ಸ್ಮಾರ್ಟ್ ಜನರಿಗೆ ‘ಆಸ್ತಿ ತೆರಿಗೆ’ ಹೆಚ್ಚಳದ ಬರೆ

ಸ್ಮಾರ್ಟ್ ಜನರಿಗೆ ‘ಆಸ್ತಿ ತೆರಿಗೆ’ ಹೆಚ್ಚಳದ ಬರೆ

ಸಾಮಾನ್ಯ ಸಭೆಯಲ್ಲಿ ವಿರೋಧಿಸಿದ್ದರೂ ತೆರಿಗೆ ಹೆಚ್ಚಳ, ಮಾಜಿ ಸದಸ್ಯರ ಅಸಮಾಧಾನ

ದಾವಣಗೆರೆ, ಮಾ.7- ಮಹಾನಗರ ಪಾಲಿಕೆಯಿಂದ ಶೇ.3ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಹಲವು ರೀತಿಯ ದರ ಏರಿಕೆಯಿಂದ ಕಂಗಾಲಾಗಿದ್ದ ಜನತೆ ಇದೀಗ ಪಾಲಿಕೆ ಆಯುಕ್ತರು ನೀಡಿರುವ ತೆರಿಗೆ ಹೆಚ್ಚಳದ ಶಾಕ್‌ ತಡೆದುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಆಸ್ತಿ ತೆರಿಗೆಯು ನಗರ ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಪಡಿಸಲು ಬಹುಮುಖ್ಯ ಆದಾಯದ ಮೂಲವೂ ಹೌದು. ಹೀಗಾಗಿ ಕಾಯ್ದೆಗಳಲ್ಲಿ ತಿದ್ದುಪಡಿ ಆಗಿರುವ ಅಂಶಗಳನ್ನು ಪರಿಗಣಿಸಿ ‘ಪ್ರಸಕ್ತ ಸಾಲಿನಲ್ಲಿ ಇರುವ ಆಸ್ತಿ ತೆರಿಗೆಯ ಬೇಡಿಕೆಗಿಂತ ಕಡಿಮೆಯಾಗದ ರೀತಿಯಲ್ಲಿ’ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ತೆರಿಗೆ ವಿಧಿಸಲು ಸರ್ಕಾರದ ಆದೇಶವಿದೆ.

2023ರಲ್ಲಿ ರಾಜ್ಯ ಸರ್ಕಾರವು ಮಾರುಕಟ್ಟೆ ದರಗಳನ್ನು ಪರಿಷ್ಕರಿಸಿತ್ತು. ಹೊಸ ಮಾರ್ಗಸೂಚಿ ದರವನ್ನು  ಅಳವಡಿಸಿದ ಕಾರಣದಿಂದ ವಾಸ್ತವ್ಯ, ವಾಣಿಜ್ಯ, ವಾಸ್ತವ್ಯೇತರ, ಖಾಲಿ ನಿವೇಶನದ ತೆರಿಗೆ ದರಗಳ ಶ್ರೇಣಿ ಕಳೆದ ಬಾರಿಗಿಂತ ಮೂರುಪಟ್ಟು ಹೆಚ್ಚಾಗಿತ್ತು. ಇದು ಸಾರ್ವಜನಿಕರಿಗೆ ತೆರಿಗೆ ಹೊರೆ ಸೃಷ್ಟಿಸಿತ್ತು.

ಆದರೆ, ಎರಡು ವರ್ಷಗಳ ಹಿಂದೆ ಆಸ್ತಿಗಳ ಎಸ್‌.ಆರ್. ದರ ಹೆಚ್ಚಳವಾಗಿ, ತೆರಿಗೆ ಹೆಚ್ಚಳವಾಗಿರುವುದನ್ನೇ ಆಸ್ತಿ ಮಾಲೀಕರು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರ ಜೊತೆ ಮತ್ತೆ ಶೇ.3ರಷ್ಟು ಆಸ್ತಿ ತೆರಿಗೆ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಹಾಕಿದಂತಾಗಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1.75 ಲಕ್ಷ ಆಸ್ತಿಗಳಿವೆ. ಇತ್ತೀಚೆಗೆ ನಡೆದ ಮಹಾನಗರ  ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೆರಿಗೆ ಹೆಚ್ಚಳ ಕುರಿತ ಆಯುಕ್ತರ ಹೆಚ್ಚಳ ಪ್ರಸ್ತಾವಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ವಿರೋಧಿಸಿದ್ದರು. ಆದಾಗ್ಯೂ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದು ಮಾಜಿ ಸದಸ್ಯರ ತೀವ್ರ ಅಸಮಾಧಾನಕ್ಕೂ ಕಾರಣವಾಗಿದೆ.

ಕಳೆದ ಸಾಮಾನ್ಯ ಸಭೆಯಲ್ಲಿ ಶೇ.2.5 ರಿಂದ ಶೇ.5ರಷ್ಟು ತೆರಿಗೆಯನ್ನು ಸರ್ಕಾರದ ಆದೇಶದಂತೆ ಹೆಚ್ಚಿಸಲೇಬೇಕಾಗುತ್ತದೆ. ಇಲ್ಲದಿದ್ದರೆ, ಸರ್ಕಾರಕ್ಕೆ ಉತ್ತರಿಸಬೇಕಾಗುತ್ತದೆ ಎಂದು ಆಯುಕ್ತರು ಹೇಳಿದ್ದರು. ಏನೇ ಆಗಲಿ, ಜನರಿಗೆ ಹೊರೆ ಮಾಡುವುದು ಬೇಡ. ತೆರಿಗೆ ಹೆಚ್ಚಳಕ್ಕೆ ನಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದ್ದೆ ವು. ಆದಾಗ್ಯೂ ಇದೀಗ ತೆರಿಗೆ ಹೆಚ್ಚಿಸಿ ಆದೇಶಿಸಲಾಗಿದೆ ಎಂದು ಪಾಲಿಕೆ ಮಾಜಿ ಮೇಯರ್ ಎಸ್.ಟಿ. ವೀರೇಶ್  ಅಸಮಾಧಾನ ಹೊರ ಹಾಕಿದ್ದಾರೆ.

2021-22ರಲ್ಲಿ ನಾವು ವಿರೋಧ ಪಕ್ಷದಲ್ಲಿದ್ದಾಗಲೂ ಜನರಿಗೆ ಹೊರಯಾಗಬಾರ ದೆಂಬ ಉದ್ದೇಶದಿಂದ ತೆರಿಗೆ ಹೆಚ್ಚಳ ವಿರೋಧಿಸಿ ದ್ದೆವು. ಇತ್ತೀಚೆಗೆ ಆಡಳಿತ ಪಕ್ಷದಲ್ಲಿದ್ದಾಗಲೂ ವಿರೋಧಿಸಿದ್ದೇವೆ. ಪಕ್ಷಾತೀತ ವಿರೋಧದ ನಡುವೆಯೂ ಆಯುಕ್ತರು ತೆರಿಗೆ ಹೆಚ್ಚಿಸಿರುವ ಕ್ರಮ ಕುರಿತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಗಮನಕ್ಕೆ ತರುತ್ತೇವೆ ಎಂದು ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ್ ಹೇಳಿದ್ದಾರೆ.

error: Content is protected !!