ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ಸೂಚನೆ
ದಾವಣಗೆರೆ, ಮಾ. 3- ಬೇಸಿಗೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಜಾಗೃತಿಯಿಂದ ಕಾರ್ಯನಿರ್ವಹಿಸಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಿನ್ನೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಬೇಸಿಗೆ ಆರಂಭವಾಗಿದ್ದು, ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಅಧಿಕಾರಿಗಳು ಸಮರ್ಥವಾಗಿ ಕೆಲಸ ನಿರ್ವಹಿಸಬೇಕು. ನಿರ್ಲಕ್ಷೆ ತೋರಿದರೆ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲ್ಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಬತ್ತಿ ಹೋಗುವ ಸಂಭವ ಹೆಚ್ಚಿರುತ್ತದೆ. ಕೆಲವೆಡೆ ನೀರು ಕಲುಷಿತಗೊಂಡು ಕುಡಿಯಲು ಯೋಗ್ಯ ಇರುವುದಿಲ್ಲ. ಹೀಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ತಜ್ಞರ ಸಲಹೆ ಪಡೆದು ಕೊಳವೆ ಬಾವಿಗಳ ಸಮೀಪ ಕಮಾನು ಮಾದರಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ಪಿಡಿಒಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಶಾಸಕರು ತಾಕೀತು ಮಾಡಿದರು.
ಕಳೆದ 2023ರಲ್ಲಿ ಬರಗಾಲ ಸಂಭವಿಸಿ ತಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿನ ಭಾರೀ ಸಮಸ್ಯೆ ತಲೆದೋರಿತ್ತು. 2024ರಲ್ಲಿ ಉತ್ತಮ ಮಳೆಯಿಂದ ನೀರಿನ ಸಮಸ್ಯೆ ಕ್ಷೀಣಿಸಿತು. ಆದರೆ ಬೇಸಿಗೆ ಕಾಲ ಆರಂಭವಾಗುವ ಪೂರ್ವದಲ್ಲಿಯೇ ಭಾರೀ ಬೇಸಿಗೆ ಬಿಸಿಲು ಪ್ರಾರಂಭವಾಗಿದೆ. ಕ್ಷೇತ್ರದ ಕೆಲವು ಹಳ್ಳಿಗಳಲ್ಲಿ ಅಂತರ್ಜಲ ಬತ್ತಿ ಹೋಗುತ್ತಿದ್ದು, ಮುಂದೆ ಕುಡಿಯುವ ನೀರಿನ ಸಮಸ್ಯೆ ಮತ್ತೆ ಉದ್ಭವಿಸಬಹುದು ಎಂದು ನಾನು ಭೇಟಿ ನೀಡುವ ವೇಳೆ ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಜೆಜೆಎಂ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಕಳಪೆ ಆಗಿವೆ. ಸರಿಯಾಗಿ ಜನರಿಗೆ ನೀರು ಸಿಗುತ್ತಿಲ್ಲ. ಎಲ್ಲಿ ಅವ್ಯವಸ್ಥೆ ಆಗಿದೆಯೋ ಅಲ್ಲಿ ಸರಿಪಡಿಸುವ ಕೆಲಸ ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟರ ಕಾಲೋನಿಗಳಲ್ಲಿ ಈ ಯೋಜನೆಯಡಿ ನೀರು ಬರುತ್ತಿಲ್ಲ ಎಂದು ಭೇಟಿ ನೀಡಿದಾಗ ದೂರುಗಳು ಬರುತ್ತಿವೆ. ಹೀಗಾಗಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡಬಾರದು. ಯಾರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೋ ಅವರಿಗೆ ಬಿಲ್ ಪಾವತಿ ಮಾಡುವಂತೆ ಸೂಚನೆ ನೀಡಿದರು.
ಹಳೆಯ ಬಿಲ್ ಪಾಸ್ ಮಾಡಿ : ಕಳೆದ ಸಾಲಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಬೋರ್ ವೆಲ್ ಕೊರೆಸಿದವರಿಗೆ ಇನ್ನು ಬಿಲ್ ಪಾವತಿ ಮಾಡಿಲ್ಲವೆಂದು ನಮಗೆ ಮನವಿ ಮಾಡಿದ್ದಾರೆ. ಅವರಿಗೆ ಕೂಡಲೇ ಬಿಲ್ ಪಾಸ್ ಮಾಡುವಂತೆ ಶಾಸಕ ಬಸವಂತಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಷಣ್ಮುಖಪ್ಪ, ಎಂಜಿನಿಯರ್ ಲೋಹಿತ್, ರಾಜೀವ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.