ದಾವಣಗೆರೆ, ಮಾ. 3 – ಸಮುದಾಯದ ಏಳಿಗೆ, ಬದಲಾವಣೆ ಕೇವಲ ಒಬ್ಬಿಬ್ಬರಿಂದ ಆಗಲು ಸಾಧ್ಯವಿಲ್ಲ. ಎಲ್ಲರೂ ಸೇರಿದಾಗ ಮಾತ್ರ ಅಭಿವೃದ್ದಿ ಸಾಧ್ಯ. ನಮ್ಮ ಹಿರಿಯರು ಹೇಳುವಂತೆ ಎಲ್ಲರೂ ಸೇರಿಕೊಂಡು ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ನಮ್ಮ ಸಮುದಾಯದ ಶಕ್ತಿ ಎಲ್ಲ ರಾಜಕಾರಣಿಗಳಿಗೆ, ಸರ್ಕಾರಗಳಿಗೆ, ಪ್ರಮುಖರಿಗೆ ಗೊತ್ತಾಗಲಿದೆ ಎಂದು ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಬಸವ ಮಾಚಿದೇವ ಸ್ವಾಮೀಜಿ ಕರೆ ನೀಡಿದರು.
ನಗರದ ಹೊರವಲಯದಲ್ಲಿ ಜಿಲ್ಲಾ ಪಂಚಾಯತ್ ಕಛೇರಿ ಸಮೀಪ ಇರುವ ಮಡಿಕಟ್ಟೆಯಲ್ಲಿ ನೂತನವಾಗಿ ಅಳವಡಿಸಿರುವ ಬಟ್ಟೆ ತೊಳೆಯುವ ಆಧುನಿಕ ಯಂತ್ರಗಳ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸಮಾಜದ ಬಂಧುಗಳೆಲ್ಲ ಒಂದೆಡೆ ಸೇರು ವುದರಿಂದ ಒಗ್ಗಟ್ಟು ಬರುತ್ತದೆ. ನಮ್ಮ ಸಮೂಹಕ್ಕೆ, ನಮ್ಮ ವ್ಯವಸ್ಥೆಗೆ ಬಲ ಬಂದಂತೆ ಆಗುತ್ತದೆ. ಪದಾಧಿಕಾರಿಗಳೆಂದರೆ ಕೇವಲ ಅಧಿಕಾರಕ್ಕಾಗಿ ಮಾತ್ರ ಅಲ್ಲ ಹಾಗೂ ಸಮಾರಂಭಗಳಿಗೆ ಕೇವಲ ಪದಾಧಿಕಾರಿಗಳು ಸೇರುವುದು ಅಲ್ಲ. ಅವು ಕೇವಲ ನಿರ್ವಹಣೆ ಮಾಡುವ ಸಲುವಾಗಿ ನೇಮಕ ಮಾಡಿದೆ. ಅವರ ಜೊತೆಗೆ ನಾವು ಸಹಕಾರ ನೀಡಬೇಕಿದೆ ಎಂದು ಹೇಳಿದರು.
ಮಡಿಕಟ್ಟೆಯಲ್ಲಿ ವೃತ್ತಿಪರರಿಗೆ ಅನುಕೂಲ ಆಗಲಿ ಎನ್ನುವ ನಿಟ್ಟಿನಲ್ಲಿ ಎಲ್ಲಾ ಮುಖಂಡರು ಕೆಲಸ ಮಾಡಿದ್ದಾರೆ. ಆಧುನಿಕ ಬಟ್ಟೆ ತೊಳೆಯುವ ಯಂತ್ರಗಳು ಇದೀಗ ದಾವಣಗೆರೆಗೆ ಬಂದಿವೆ. ಇದರಿಂದ ನಿಮ್ಮ ಕಷ್ಟ ದೂರಾಗಲಿದೆ. ಮುಂದಿನ ಪೀಳಿಗೆ ತೊಟ್ಟಿಯಲ್ಲಿ ನಿಂತು ಬಟ್ಟೆ ತೊಳೆಯಲು ಮುಂದೆ ಬರಲ್ಲ. ಈಗಾಗಲೇ ನಮ್ಮ ಸಮಾಜದಲ್ಲಿ ತೊಟ್ಟಿಯಲ್ಲಿ ನಿಂತು ಬಟ್ಟೆ ತೊಳೆಯುವ ಸಂಸ್ಕೃತಿ ದೂರಾಗಿ, ವಾಷಿಂಗ್ ಮಿಷಿನ್ ಹಾಕಿಕೊಳ್ಳುವತ್ತ ಸಾಗುತ್ತಿದ್ದಾರೆ. ಉದ್ಯಮಿಗಳು ಆಧುನಿಕ ಯಂತ್ರಗಳತ್ತ ಹೋಗುತ್ತಿದ್ದಾರೆ. ಆದರೆ, ಅವುಗಳ ಸದುಪಯೋಗವನ್ನು ನಾವು ಪಡೆಯಬೇಕು ಎಂದು ಹೇಳಿದರು.
ನಮ್ಮ ಸಮಾಜದ ಉದ್ಯಮ ಲಾಭದಾಯಕ ವಾಗಿದ್ದು, ಅದರತ್ತ ನಾವು ಸಾಗಬೇಕಿದೆ. ಹಳೇ ಕಥೆ ಬಿಟ್ಟು, ಆಧುನಿಕತೆಯತ್ತ ನಾವು ಸಾಗಬೇಕಾಗಿದೆ. ಪರಿಶ್ರಮ ಪಟ್ಟರೆ ಲಾಭವಿದೆ. ಹಿಂದಿನ ವ್ಯವಸ್ಥೆಯನ್ನು ನಿಧಾನವಾಗಿ ಕೈ ಬಿಡಬೇಕಾಗಿದೆ. ವಸತಿ ಸಚಿವ ಜಮೀರ್ ಅಹಮ್ಮದ್‌ರನ್ನು ಭೇಟಿ ಮಾಡಿ ಮಡಿಕಟ್ಟೆ ಸಮಿತಿಯ ಸದಸ್ಯರಿಗೆ ವಸತಿ ಸಮುಚ್ಛಯ ನಿರ್ಮಿಸಲು ಮುಂದಾಗಬೇಕಿದೆ. ಎಲ್ಲರೂ ಸಮನಾಗಿ ದುಡಿದು ಮುಂದೆ ಬನ್ನಿ, ಮನೆಯಲ್ಲಿ ಸುಮ್ಮನೆ ಕುಳಿತವರನ್ನು ಕರೆದುಕೊಂಡು ಬಂದು ದುಡಿಮೆಗೆ ಹಚ್ಚಿದರೆ ಸ್ವಾವಲಂಬಿಗಳಾಗಲು ಸಾಧ್ಯ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕಟ್ಟೆ ಅಧ್ಯಕ್ಷ ಕಿಶೋರ್‌ಕುಮಾರ್ ವಹಿಸಿದ್ದರು. ಈ ವೇಳೆ ಮಡಿಕಟ್ಟೆಯ ವೃತ್ತಿಪರ ಮಡಿವಾಳರ ಸಂಘದ ಪದಾಧಿಕಾರಿಗಳು ಇದ್ದರು.