ರಾಜ್ಯಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನದಲ್ಲಿ ಸಚಿವ ಈಶ್ವರ ಖಂಡ್ರೆ
ಬೀದರ್, ಮಾ.2- ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಧನ್ವಂತರಿ ವನ ನಿರ್ಮಿಸುವುದರ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಆಶ್ವಾಸನೆ ನೀಡಿದ್ದಾರೆ.
ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ, ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಹಾಗೂ ಬೀದರ್ ಜಿಲ್ಲಾಡಳಿತದ ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ 15ನೇ ರಾಜ್ಯಮಟ್ಟದ ಮೂರು ದಿನಗಳ ಪಾರಂಪರಿಕ ವೈದ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಕಡೆಗಳಲ್ಲಿ ಪಾರಂಪರಿಕ ವೈದ್ಯ ಪರಿಷತ್ ಭವನ ನಿರ್ಮಾಣ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತಿ ವರ್ಷ ಪಾರಂಪರಿಕ ವೈದ್ಯ ಸಮ್ಮೇಳನಕ್ಕೆ ಅನುದಾನ ನೀಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಈ ಕುರಿತು ಮುಖ್ಯಮಂತ್ರಿಯೊಂದಿಗೆ ಸಮಾಲೋಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.
ಸರ್ಕಾರವು ಮೊದಲ ಬಾರಿಗೆ ಬೃಹತ್ ಪ್ರಮಾಣ ದಲ್ಲಿ ಇಂತಹ ಸಮ್ಮೇಳನವನ್ನು ಆಯೋಜಿಸಿದೆ. ವೈದ್ಯ ಪರಿಷತ್ ಪದಾಧಿಕಾರಿಗಳು ನೀಡಿದ ವಿವಿಧ ರೀತಿಯ ಬೇಡಿಕೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲಿಸಲಾಗುವುದು ಎಂದರು.
ರಾಜ್ಯದ ಎಲ್ಲ ಔಷಧೀಯ ಸಸ್ಯಗಳನ್ನು ದಾಖಲಿಸಿ ಮನಕುಲದ ಒಳತಿಗಾಗಿ ಉಪಯೋಗಿಸುವ ಹಿನ್ನೆಲೆಯಲ್ಲಿ ಜೀವ ವೈವಿಧ್ಯ ಮಂಡಳಿ ವಿವಿಧ ಕಾರ್ಯಗಳನ್ನು ಮಾಡುತ್ತಿದೆ. ಈಗಾಗಲೇ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಔಷಧೀಯ ಸಸ್ಯಗಳನ್ನು ದಾಖಲೀಕರಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಹಳ ಶ್ರೀಮಂತವಾದ ಅರಣ್ಯ ಪ್ರದೇಶವಿದೆ. ಎಲ್ಲ ಪ್ರಭೇದದ ಔಷಧೀಯ ಸಸ್ಯಗಳಿವೆ. ಯಾವ್ಯಾವ ಸಸ್ಯಗಳಲ್ಲಿ ಯಾವ ರೋಗಗಳಿಗೆ ಚಿಕಿತ್ಸೆ ಕೊಡಬಲ್ಲ ಔಷಧೀಯ ಗುಣಗಳ ಸಸ್ಯಗಳಿವೆ ಎನ್ನುವುದರ ಬಗ್ಗೆ ಪ್ರಚಾರ ಆಗಬೇಕಿದೆ. ಆಗ ಜನರಲ್ಲಿ ಕೂಡ ನಂಬಿಕೆ ಬರುತ್ತದೆ. ಪಾರಂಪರಿಕ ವೈದ್ಯ ಪದ್ಧತಿಯ ಚಿಕಿತ್ಸೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಅಲೋಪಥಿಕ್ ಬಹಳ ಮುಂದುವರೆದ ಚಿಕಿತ್ಸೆ ಇದೆ. ಆದರೆ, ಸಾಕಷ್ಟು ಅಡ್ಡ ಪರಿಣಾಮಗಳಿವೆ. ಪಾರಂಪರಿಕ ಚಿಕಿತ್ಸೆಯಿಂದ ರೋಗ ನಿಧಾನವಾಗಿ ಗುಣಮುಖವಾಗುತ್ತದೆ. ಆದರೆ, ದೀರ್ಘಕಾಲೀನವರೆಗೆ ಅದರಿಂದ ಅನುಕೂಲವಾಗುತ್ತದೆ ಎಂದು ಅದರ ಮಹತ್ವ ವಿವರಿಸಿದರು.
ಪಾರ್ಶ್ವವಾಯು ರೋಗಿಗಳು ಈಗಲೂ ಪಾರಂಪರಿಕ ವೈದ್ಯರ ಬಳಿಗೆ ಹೋಗುತ್ತಾರೆ. ಅಸ್ತಮಾ ರೋಗಕ್ಕೆ ಮೀನಿನಲ್ಲಿ ಔಷಧಿ ಕೊಡುತ್ತಾರೆ. ಅದರಿಂದ ರೋಗ ಗುಣಮುಖವಾಗುತ್ತದೆ. ಪಾರಂಪರಿಕ ಮತ್ತು ಆಯುರ್ವೇದ ಚಿಕಿತ್ಸೆ ಅನೇಕ ರೀತಿಯ ರೋಗಗಳಿಗೆ ದಿವ್ಯ ಔಷಧಿ. ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ, ಜ್ಞಾನ ಕಡಿಮೆ ಆಗುತ್ತಿದೆ. ನಶಿಸಿ ಹೋಗುತ್ತಿವೆ. ಔಷಧೀಯ ಗುಣ ಹೊಂದಿರುವ ಸಸಿಗಳ ಸಂರಕ್ಷಣೆ, ಯಾವ ಮರ, ಎಲೆ, ಬಳ್ಳಿಯಲ್ಲಿ ಔಷಧೀಯ ಗುಣಧರ್ಮ ಇದೆ ಎಂಬುದು ಪಾರಂಪರಿಕ ವೈದ್ಯರಿಗೆ ಗೊತ್ತಿದೆ. ಮೂರು ದಿನಗಳ ಸಮ್ಮೇಳನದ ಅವಧಿಯಲ್ಲಿ ಅನೇಕ ಗೋಷ್ಠಿಗಳು ನಡೆಯಲಿವೆ. ಆ ಗೋಷ್ಠಿಗಳಲ್ಲಿ ತಜ್ಞರು, ಸಂಶೋಧಕರು ಮಂಡಿಸುವ ವಿಷಯಗಳನ್ನು ದಾಖಲಿಸಿ, ಜೀವ ವೈವಿಧ್ಯ ಮಂಡಳಿಗೆ ಸಲ್ಲಿಸಬೇಕು. ಅದರ ಮೇಲೆ ಸರ್ಕಾರ ಸೂಕ್ತ ಕ್ರಮ ಜರುಗಿಸಲಿದೆ ಎಂದು ಭರವಸೆ ನೀಡಿದರು.
ಪಾರಂಪರಿಕ ವೈದ್ಯ ಪರಿಷತ್ ಗೌರವ ಅಧ್ಯಕ್ಷ ಬಸವ ನಾಗಿದೇವ ಶರಣರು, ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪಾರಂಪರಿಕ ವೈದ್ಯರು ಪಾಲ್ಗೊಂಡಿದ್ದರು.