ಬೇಸಿಗೆ ವಿನಾಯ್ತಿ ನಿರೀಕ್ಷೆಯಿದ್ದವರಿಗೆ ನಿರಾಸೆ
242 ಪ್ರಕರಣ, 1.21 ಲಕ್ಷ ರೂ. ದಂಡ ವಸೂಲಿ
ದಾವಣಗೆರೆ, ಮಾ.2- ಕಳೆದೊಂದು ವಾರದಿಂದ ನಗರದಲ್ಲಿ ಹೆಲ್ಮೆಟ್ ಹಾಕದವರು ಹಾಗೂ ಅರ್ಧ ಹೆಲ್ಮೆಟ್ ಹಾಕಿದವರಿಗೆ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ ಎಚ್ಚರಿಕೆ ನೀಡುತ್ತಿದ್ದ ಪೊಲೀಸರು ಕೊನೆಗೂ ಸೋಮವಾರ ದಂಡದ ಬಿಸಿ ಮುಟ್ಟಿಸಿದ್ದಾರೆ.
ದಾವಣಗೆರೆ ದಕ್ಷಿಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ 162 ಪ್ರಕರಣಗಳನ್ನು ದಾಖಲಿಸಿ, 81 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಪಿಎಸ್‌ಐ ಶೈಲಜಾ ಹೇಳಿದರೆ, ಉತ್ತರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ 80 ಪ್ರಕರಣ ದಾಖಲಿಸಿ 40 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಪಿಎಸ್‌ಐ ಮಂಜಪ್ಪ ತಿಳಿಸಿದ್ದಾರೆ.
ಕೆಲವು ದಿನಗಳಿಂದ ದ್ವಿಚಕ್ರವಾಹನ ಸವಾರರಿಂದ ಅರ್ಧ ಹಾಗೂ ಕಳಪೆ ಗುಣ ಮಟ್ಟದ ಹೆಲ್ಮೆಟ್‌ಗಳನ್ನು ವಶ ಪಡಿಸಿಕೊಂಡು ಯಾವುದೇ ದಂಡ ವಿಧಿಸದೇ ಎಚ್ಚರಿಕೆ ಮಾತ್ರ ನೀಡಿ, ಸುರಕ್ಷತಾ ದೃಷ್ಟಿಯಿಂದ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ ಹೇಳಲಾಗುತ್ತಿತ್ತು. ಆದಾಗ್ಯೂ ಸವಾರರು ಅರ್ಧ ಹೆಲ್ಮೆಟ್‌ಗಳನ್ನು ಧರಿಸುತ್ತಿದ್ದರು.
ಸೋಮವಾರದಿಂದ ಗುಣಮಟ್ಟದ ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸುವುದಾಗಿ ಎಸ್ಪಿ ಉಮಾ ಪ್ರಶಾಂತ್ ಎಚ್ಚರಿಕೆಯನ್ನೂ ನೀಡಿದ್ದರು.
ಬೇಸಿಗೆಯಾಗಿರುವುದರಿಂದ ಪೂರ್ಣ ಪ್ರಮಾಣದ ಹೆಲ್ಮೆಟ್‌ಗೆ ಕೆಲ ದಿನಗಳ ಕಾಲ ವಿನಾಯಿತಿ ನೀಡಬೇಕೆಂಬ ಕೂಗೂ ಸಹ ಸಾರ್ವಜನಿಕ ಕ್ಷೇತ್ರದಿಂದ ಕೇಳಿ ಬಂದಿತ್ತು. ದೂಡ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಪೂರ್ಣ ಹೆಲ್ಮೆಟ್‌ಗೆ ವಿನಾಯಿತಿ ನೀಡುವ ಕುರಿತು ಸಭೆ ನಡೆಸಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಸಚಿವರಿಗೆ ಮನವಿಯನ್ನೂ ಮಾಡುವುದಾಗಿ ಹೇಳಿದ್ದರು. ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದ ಪೊಲೀಸರು ದಂಡ ವಿಧಿಸಲಾರಂಭಿಸಿದ್ದಾರೆ. ವಿನಾಯಿತಿ ನೀಡುವ ನಿರೀಕ್ಷೆಯಲ್ಲಿದ್ದವರಿಗೆ ತೀವ್ರ ನಿರಾಸೆ ಉಂಟಾಗಿದೆ.