ವರ್ಣರಂಜಿತ ಸಂಭ್ರಮಕ್ಕೆ ಸಾಕ್ಷಿಯಾದ ಜಿಲ್ಲಾ ಕವಾಯತು ಮೈದಾನ
ದಾವಣಗೆರೆ, ಮಾ.18- ಜಿಲ್ಲಾ ಪೊಲೀಸ್ ಕವಾಯತು ಮೈದಾನವು ಮಂಗಳವಾರ ವರ್ಣರಂಜಿತ ಸಂಭ್ರಮಕ್ಕೆ ಸಾಕ್ಷಿಯಾಯಿತು. ಜಿಲ್ಲಾ ಪೊಲೀಸ್ ಇಲಾಖೆಯು ಮೊದಲ ಬಾರಿಗೆ ಆಯೋಜಿಸಿದ್ದ ‘ಪೊಲೀಸ್ ಹೋಳಿ’ ಬಣ್ಣದಾಟವು ಅಧಿಕಾರಿಗಳು ಮತ್ತು ಸಿಬ್ಬಂದಿಯ ಉತ್ಸಾಹವನ್ನು ಇಮ್ಮಡಿಗೊಳಿಸಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ಬಣ್ಣ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹೋಳಿ ಹಬ್ಬದ ಬಂದೋಬಸ್ತ್‌ನಲ್ಲಿ ಹಗಲಿರುಳು ಶ್ರಮಿಸಿದ ಸಿಬ್ಬಂದಿಗೆ ವಿಶ್ರಾಂತಿ ಮತ್ತು ಮನಸ್ಸಿಗೆ ಮುದ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕರ್ತವ್ಯದ ಒತ್ತಡವನ್ನು ಮರೆತು ಅಧಿಕಾರಿಗಳು ಮತ್ತು ಸಿಬ್ಬಂದಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಡಿಜೆ ಸಂಗೀತದ ನಾದಕ್ಕೆ ಮೈಮರೆತ ಸಿಬ್ಬಂದಿ ಕುಣಿದು ಕುಪ್ಪಳಿಸಿದರು. ಸ್ವತಃ ಎಸ್ಪಿ ಉಮಾ ಪ್ರಶಾಂತ್ ಅವರು ಸಹ ಸಿಬ್ಬಂದಿಯೊಂದಿಗೆ ನೃತ್ಯ ಮಾಡಿ ಎಲ್ಲರನ್ನೂ ಹುರಿದುಂಬಿಸಿದರು. ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಇಟ್ನಾಳ್ ಸಹ ಆಗಮಿಸಿ ಅಧಿಕಾರಿಗಳಿಗೆ ಬಣ್ಣ ಹಚ್ಚಿ ಸಂಭ್ರಮದಲ್ಲಿ ಪಾಲ್ಗೊಂಡರು.
ಹೋಳಿ ಹಬ್ಬದ ಶಾಂತಿಯುತ ಆಚರಣೆಗೆ ಶ್ರಮಿಸಿದ ಪೊಲೀಸ್ ಸಿಬ್ಬಂದಿಯ ಪರಿಶ್ರಮವನ್ನು ಉಮಾ ಪ್ರಶಾಂತ್ ಅವರು ಶ್ಲಾಘಿಸಿದರು.
ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದ್ದರಿಂದ ಎಲ್ಲರೂ ಸಂತೋಷ ಪಡುತ್ತಿದ್ದೇವೆ. ಹೋಳಿ ಆಡುವುದು ಒಂದು ಸಂಪ್ರದಾಯ. ಹೋಳಿ ಆಡಿದ ನಂತರ ನಮ್ಮೆಲ್ಲ ಆಸಾಯ ಮಾಯವಾಗಿದೆ ಎಂದು ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ್ ಹೇಳಿದರು.