ದಾವಣಗೆರೆ, ಮಾ.18- ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಗರದ ಎಂಬಿಎ ಕಾಲೇಜ್ ಸಭಾಂಗಣದಲ್ಲಿ, ಬಾಪೂಜಿ ಶಿಕ್ಷಣ ಸಂಸ್ಥೆಗಳ ಮಹಿಳಾ ಸಿಬ್ಬಂದಿ ವರ್ಗದವರಿಗಾಗಿ ಆಯೋಜಿಸಿದ್ದ `ಮಿಸ್ ಪಾರ್ವತಿ’ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಆಯ್ಕೆಯಾದ 40 ಮಹಿಳಾ ಸ್ಪರ್ಧಿಗಳು ಫ್ರೀ ಫಿನಾಲೆ ರೌಂಡ್‌ನ ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ಆಕರ್ಷಕ ರ‍್ಯಾಂಪ್ ವಾಕ್ ನಡೆಸಿಕೊಟ್ಟರು.
`ಹೂವುಗಳ ಸೌಂದರ್ಯ’ಎಂಬ ಪರಿಕಲ್ಪನೆ ಅಡಿಯಲ್ಲಿ ಬಣ್ಣ ಬಣ್ಣದ ಹೂವುಗಳ ಚಿತ್ತಾರ ಇರುವ ಸೀರೆಗಳನ್ನು, ವಿವಿಧ ಶೈಲಿಯ ಉಡುಗೆಗಳನ್ನು ಧರಿಸಿ, 21 ರಿಂದ 55 ವಯಸ್ಸಿನ ವರೆಗಿನ ಹೆಂಗಳೆಯರು ತಮ್ಮದೇ ಆದ ವಿಭಿನ್ನವಾದ ಶೈಲಿಯಲ್ಲಿ ಹೆಜ್ಜೆ ಹಾಕಿದ್ದು ಬಹು ಆಕರ್ಷಕವಾಗಿತ್ತು, ಹಾಗೆಯೇ `ಮಹಿಳೆ ಹಾಗೂ ಅವಳ ಹಕ್ಕುಗಳು, ಸಮಾಜದಲ್ಲಿ ಮಹಿಳೆಯರ ಪಾತ್ರ’ ಮುಂತಾದ ವಿಷಯಗಳಿಗೆ ನಿರ್ಣಾಯಕರ ಪ್ರಶ್ನೆಗಳಿಗೆ ಮನಮುಟ್ಟುವ ಉತ್ತರ ನೀಡಿದ ಹಲವು ಸ್ಪರ್ಧಿಗಳಿಗೆ ಪ್ರೇಕ್ಷಕರಿಂದ ಜೋರಾದ ಚಪ್ಪಾಳೆಯ ಸ್ವಾಗತ ದೊರೆಯಿತು.
ಬಾಪೂಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರೂ ಆದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಯ ಮಹಿಳೆಯರಿಗೆ ವಿವಿಧ ರೀತಿಯ ಹೊಸ ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಈ ‘ಮಿಸ್ ಪಾರ್ವತಿ’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
`ಮಿಸ್ಸೆಸ್ ಪರ್ಸೋನಾ ಯುನಿವರ್ಸ್- 2022′ ಆಗಿ ಆಯ್ಕೆಯಾಗಿರುವ ಬೆಂಗಳೂರಿನ ಉದ್ಯಮಿ ಶ್ರೀಮತಿ ಹೇಮಾ ನಿರಂಜನ್ ಹಾಗೂ ಚಿತ್ರದುರ್ಗದ ಖ್ಯಾತ ಭರತನಾಟ್ಯ ಗುರು ಡಾ. ನಂದಿನಿ ಶಿವಪ್ರಕಾಶ್ ತೀರ್ಪಗಾರರಾಗಿ ಆಗಮಿಸಿದ್ದರು. ಡಾ.ಶಶಿಕಲಾ ಕೃಷ್ಣಮೂರ್ತಿ, ಡಾ. ರೂಪಶ್ರೀ, ಶ್ರೀಮತಿ ಕಮಲಾ ಸೊಪ್ಪಿನ್, ಡಾ. ವಿನುತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು