ದಾವಣಗೆರೆ, ಮಾ.3- ವಿಕ್ರಂ ಸಾರಾಭಾಯಿ ಅತ್ಯಂತ ಶ್ರೀಮಂತರಾಗಿದ್ದರೂ ಸಹ ಸಮಾಜ ಸೇವೆ ಮೂಲಕ ಹಲವಾರು ಶಿಕ್ಷಣ ಮತ್ತು ವಿಜ್ಞಾನ ಸಂಸ್ಥೆಗಳನ್ನು ಕಟ್ಟಿ, ಮೌಲ್ಯಯುತ ಶಿಕ್ಷಣ ಕೊಡುವಲ್ಲಿ ಮೊದಲಿಗರಾದರು. ಅವರು ಬಾಹ್ಯಾಕಾಶ ವಿಜ್ಞಾನಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಇಸ್ರೋ ವಿಜ್ಞಾನಿ ಶ್ರೀನಾಥ ರತ್ನಕುಮಾರ್ ಹೇಳಿದರು.
ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕ, ಜಿಲ್ಲಾ ಬಾಲ ಭವನ ಸಮಿತಿ ಹಾಗೂ ಎ.ಕೆ. ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮತ್ತು ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಕ್ರಂ ಸಾರಾಭಾಯಿ ಅವರು ಆಗಿನ ಕಾಲಕ್ಕೆ ಬೇಕಾದ ಎಲ್ಲಾ ಉದ್ಯಮಗಳನ್ನು ನಿರ್ವಹಿಸಿಕೊಂಡು ಹೋಗಬಹುದಾಗಿತ್ತು. ಆದರೆ ಉದ್ಯಮದ ಜೊತೆ ಸಮಾಜ ಸೇವೆ ಮಾಡಬೇಕು ಎಂಬ ಕಾರಣದಿಂದ ಎಲ್ಲಾ ಕ್ಷೇತ್ರಗಳಲ್ಲಿ ಅವರು ತಮ್ಮ ಚಾಪು ಮೂಡಿಸಿದರು ಎಂದರು.
ಬಾಹ್ಯಾಕಾಶ ಸಂಶೋಧನೆ ಮತ್ತು ಅಧ್ಯಯನ ಕ್ಕಾಗಿ ಇಸ್ರೋದಂತಹ ಸಂಸ್ಥೆಯನ್ನು ಕಟ್ಟಿದ್ದರಿಂದಾಗಿ ಈಗ ನಾವು ಪ್ರಪಂಚದಲ್ಲಿಯೇ ಬಾಹ್ಯಾಕಾಶ ವಿಜ್ಞಾನದಲ್ಲಿ ನಾಲ್ಕನೇಯ ಸ್ಥಾನದಲ್ಲಿ ಮುಂಚೂಣಿಯಲ್ಲಿದ್ದೇವೆ. ಇದಕ್ಕೆ ಕಾರಣಕರ್ತರಾದ ವಿಕ್ರಮ ಸಾರಾಭಾಯಿ ಅವರನ್ನು ನಾವಿಂದು ನೆನೆಯಬೇಕಾಗಿದೆ ಎಂದು ಹೇಳಿದರು.
ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು
ಪ್ರಶಿಕ್ಷಣಾರ್ಥಿಗಳ ಕುರಿತಾಗಿ ಶಿಕ್ಷಕರಿಗೆ ನಾಲ್ಕು ರೀತಿಯ ಶಿಕ್ಷಣಗಳ ಅವಶ್ಯಕತೆ ಇದೆ. ಮೌಲ್ಯಯುತ ವಾದ ಶಿಕ್ಷಣ, ಸಂಪೂರ್ಣ ಶಿಕ್ಷಣ, ಸಂಪನ್ಮೂಲ ಶಿಕ್ಷಣ, ನಿರಂತರ ಶಿಕ್ಷಣ ಇವುಗಳನ್ನು ಸಂಪೂರ್ಣವಾಗಿ ಗಳಿಸಿದವರು ಮಾತ್ರ ಸೇವೆ ಸಲ್ಲಿಸುವ ಶಿಕ್ಷಕರಾ ಗುತ್ತಾರೆ. ಉಳಿದವರು ಕೇವಲ ನೌಕರಿಗಾಗಿ, ವೇತನ ಕ್ಕಾಗಿ ಶಿಕ್ಷಕರಾಗುತ್ತಾರೆ ಎಂದು ವಿಶ್ಲೇಷಿಸಿದರು. ಸಂಬಳ ಅನ್ನುವುದು ಕೆಲಸಕ್ಕಾಗಿ ಅಲ್ಲ, ನಿರಂತರ ಸೇವೆ ಮತ್ತು ಕಲಿಕೆಗಾಗಿ ಎಂಬುದನ್ನು ಅರಿತುಕೊಂಡು ಪ್ರಶಿಕ್ಷಣಾರ್ಥಿಗಳು ಉತ್ತಮ ಶಿಕ್ಷಕರಾಗಬೇಕು.
– ಶ್ರೀನಾಥ್ ರತ್ನಕುಮಾರ್, ಇಸ್ರೋ ವಿಜ್ಞಾನಿ
ಸ್ವಾತಂತ್ರ್ಯ ನಂತರ ಹಲವಾರು ಮೂಲಭೂತ ಸೌಕರ್ಯಗಳ ಸಮಸ್ಯೆಗಳಿದ್ದರೂ ವಿಕ್ರಂ ಸಾರಾಭಾಯಿಯವರು ಬಾಹ್ಯಾಕಾಶದ ಅಧ್ಯಯನಕ್ಕೆ ಆದ್ಯತೆ ನೀಡಿದರು. ಇಸ್ರೋ ಸಂಸ್ಥೆಯ ಸ್ಥಾಪನೆಗೆ ಮಂಜೂರಾತಿ ನೀಡಿ, ಆರ್ಥಿಕ ನೆರವು ಕೋರಿದ್ದರ ಪರಿಣಾಮ ಇಂದು ನಾವುಗಳು ಬಾಹ್ಯಕಾಶ ಕ್ಷೇತ್ರ ದಲ್ಲಿ ಭಾರತ 4ನೇ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಯಿತು. ಹೀಗೆ ಪ್ರೋತ್ಸಾಹ ಮುಂದುವರೆದರೆ ಭಾರತವು ಮೊದಲ ಸ್ಥಾನಕ್ಕೆ ಬರುವ ಎಲ್ಲಾ ಅವಕಾಶಗಳಿವೆ ಎಂದು ತಿಳಿದರು.
ಎ.ಕೆ. ಫೌಂಡೇಶನ್ ಸಂಸ್ಥಾಪಕ ಕೆ.ಬಿ. ಕೊಟ್ರೇಶ್ ಮಾತನಾಡಿ, ಪರಿಸರ ನಮ್ಮೆಲ್ಲರಿಗೂ ಸಂಬಂಧಿಸಿದ್ದು, ಪರಿಸರಕ್ಕೆ ಹಲವಾರು ಬಗೆಗಳಲ್ಲಿ ಧಕ್ಕೆಯಾಗುತ್ತಿರುವುದನ್ನು ಕಂಡಿದ್ದೇವೆ. ನಮ್ಮ ಹೊಸ ಉದ್ಯಮ ಯಾವುದೇ ಆಗಿರಲಿ ಅದರ ಉತ್ಪನ್ನವು ಮರುಬಳಕೆಯಾಗುವಂತಹದ್ದಾಗಿದ್ದರೆ ಮಾತ್ರ ಪರಿಸರಕ್ಕೆ ಉತ್ತಮ ಕೊಡುಗೆ ಆಗಬಲ್ಲದು. ಮರುಬಳಕೆಯಾಗದ ಉತ್ಪನ್ನವನ್ನು ಉತ್ಪಾದಿಸುವ ಯಾವುದೇ ಕಾರ್ಖಾನೆ ಪರಿಸರಕ್ಕೆ ಮಾರಕವಾಗುತ್ತದೆ. ಇದನ್ನು ಅರಿತು ನಮ್ಮ ಕಾರ್ಯವನ್ನು ಉತ್ಸಾಹದಿಂದ ತೆಗೆದುಕೊಂಡಾಗ ಮಾತ್ರ ಪರಿಸರಕ್ಕೆ ಪೂರಕವಾದಂತಹ ಉತ್ಪನ್ನಗಳನ್ನು ತಯಾರಿಸಲು ಸಾಧ್ಯ ಎಂದರು. ದಾವಣಗೆರೆಯಲ್ಲಿ ದಿನವೊಂದಕ್ಕೆ 250 ಟನ್ ಘನತ್ಯಾಜ್ಯ ಹೊರ ಬರುತ್ತಿದೆ. ಅದರಲ್ಲಿ ಕೇವಲ ಶೇ. 10 ರಷ್ಟು ಮಾತ್ರ ನಾವು ಮರುಬಳಕೆ ಮಾಡಿಕೊಳ್ಳುತ್ತಿದ್ದೇವೆ. ಹೀಗೆ ನಡೆದರೆ ಮುಂದೆ ಇಡೀ ನಗರ ಕಸದ ತೊಟ್ಟಿಯಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಘನತ್ಯಾಜ್ಯಕ್ಕೆ ಮರುಬಳಕೆಯ ಹೊಸ ಆವಿಷ್ಕಾರಗಳನ್ನು ಮಾಡಬೇಕೆಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭೌತಶಾಸ್ತ್ರ ವಿಷಯದ ಪ್ರೊ. ಎಸ್.ಹಾಲಪ್ಪ ಮಾತನಾಡಿ, ದಿನನಿತ್ಯದ ಆಗುಹೋಗುಗಳನ್ನು ಗಮನಿಸಿ, ನಮ್ಮ ಸಂಶಯಗಳಿಗೆ ಉತ್ತರ ಕೊಡುವುದೇ ವಿಜ್ಞಾನ ಎಂದು ಹೇಳಿದರು.
ಕರಾವಿಪ ಗೌರವಾಧ್ಯಕ್ಷ ಡಾ. ಜೆ.ಬಿ.ರಾಜ್, ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿ, ಡಾ. ಎಂ.ಆರ್.ಜಗದೀಶ್, ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಕೆ.ಟಿ.ನಾಗರಾಜ್‍ನಾಯ್ಕ, ಜಿಲ್ಲಾ ಬಾಲಭವನ ಸಮಿತಿಯ ಕಾರ್ಯಕ್ರಮ ಸಂಯೋಜಕಿ ಎಸ್.ಬಿ. ಶಿಲ್ಪ, ಕ್ವಿಜ್ ಮಾಸ್ಟರ್‍ಗಳಾದ ಸಿದ್ದೇಶ ಕತ್ತಲಗೆರೆ, ಟಿ. ಸುರೇಶ್ ಭಾಗವಹಿಸಿದ್ದರು.