ದಾವಣಗೆರೆ, ಮಾ.3- ಎಲ್ಲೋ ಬಿಟ್ಟು ಹೋದ ಶಿಶು, ಹೆತ್ತವರಿಗೆ ಬೇಡವಾದ ಶಿಶುಗಳನ್ನು ಮಕ್ಕಳ ದತ್ತು ಸ್ವೀಕಾರ ಕೇಂದ್ರದಲ್ಲಿ ತಾಯಿಯ ಕರುಳ ಬಳ್ಳಿಯಂತೆ ಜೋಪಾನ ಮಾಡಲಾಗುತ್ತಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಇಂಡಸ್ಟ್ರೀಯಲ್ ಏರಿಯಾ ರಾಮನಗರದಲ್ಲಿರುವ ವಿಶೇಷ ದತ್ತು ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸ ಲಾಗಿದ್ದ ವಿಶೇಷ ದತ್ತು ಸಂಸ್ಥೆ ಅಮೂಲ್ಯ(ಜಿ) ಕೇಂದ್ರ ಘಟಕ-2, ಮತ್ತು ಫಿಜಿಯೋಥೆರಪಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಎರಡು ದಿನದ ನವಜಾತ ಶಿಶುವಿನಿಂದ ಹಿಡಿದು ಎರಡು ತಿಂಗಳವರೆಗಿನ ಶಿಶುಗಳನ್ನು ದತ್ತು ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತದೆ. ದತ್ತು ಸ್ವೀಕಾರ ಕೇಂದ್ರದಲ್ಲಿ ತಾಯಿಗೆ ಬೇಡವಾದ ಶಿಶುವನ್ನು ತಾಯಿಗಿಂತಲೂ ಮಿಗಿಲಾಗಿ ಆರೈಕೆ ಮಾಡಲಾಗುತ್ತದೆ. ಸಾರ್ವಜನಿಕರೂ ಸಹ ಈ ಮಕ್ಕಳೊಂದಿಗೆ ಹುಟ್ಟು ಹಬ್ಬ, ಹೊಸ ವರ್ಷ ಆಚರಿಸಿಕೊಳ್ಳುವಂತೆ ಸಲಹೆ ನೀಡಿದರು.
ಐದು ಮಕ್ಕಳಿಗೆ ನಾಮಕರಣ: ಎರಡು ತಿಂಗಳಿಂದ ಮೂರು ತಿಂಗಳ ಐದು ಮಕ್ಕಳಿಗೆ ನಾಮಕರಣ ಮಾಡಲಾಯಿತು. ದತ್ತು ಸ್ವೀಕಾರ ಕೇಂದ್ರದಲ್ಲಿ 10 ಮಕ್ಕಳನ್ನು ಪೋಷಿಸಲು ಮಾತ್ರ ಅವಕಾಶವಿದೆ. ಆದರೆ ಈಗ 27 ಮಕ್ಕಳು ದಾಖಲಾಗಿವೆ. `ವಾತ್ಸಲ್ಯ’ ಸದನ ಕ್ಕಾಗಿ ಸ್ಥಳದ ಕುರಿತು ಚರ್ಚೆ ಕೂಡ ಮಾಡಲಾಯಿತು.
ಕೇಂದ್ರದಲ್ಲಿನ ಸೌಲಭ್ಯಗಳು : ನವಜಾತ ಶಿಶುಗಳನ್ನು ಎಷ್ಟೇ ನಿಗಾವಹಿಸಿ ಪೋಷಣೆ ಮಾಡಿದರೂ ಅನಾರೋಗ್ಯದಿಂದ ಶಿಶುಗಳು ಬಳಲುತ್ತಿದ್ದರೂ, ದತ್ತು ಕೇಂದ್ರದಲ್ಲಿ ಅಷ್ಟೇ ಸುರಕ್ಷಿತವಾಗಿ ಪೋಷಿಸಲಾಗುತ್ತದೆ. ಸೊಳ್ಳೆಗಳ ತಡೆಗೆ ಮೆಸ್, ಹೊಸ ತೊಟ್ಟಿಲು, ಮಕ್ಕಳ ಬಟ್ಟೆ ತೊಳೆಯಲು ವಾಷಿಂಗ್ ಮಷಿನ್‌ಗಳಿವೆ. ಆಯಾಗಳು ಮಕ್ಕಳನ್ನು ಹೇಗೆ ಪೋಷಿಸುತ್ತಾರೆ ಎಂದು ನಿಗಾ ವಹಿಸಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಎಂಟು ಜನ ಆಯಾಗಳು, ಇಬ್ಬರು ಸಾಮಾಜಿಕ ಕಾರ್ಯಕರ್ತರು, ಇಬ್ಬರು ಸಂಯೋಜಕರು, ಒಬ್ಬ ನರ್ಸ್ ಸೇರಿ ಹದಿಮೂರು ಸಿಬ್ಬಂದಿ ದತ್ತು ಸ್ವೀಕಾರ ಕೇಂದ್ರದಲ್ಲಿದ್ದಾರೆ. ಆಯಾಗಳು ನಾಲ್ಕು ತಾಸಿಗೆ ಒಬ್ಬರಂತೆ ಮೂರು ಪಾಳಿಯಲ್ಲಿ ತಾಯಿಯಂತೆ ಕೆಲಸ ಮಾಡುವರು.
ದತ್ತು ವಿಧಾನ
ಯಾವುದೇ ಮಗು ಕೇಂದ್ರಕ್ಕೆ ಬಂದ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಾಹಿತಿ ದಾಖಲು ಮಾಡಲಾಗುತ್ತದೆ. ಮಗು ಕುರಿತು ಪತ್ರಿಕೆಗಳಿಗೆ ಮಾಹಿತಿ ನೀಡಲಾಗುತ್ತದೆ. ಆನಂತರ ವಾರಸುದಾರರಿಗಾಗಿ ಎರಡು ತಿಂಗಳು ಕಾಯಲಾಗುತ್ತದೆ. ಯಾರೂ ಬರದಿದ್ದರೆ ಮಕ್ಕಳ ಸಂರಕ್ಷಣಾ ಸಮಿತಿಯಿಂದ ಈ ಮಗು ಅನಾಥ ಎಂದು ಅನುಮತಿ ಪಡೆದು ದತ್ತು ಸ್ವೀಕಾರ ಕೇಂದ್ರಕ್ಕೆ ಪಡೆಯಲಾಗುತ್ತದೆ.
ನಂತರ ಮಗುವಿನ ವಿವರ ಆನ್‌ಲೈನ್‌ಗೆ ಹಾಕಲಾಗುತ್ತದೆ. ಆನ್‌ಲೈನ್‌ನಲ್ಲಿಯೇ ದತ್ತು ಪಡೆಯ ಬಯಸುವ ಪೋಷಕರು ಕೂಡ ತಮ್ಮ ಮಾಹಿತಿ ನಮೂದಿಸುತ್ತಾರೆ. ಅನಂತರ ಪೋಷಕರ ಹಿನ್ನೆಲೆ, ಉದ್ದೇಶಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ.
ಎಲ್ಲವೂ ಸರಿಯೆಂದು ಕಂಡು ಬಂದಲ್ಲಿ ಸಾಕುವ ಪೋಷಕರಿಗೆ ಮಗುವನ್ನು ದತ್ತು ನೀಡಲಾಗುತ್ತದೆ. ಆದರೆ ಒಂದು ಮಗು ದತ್ತು ಪಡೆಯಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಹೀಗೆ ಸ್ವೀಕರಿಸಿದ ನಂತರ ಎರಡು ವರ್ಷದವರೆಗೂ ದತ್ತು ಕೇಂದ್ರ ಮಗುವಿನ ಪೋಷಣೆ ಕುರಿತು ಕಾಲ ಕಾಲಕ್ಕೆ ವರದಿ ಸಂಗ್ರಹಿಸುತ್ತದೆ.
ದಾವಣಗೆರೆಯಲ್ಲಿ 2012 ರಿಂದ ದತ್ತು ಸ್ವೀಕಾರ ಕೇಂದ್ರ ಆರಂಭವಾಗಿದ್ದು, ಇಲ್ಲಿಯವರೆಗೆ ಸುಮಾರು 212 ಮಕ್ಕಳನ್ನು ದಾಖಲಿಸಿ ಕೊಂಡಿದ್ದಾರೆ. ಈವರೆಗೆ 73 ಮಕ್ಕಳನ್ನು ದತ್ತು ನೀಡಲಾಗಿದೆ. ಅದರಲ್ಲಿ 64 ಮಕ್ಕಳ ಸ್ವದೇಶಿ ದಂಪತಿ, 9 ಮಕ್ಕಳು ವಿದೇಶದ ದಂಪತಿ ದತ್ತು ಸ್ವೀಕರಿಸಿದ್ದಾರೆ.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ. ಜಿ.ಪಂ ಸಿಇಓ ಸುರೇಶ.ಬಿ.ಇಟ್ನಾಳ್, ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ನಾಗೇಂದ್ರಪ್ಪ, ಡಿಹೆಚ್‌ಓ ಷಣ್ಮುಖಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ಉಪಸ್ಥಿತರಿದ್ದರು.