ಮುನ್ನೆಚ್ಚರಿಕೆ ಕ್ರಮವಾಗಿ ಎಸ್‍ಓಪಿ ಅಳವಡಿಕೆ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ
ದಾವಣಗೆರೆ, ಮಾ. 4- ಕೋಳಿಶೀತ ಜ್ವರ (ಹಕ್ಕಿ ಜ್ವರ)ವು ಹೆಚ್5ಎನ್1 ವೈರಸ್‌ನಿಂದ ಪಕ್ಷಿಗಳಿಗೆ ಹರಡುವ ಕಾಯಿಲೆಯಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಸಾಂಕ್ರಾಮಿಕವಾಗಿ ಹರಡುವುದಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ, ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಎಸ್‍ಓಪಿ ಅಳವಡಿಸಲು ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋಳಿ ಶೀತ ಜ್ವರಕ್ಕೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಮಾನ್ಯವಾಗಿ ಶೀತಲ ಪ್ರದೇಶದ ವಲಸೆ ಹಕ್ಕಿಗಳು ವಂಶಾಭಿವೃದ್ಧಿಗಾಗಿ ಬಂದಾಗ ಹಿಕ್ಕೆ, ಪುಕ್ಕ ಹಾಗೂ ಬಾಯಿ ಮತ್ತು ಕಣ್ಣಿನಿಂದ ಹೊರ ಬರುವ ಸ್ರವಿಕೆಯಿಂದ ಕಾಯಿಲೆ ಹರಡುವ ಸಂಭವವಿದ್ದು, ಪಕ್ಷಿಗಳಿಗೆ ರೋಗವು ಹರಡುತ್ತದೆ ಎಂದು ತಿಳಿಸಿದರು.
ಇದು ಬಳ್ಳಾರಿ ಜಿಲ್ಲೆಯಲ್ಲಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಕುಕ್ಕುಟ ಸಂವರ್ಧನಾ ಕೇಂದ್ರದಲ್ಲಿ ಸಾಕಾಣಿಕೆ ಮಾಡಿದ ಅಸಿಲ್ ಮತ್ತು ಕಾವೇರಿ ತಳಿಯ ಕೋಳಿಗಳಿಗೆ ಫೆಬ್ರವರಿ 23 ರಂದು ಕೋಳಿ ಶೀತ ಜ್ವರ ರೋಗದ ಲಕ್ಷಣ ಕಂಡುಬಂದು ಕೆಲವು ಕೋಳಿಗಳು ಮರಣ ಹೊಂದಿದ್ದವು. ಪರೀಕ್ಷೆಗಾಗಿ ಭೋಪಾಲ್‍ನ ರಾಷ್ಟ್ರೀಯ ಹೈ ಸೆಕ್ಯುರಿಟಿ ಪ್ರಾಣಿ ರೋಗಗಳ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಸಂಸ್ಥೆಯು ಕೋಳಿ ಶೀತ ಜ್ವರವೆಂದು ದೃಢೀಕರಿಸಿರುತ್ತದೆ. ಇದಕ್ಕಾಗಿ ಬಳ್ಳಾರಿಯಿಂದ ಹಾಗೂ ಚಿಕ್ಕಬಳ್ಳಾಪುರದಿಂದ ದಾವಣಗೆರೆಗೆ ಸಾಗಾಣಿಕೆಯಾಗುವ ಕೋಳಿಗಳನ್ನು ನಿರ್ಬಂಧಿಸಲು ಚೆಕ್ ಪೋಸ್ಟ್ ಗಳನ್ನು ಸ್ಥಾಪನೆ ಮಾಡಿ ಸಂಪೂರ್ಣ ನಿಗಾವಹಿಸಲು ಮತ್ತು ಎಲ್ಲಿಯಾದರೂ ಹಕ್ಕಿಗಳು ಮರಣ ಹೊಂದಿದಲ್ಲಿ, ತಕ್ಷಣ ಮಾಹಿತಿ ನೀಡಲು ಸಹಾಯವಾಣಿ ಸ್ಥಾಪಿಸಲಾಗುತ್ತಿದೆ ಎಂದರು.
ಬಳ್ಳಾರಿ, ಚಿಕ್ಕಬಳ್ಳಾಪುರದಿಂದ ಸಾಗಾಣಿಕೆಯಾಗುವ ಕೋಳಿಗಳನ್ನು ನಿರ್ಬಂಧಿಸಲು ಚೆಕ್ ಪೋಸ್ಟ್ ಸ್ಥಾಪನೆ
ಹಕ್ಕಿಗಳು ಮರಣ ಹೊಂದಿದರೆ ಮಾಹಿತಿ ನೀಡಲು ಸಹಾಯವಾಣಿ ಸ್ಥಾಪನೆ
ಬೇಯಿಸಿ ನಂತರ ಸೇವಿಸಿ
ಸಾರ್ವಜನಿಕರು ಮಾಂಸ ಮತ್ತು ಮೊಟ್ಟೆಗಳನ್ನು 70 ಡಿಗ್ರಿ ಅಧಿಕ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷ ಬೇಯಿಸಿದಾಗ ವೈರಾಣು ನಾಶಗೊಳ್ಳುತ್ತದೆ. ಹಾಗಾಗಿ ಸಾರ್ವಜನಿಕರು ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿದ ನಂತರ ಸೇವನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 172 ಮಾಂಸದ ಕೋಳಿ ಫಾರಂಗಳಲ್ಲಿ 97 ಕಾರ್ಯನಿರ್ವಹಿಸುತ್ತಿದ್ದು ಇವುಗಳಲ್ಲಿ 498825 ಅಂದಾಜು ಬ್ರಾಯ್ಲರ್ ಕೋಳಿಗಳಿವೆ. ಹಾಗೂ 31 ಮೊಟ್ಟೆ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ 2473435 ಕೋಳಿಗಳಿವೆ. ಈ ಕೇಂದ್ರಗಳಲ್ಲಿ ಕೋಳಿಗಳು ಮರಣ ಹೊಂದಿದಲ್ಲಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಎಲ್ಲಾ ಫಾರಂಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಯಾವುದೇ ಫಾರಂಗಳಲ್ಲಿ ಕೋಳಿಗಳು ಮರಣ ಹೊಂದಿದಲ್ಲಿ ತಕ್ಷಣ ಪಶುಸಂಗೋಪನಾ ಇಲಾಖೆ ಗಮನಕ್ಕೆ ತಂದು, ಈ ಹಕ್ಕಿಜ್ವರ ಹರಡದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ್ ಬಿ.ಇಟ್ನಾಳ್ ಮಾತನಾಡಿ, ಜಿಲ್ಲೆಯಲ್ಲಿ ಕೋಳಿ, ಬಾತುಕೋಳಿ, ವಲಸೆ ಬರುವ ಹಕ್ಕಿಗಳಲ್ಲಿ ಅಸಹಜ ಸಾವು ಉಂಟಾದಲ್ಲಿ ಕೂಡಲೇ ಹತ್ತಿರದ ಪಶು ವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಬೇಕು. ಕೋಳಿ ಶೀತ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟ ಅಂಗಡಿಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಮಹೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.