ದಾವಣಗೆರೆ, ಮಾ.4- ಡಾ.ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಸರಳ ಜೀವಿಗಳು, ಕಾಯಕ ಜೀವಿಗಳೂ ಆಗಿದ್ದರು ಎಂದು ಜವಳಿ ವರ್ತಕ ಬಿ.ಸಿ. ಉಮಾಪತಿ ಹೇಳಿದರು.
ಅಖಿಲ ಭಾರತ ಶಿವಾಚಾರ್ಯ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರೂ, ದಾವಣಗೆರೆ ಹಿರೇಮಠದ ಸ್ಥಿರ ಪಟ್ಟಾಧ್ಯಕ್ಷರೂ ಆಗಿದ್ದ ಶ್ರೀ ಡಾ.ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ 17ನೇ ಸಂಸ್ಮರ ಣೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಶ್ರೀಗಳು ಯಾವ ಕಾರ್ಯಕ್ರಮದಲ್ಲೂ ಗುರು ಕಾಣಿಕೆ ಪಡೆಯುತ್ತಿರಲಿಲ್ಲ. ಇಂತಹ ನಿಸ್ವಾರ್ಥ, ಧರ್ಮಾಭಿಮಾನ ಇರುವ, ಭಕ್ತರ ಮೇಲೆ ಕಾಳಜಿ ವಹಿಸುವ ಸ್ವಾಮೀಜಿಗಳನ್ನು ನಾನು ಎಲ್ಲಿಯೂ ನೋಡಿಲ್ಲ ಎಂದು ಹೇಳಿದರು.
ಮಠದಲ್ಲಿ ಕಸಗುಡಿಸುವ ಕೆಲಸದಿಂದ ಅಡುಗೆ ಮಾಡುವ ಕೆಲಸದವರೆಗೆ ಎಲ್ಲವನ್ನೂ ತಾವೇ ಮಾಡಿಕೊಳ್ಳುತ್ತಿದ್ದರು. ಮಠಕ್ಕೆ ಬಂದವರಿಗೆ ತಾಯಿಯ ವಾತ್ಸಲ್ಯ ತೋರಿಸುತ್ತಿದ್ದರು. ಬಡವರಿಗೆ ತಾವೇ ಹಣ ಕೊಡುತ್ತಿದ್ದರೇ ಹೊರತು, ಯಾರಿಂದಲೂ ಏನನ್ನೂ ಬಯಸುತ್ತಿರಲಿಲ್ಲ. ಸದ್ಯೋಜಾತ ಮಠ ಶಿವಾಚಾರ್ಯರ ತವರಾಗಿತ್ತು ಎಂದು ಹೇಳಿದರು.
ಸದ್ಯೋಜಾತ ಮಠದ ಕಟ್ಟಡ ನಿರ್ಮಾಣಕ್ಕೆ ಹಣ ಬೇಕಿತ್ತು. ನಾವೆಲ್ಲಾ ಸೇರಿ ಒಂದಿಷ್ಟು ಹಣ ಜೋಡಿಸಿದ್ದೆವು. ಶ್ರೀಗಳು ಅಮೆರಿಕಾಕ್ಕೆ ಹೊರಟಿ ದ್ದರು. ಆಗ ನಾವು ಒಂದು ರಶೀದಿ ಪುಸ್ತಕ ಮುದ್ರಿಸಿ, ಅಲ್ಲಿನ ಭಕ್ತರಿಂದ ಹಣ ಸ್ವೀಕರಿಸುವಂತೆ ಕೋರಿ ಕೊಂಡೆವು. ಶ್ರೀಗಳು ಮರಳಿ ಬಂದಾಗ ನಾವೆಲ್ಲಾ ಏನಾಯಿತು ಎಂದಾಗ, ರಶೀದಿ ಪುಸ್ತಕವನ್ನು ಅವರು ತೆಗೆದುಕೊಂಡೇ ಹೋಗಿರಲಿಲ್ಲ.
ಮಠದ ಕಟ್ಟಡಕ್ಕೆ ಅಲ್ಲಿನ ಭಕ್ತರಿಂದ ಹಣ ಕೇಳುವುದು ಸರಿಯಲ್ಲ ಎಂದು ಹೇಳಿದರು. ಅಲ್ಲದೇ ಕಟ್ಟಡ ನಿರ್ಮಾಣಕ್ಕೆ ಯಾರಿಗೂ ಒತ್ತಾಯ ಮಾಡಲಿಲ್ಲ ಎಂದು ಬಿ.ಸಿ. ಉಮಾಪತಿಯವರು ನೆನಪಿಸಿಕೊಂಡರು.
ಸದ್ಯೋಜಾತ ಶ್ರೀಗಳ ಬಗ್ಗೆ ಪಂಚ ಪೀಠಾಧಿಪತಿಗಳು
ತಪ್ಪು ಕಲ್ಪನೆ ಹೊಂದಿದ್ದರು : ಉಮಾಪತಿ
ವೀರಶೈವ ಲಿಂಗಾಯತ ಧರ್ಮವನ್ನು ಜನರು ಆಚರಿಸುತ್ತಿಲ್ಲ. ಧಾರ್ಮಿಕ ಪರಂಪರೆಯಿಂದ ಜನರು ದೂರವಾಗುತ್ತಿದ್ದಾರೆ ಎಂಬ ನೋವು ಶ್ರೀಗಳಿಗಿತ್ತು. ವಿರಕ್ತ ಪರಂಪರೆಯವರು ಬಸವಣ್ಣನನ್ನು ಆರಾಧಿಸುತ್ತಿದ್ದರಾದರೂ, ಬಸವ ತತ್ವಗಳನ್ನು ಪಾಲಿಸುತ್ತಿರಲಿಲ್ಲ. ಆದರೆ ಸದ್ಯೋಜಾತ ಶ್ರೀಗಳು ಬಸವ ತತ್ವ ಪಾಲಕರೂ ಆಗಿದ್ದರು. ಹೀಗಾಗಿ ಪಂಚ ಪೀಠಾಧೀಶ್ವರರು ಅವರ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದರು. ಇದರ ಬಗ್ಗೆ ನೋವಿದ್ದರೂ ತಮ್ಮ ಕರ್ತವ್ಯ, ಧರ್ಮಪಾಲನೆ, ವಿಚಾರಗಳನ್ನು ಸದ್ಯೋಜಾತ ಶ್ರೀಗಳು ಕೈ ಬಿಡಲಿಲ್ಲ. ಇಂತಹ ಸ್ವಾಮಿಗಳನ್ನು ಪಡೆದದ್ದು ನಮ್ಮ ಪುಣ್ಯ ಎಂದು ಬಿ.ಸಿ. ಉಮಾಪತಿ ಹೇಳಿದರು.
ವೀರಶೈವ ಲಿಂಗಾಯತ ಧರ್ಮದ ಆಚರಣೆಗಳು ವೈಜ್ಞಾನಿಕವಾಗಿವೆ. ವಿಭೂತಿ, ಗಂಧ, ಕುಂಕುಮ ಧಾರಣೆ, ಲಿಂಗಪೂಜೆ ಇವೆಲ್ಲವಕ್ಕೂ ವೈಜ್ಞಾನಿಕ ಕಾರಣಗಳಿವೆ. ಆದರೆ ಜನತೆಗೆ ಸರಿಯಾದ ಅರಿವಿಲ್ಲ. ತಿಳಿದವರು ಆಚರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರು ಧಾರ್ಮಿಕ ಆಚರಣೆಗಳಿಂದ ದೂರ ಸರಿಯುತ್ತಿದ್ದಾರೆ ಎಂದು ಹೇಳಿದರು.
ಇಂದಿನ ಯುವ ಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮೊಬೈಲ್, ಟಿವಿ ನೋಡುವ ಅಭ್ಯಾಸ ಹೆಚ್ಚಾಗಿದೆ. ಮನೆಗಳಲ್ಲಿ ಹಿರಿಯರು ಧರ್ಮಾಚರಣೆ ಮಾಡಿದರೆ ಮಕ್ಕಳೂ ಅನುಸರಿಸುತ್ತಾರೆ. ಶ್ರೀಗಳ ಮನದಾಸೆಯಂತೆ ಜನರು ಅವರ ಆಚಾರ-ವಿಚಾರ ಪಾಲಿಸಿದರೆ ಈ ಸಂಸ್ಮರಣೋತ್ಸವ ಸಾರ್ಥಕವಾಗುತ್ತದೆ ಎಂದು ಉಮಾಪತಿ ಹೇಳಿದರು.
ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಜನಪದ ಚಿಂತಕರೂ ಆದ ಜನಪದಶ್ರೀ ಡಾ.ಅಪ್ಪಗೆರೆ ತಿಮ್ಮರಾಜು `ಜನಪದ ಸಾಹಿತ್ಯದಲ್ಲಿ ಬದುಕಿನ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿದರು.
ಕೈಗಾರಿಕೋದ್ಯಮಿ ಐ.ಪಿ. ಮಲ್ಲೋಕಾರಾಧ್ಯ, ಸ್ವಾಮಿ ತ್ರಿಭುವಾನಂದ ಉಪಸ್ಥಿತರಿದ್ದರು. ಶ್ರೀಮತಿ ವಿಜಯ ಹಿರೇಮಠ ಪ್ರಾರ್ಥಿಸಿದರು. ಭ್ರಮರಾಂಭಿಕಾ ದೇವಿ ನಿರೂಪಿಸಿದರು.