲ್ಲೂಕು ಘಟಕದ ಅಧ್ಯಕ್ಷರಾದ ಮಮತಾ ನಾಗರಾಜ್, ದತ್ತಿ ದಾನಿಗಳಾದ ಬುಳ್ಳಾಪುರದ ಮಲ್ಲಿಕಾರ್ಜುನಪ್ಪ  ಮತ್ತಿತರರು ಉಪಸ್ಥಿತರಿದ್ದರು.

ನಂದಿನಿ ಗಂಗಾಧರ್ ಸ್ವಾಗತಿಸಿದರು. ನಿರ್ಮಲ ನಿರೂಪಿಸಿದರು. ವಿಜಯ ಚಂದ್ರಶೇಖರ್ ಅತಿಥಿಗಳನ್ನು ಪರಿಚಯಿಸಿದರು. 

ಕದಳಿ ವೇದಿಕೆ ಜಿಲ್ಲಾ ಕಾರ್ಯದರ್ಶಿ ಚಂದ್ರಿಕಾ ಮಂಜುನಾಥ್ ಬಹುಮಾನ ವಿತರಿಸಿದರು. ವಿಜಯಲಕ್ಷ್ಮಿ ವಂದಿಸಿದರು. 

error: Content is protected !!