ಹೊಳಲು, ಫೆ.28- `ಬಸವಣ್ಣ ದೊರೆಯೇ ನಿನಗಾರು ಸರಿಯೇ, ಸರಿ ಸರಿ ಎಂದವರ ಹಲ್ಲುಮುರಿಯೇ ಬಹುಪರಾಕ್’, `ಹರ ಹರ ಮಹಾದೇವ’ ಎಂಬ ಹರ್ಷೋದ್ಘಾರದೊಂದಿಗೆ ನಾಡಿನ ಐತಿಹಾಸಿಕ ಸುಕ್ಷೇತ್ರ ಹೂವಿನಹಡಗಲಿ ತಾಲ್ಲೂಕು ಕುರುವತ್ತಿಯ ಶ್ರೀ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ರಥೋತ್ಸವವು ಶುಕ್ರವಾರ ಸಂಜೆ ಲಕ್ಷಾಂತರ ಭಕ್ತರ ಮಧ್ಯೆ ಸಂಭ್ರಮದಿಂದ ನೆರವೇರಿತು.
ಭಾರೀ ಗಾತ್ರದ ರುದ್ರಾಕ್ಷಿ ಮಾಲೆ ಹಾಗೂ ಹೂಮಾಲೆಗಳೊಂದಿಗೆ ರಥವನ್ನು ಅಲಂಕರಿಸಿಲಾಗಿತ್ತು. ಬಾಜಾ ಭಜಂತ್ರಿ, ನಂದಿಕೋಲು, ಸಮ್ಮಾಳ ವಾದ್ಯಗಳು ಮೆರಗು ನೀಡಿದ್ದವು. ಜಾತ್ರೆಗೆ ಅಪಾರ ಪ್ರಮಾಣದಲ್ಲಿ ರೈತರು ಹಳಿಬಂಡಿ ಹೂಡಿಕೊಂಡು ವಿವಿಧ ಬಗೆಯಲ್ಲಿ ಎತ್ತುಗಳನ್ನು ಅಲಂಕಾರ ಮಾಡಿಕೊಂಡು ಬಂದದ್ದು ಕಣ್ಮನ ಸೆಳೆಯುವಂತಿತ್ತು.
ಸಂಜೆ 4ಗಂಟೆಯಿಂದ ವಂಶಪಾರಂಪರ್ಯ ಧರ್ಮಾಧಿಕಾರಿಗಳ ಮನೆಯಿಂದ ಸ್ವಾಮಿಯ ಆಭರಣಗಳನ್ನು ಹಾಗೂ ಗ್ರಾಮದ ತೋಂಟದಾರ್ಯ ವಿರಕ್ತ ಮಠದಿಂದ ಎರಡು ಆಶೀರ್ವಾದದ ಕಾಯಿಗಳನ್ನು ದೇವಸ್ಥಾನಕ್ಕೆ ತರಲಾಯಿತು. ನಂತರ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿ, ಪಾಲಿಕೆಯಲ್ಲಿ ಕೂಡ್ರಿಸಿ ಮೆರವಣಿಗೆಯ ಮೂಲಕ ಕರೆತಂದು ರಥೋತ್ಸವದಲ್ಲಿ ಕೂಡಿರಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರು ಸಾಗುತ್ತಿದಂತೆಯೇ ನೆರೆದ ಲಕ್ಷಾಂತರ ಭಕ್ತರು ಹರಹರ ಮಹಾದೇವ ಎನ್ನುತ್ತಾ ಬಾಳೆಹಣ್ಣು ಹಾಗೂ ಉತ್ತತ್ತಿಯನ್ನು ಎಸೆದರು.
ನಾಡಿನ ರೈತಬಾಂಧವರ ಆರಾಧ್ಯ ದೈವ ಬಸವೇಶ್ವರ ಜಾತ್ರೆಗೆ ನಾಡಿನ ನಾನಾ ಭಾಗಗಳಿಂದ ಎತ್ತಿನ ಬಂಡಿ, ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳ ಮೂಲಕ ಹಾಗೂ ಪಾದಯಾತ್ರೆಯ ಮೂಲಕ ಲಕ್ಷಾಂತರ ಭಕ್ತಸಾಗರ ಹರಿದು ಬಂದಿತ್ತು. ಪಾದಯಾತ್ರೆಗೆ ಬರುವ ಭಕ್ತಾದಿಗಳಿಗೆ ದಾರಿಯುದ್ದಕ್ಕೂ ಭಕ್ತರು ಊಟ, ಫಲಹಾರ ಹಾಗೂ ತಂಪು ಪಾನೀಯದ ವ್ಯವಸ್ಥೆ ಮಾಡಿ ಧನ್ಯತೆ ಮೆರೆದರು.