ಹೊಳೆಸಿರಿಗೆರೆಯಲ್ಲಿ ನಡೆದ ರೈತರ, ಜನಪ್ರತಿನಿಧಿಗಳ ಸಭೆಯಲ್ಲಿ ಮಹತ್ವದ ನಿರ್ಣಯ
ಮಲೇಬೆನ್ನೂರು, ಫೆ.27- ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ ಒಂದೂವರೆ ತಿಂಗಳು ಕಳೆದಿದ್ದರೂ ಅಚ್ಚುಕಟ್ಟಿನ ಕೊನೆ ಭಾಗಕ್ಕೆ ಇದುವರೆಗೂ ನೀರು ತಲುಪದಿರುವ ಹಿನ್ನೆಲೆಯಲ್ಲಿ ಗುರುವಾರ ಹೊಳೆಸಿರಿಗೆರೆಯಲ್ಲಿ ಕೊನೆ ಭಾಗದ ರೈತರ ಮಹತ್ವದ ಸಭೆಯ ನಡೆಯಿತು.
ಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ರೈತರು ಹಾಗೂ ಜನಪ್ರತಿನಿಧಿಗಳೂ ಸೇರಿ 3 ನಿರ್ಣಯಗಳನ್ನು ತೆಗೆದುಕೊಂಡರು.
ನಿರ್ಣಯ – 1 : ಸರ್ಕಾರ, ಅಪ್ಪರ್ ಭದ್ರಾ ಯೋಜನೆಗೆ ಹರಿಸುವ ಸಂಪೂರ್ಣ ನೀರನ್ನು ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ಲಿಫ್ಟ್ ಮಾಡಬೇಕು.
ನಿರ್ಣಯ – 2 : ಭದ್ರಾ ನಾಲೆಗೆ ಅಳವಡಿಸಿರುವ ಅಕ್ರಮ ಪಂಪ್ಸೆಟ್ಗಳ ತೆರವಿಗೆ ಹೈಕೋರ್ಟ್ ನೀಡಿರುವ ಆದೇಶವನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕು.
ನಿರ್ಣಯ – 3: ಭೈರನಪಾದ ಏತ ನೀರಾವರಿ ಯೋಜನೆಯ ಜೊತೆಗೆ ಇನ್ನೆರಡು ಏತ ನೀರಾವರಿ ಯೋಜನೆಗಳನ್ನು ಸರ್ಕಾರ ಹಂತ ಹಂತವಾಗಿ ಅನುಷ್ಠಾನಗೊಳಿಸಬೇಕು.
ಒಂದು ವೇಳೆ ಸರ್ಕಾರ ಈ ನಿರ್ಣಯಗಳಿಗೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಹರಿಹರ ತಾಲ್ಲೂಕಿನಲ್ಲಿ ಸರ್ಕಾರದ ಯೋಜನೆಗಳಿಗೆ ಅಸಹಕಾರ ಚಳುವಳಿ ನಡೆಸುವುದಾಗಿಯೂ ಸಭೆ ನಿರ್ಣಯಿಸಿತು.
ಈ ಎಲ್ಲಾ ನಿರ್ಣಯಗಳನ್ನು ಶಾಸಕ ಬಿ.ಪಿ.ಹರೀಶ್ ಅವರ ಮೂಲಕ ಸಭೆ ತಿಳಿಸಿತು.
ಸಭೆಯ ವಿವರ : ಸಭೆಯ ಆರಂಭದಲ್ಲಿ ಮಾತನಾಡಿದ ಹೊಳೆಸಿರಿಗೆರೆಯ ಎರೇಸೀಮೆ ಹಾಲೇಶ್ ಅವರು, ನೀರು ಹರಿಹರ ಕ್ಷೇತ್ರದ ಶಾಸಕರಾಗಿ ನಮಗೆ ನೀರು ತಲುಪಿಸುವ ಬಗ್ಗೆ ಹೋರಾಟ ಮಾಡುವುದನ್ನು ಬಿಟ್ಟು, ಭರಮ ಸಾಗರದಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಅಕ್ರಮ ಪಂಪ್ಸೆಟ್ಗಳನ್ನು ಸಕ್ರಮಗೊಳಿಸಿ ಎಂದು ಶ್ರೀಗಳಿಗೆ ಮನವಿ ಮಾಡಿದ್ದು, ಸರಿಯೇ ? ಎಂದು ಬಿ.ಪಿ.ಹರೀಶ್ ಅವರನ್ನು ಪ್ರಶ್ನಿಸಿದರು.
ನಿಮ್ಮನ್ನು ಶಾಸಕರನ್ನಾಗಿ ಮಾಡಿದ್ದು ನಾವು. ನೀವು ನಮ್ಮ ತಾಲ್ಲೂಕಿನ ಜನರ ಪರವಾಗಿ ಹೋರಾಟ ಮಾಡಬೇಕು. ಅಕ್ರಮ ಪಂಪ್ಸೆಟ್ಗಳ ತೆರವಿಗಾಗಿ ನಾವು ಹೈಕೋರ್ಟ್ಗೆ ಹೋಗಿ ಕೇಸ್ ಗೆದ್ದಿದ್ದೇವೆ. ಅಕ್ರಮ ಪಂಪ್ಸೆಟ್ಗಳ ತೆರವಿಗೆ ಹೈಕೋರ್ಟ್ ಆದೇಶ ಮಾಡಿರುವುದನ್ನು ಜಾರಿಗೊಳಿಸಲು ನೀವು ಹೋರಾಟ ಮಾಡಿ, ಕೊನೆ ಭಾಗದ ರೈತರಿಗೆ ನೀರು ತಲುಪಿಸಿ ಎಂದು ಹರೀಶ್ ಅವರಿಗೆ ಹಾಲೇಶ್ ಒತ್ತಾಯಿಸಿದಾಗ, ಸಭೆಯಲ್ಲಿದ್ದವರೂ ಧ್ವನಿ ಗೂಡಿಸಿದರು.
ಆಗ ಉತ್ತರ ನೀಡಿದ ಶಾಸಕ ಹರೀಶ್, ನಾನೂ ಸಹ 1980 ರಿಂದ ರೈತನಾಗಿ ಭತ್ತ, ತೋಟ ಮಾಡಿದ್ದೇನೆ. ಭದ್ರಾ ನೀರಿಗಾಗಿ ನಾವು ಅಂದಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇವೆ. ಭದ್ರಾ ಕಾಡಾ ಅಧ್ಯಕ್ಷನಾಗಿ, ರೈತರ ಪರ ಕೆಲಸ ಮಾಡಿದ್ದೇನೆ. ನಾನು ತರಳಬಾಳು ಹುಣ್ಣಿಮೆಯಲ್ಲಿ ಮಾತನಾಡಿರುವ ಮಾತಿನ ಅರ್ಥ ಬೇರೆನೇ ಇದೆ. ಅದು ನಿಮಗೆ ಅರ್ಥವಾಗಿಲ್ಲ. ಹರಿಹರ ತಾಲ್ಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿಯಿಂದ ದೂರದ ತಾಲ್ಲೂಕುಗಳಿಗೆ ನೀರು ತೆಗೆದುಕೊಂಡು ಹೋಗಿದ್ದಾರೆ. ನಮ್ಮ ತಾಲ್ಲೂಕು ಹೆಸರಿಗಷ್ಟೇ ಭದ್ರಾ ಅಚ್ಚುಕಟ್ಟಿಗೆ ಸೇರಿದೆ. ಆದರೆ, ನೀರು ಮಾತ್ರ ಕೊನೆ ಭಾಗಕ್ಕೆ ಹರಿಯುತ್ತಿಲ್ಲ. ಇದರಿಂದ ಹತ್ತಾರು ಹಳ್ಳಿಗಳ ಸಾವಿರಾರು ರೈತರಿಗೆ ತೊಂದರೆ ಆಗುತ್ತಿರುವುದನ್ನು ಮನಗಂಡು ನಾನು ಆವತ್ತು ಶ್ರೀಗಳಿಗೆ ಅಕ್ರಮ ಪಂಪ್ಸೆಟ್ಗಳಿಂದಾಗಿ ನಮ್ಮ ಭಾಗಕ್ಕೆ ಭದ್ರಾ ನಾಲೆ ನೀರು ಬರುತ್ತಿಲ್ಲ. ನಮ್ಮ ತಾಲ್ಲೂಕಿನ ಕೆರೆಗಳಿಗೂ ನದಿ ನೀರು ಹರಿಸುವ ಯೋಜನೆ ಮತ್ತು ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೊಳಿಸಿ ಎಂದು ಶ್ರೀಗಳಿಗೆ ಮನವಿ ಮಾಡಿದ್ದೇನೆ.
ಅಕ್ರಮ ಪಂಪ್ಸೆಟ್ಗಳನ್ನು ತೆರವು ಮಾಡುವುದು ಸುಲಭದ ಮಾತಲ್ಲ. ಅವರಿಗೆ ರಾಜಕಾರಣಿಗಳ ಬೆಂಬಲದ ಜೊತೆಗೆ ಮಠಾಧೀಶರ ಬೆಂಬಲವೂ ಇದೆ. ಆದರೆ, ನಮಗೆ ಇದುವರೆಗೂ ಒಂದು ನೀರಾವರಿ ಯೋಜನೆ ಜಾರಿಗೊಳಿಸಲು ಸಹಕಾರ ಸಿಗುತ್ತಿಲ್ಲ ಎಂಬ ಬೇಸರದಿಂದ ಮನನೊಂದು ಆ ರೀತಿ ಹೇಳಿದ್ದೇನೆ. ನನ್ನ ಹೋರಾಟ ಯಾವತ್ತೂ ಹರಿಹರ ತಾಲ್ಲೂಕಿನ ರೈತರ ಪರವಾಗಿಯೇ ಇರುತ್ತದೆ. ಅದಕ್ಕಾಗಿ ನಾನು ಯಾವ ತ್ಯಾಗಕ್ಕೂ ಸಿದ್ದ ಎಂದು ಹರೀಶ್ ಭಾವನ್ಮಾತಕವಾಗಿ ಹೇಳಿದಾಗ ಸಭೆಯಲ್ಲಿ ಬೆಂಬಲ ವ್ಯಕ್ತವಾಯಿತು.
ಜಿ.ಪಂ. ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಈ ಸಭೆಯಲ್ಲಿ ಎಲ್ಲಾ ಪಕ್ಷದವರೂ ಸೇರಿದ್ದೇವೆ. ಎಲ್ಲರೂ ಸೇರಿ ತಾಲ್ಲೂಕಿನ ರೈತರ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರ ಕೈಗೊಳ್ಳೋಣ ಮತ್ತು ನಮ್ಮ ಹೋರಾಟಕ್ಕೆ ನಮ್ಮ ತಾಲ್ಲೂಕಿನ ಎಲ್ಲಾ ಮಠಾಧೀಶರ ಬೆಂಬಲ ಪಡೆದುಕೊಳ್ಳೋಣ ಎಂದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಅಕ್ರಮ ಪಂಪ್ಸೆಟ್ಗಳ ತೆರವು ವಿಚಾರದಲ್ಲಿ ಹೈಕೋರ್ಟ್ ಆದೇಶ ಪಾಲನೆಯಾಗಬೇಕು. ಇಂಜಿನಿಯರ್ಗಳು ಕಾಲುವೆಗಳಲ್ಲಿ ನೀರಿನ ನಿರ್ವಹಣ ಮಾಡಬೇಕು. ಇಲ್ಲಿ ಯಾವುದೇ ಪಕ್ಷ, ಸರ್ಕಾರದ ವಿಷಯ ಬೇಡ. ರೈತರ ವಿಷಯದಲ್ಲಿ ನಾವೆಲ್ಲರೂ ಒಂದಾಗಿ ಹೋರಾಟ ಮಾಡೋಣ. ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೆ ಹೊಸ ಡಿಪಿಆರ್ಗೆ ಟೆಂಡರ್ ಆಗಿದ್ದು, ದೇವರಬೆಳಕೆರೆ ಪಿಕಪ್ ಡ್ಯಾಂಗೂ ನೀರು ಹರಿಸುವ ಚಿಂತನೆ ಇದೆ ಎಂದು ಸಭೆಗೆ ತಿಳಿಸಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಕೊನೆ ಭಾಗಕ್ಕೆ ನೀರು ತಲುಪದಿರಲು ಅಕ್ರಮ ಪಂಪ್ಸೆಟ್ಗಳು ಒಂದು ಕಾರಣವಾದರೆ, ಭದ್ರಾ ಕಾಡಾ ಅಧ್ಯಕ್ಷರ, ಅಧಿಕಾರಿಗಳ ಇಚ್ಚಾಶಕ್ತಿ, ಕೊರತೆ ಕೂಡಾ ಇನ್ನೊಂದು ಪ್ರಮುಖ ಕಾರಣವಾಗಿದೆ. ಇದರಿಂದಾಗಿ ನೀರಿನ ನಿರ್ವಹಣೆ ವಿಫಲವಾಗಿದೆ. ಕಾಲುವೆಗಳ ರಿಪೇರಿ, ಹೂಳು ತೆಗೆಯಲೂ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭದ್ರಾ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ.ದ್ಯಾವಪ್ಪರೆಡ್ಡಿ ಮಾತನಾಡಿ, ಇಂಜಿನಿಯರ್ಗಳು ನಾಲೆಗಳ ಮೇಲೆ ಹಗಲು-ರಾತ್ರಿ ಸಂಚರಿಸಿ, ನೀರಿನ ನಿರ್ವಹಣೆ ಮಾಡಿಸಿದರೆ ಮಾತ್ರ ಕೆಳ ಭಾಗಕ್ಕೆ ನೀರು ಬರುತ್ತದೆ ಎಂದರು.
ರೈತ ಸಂಘದ ಹಾಳೂರು ನಾಗರಾಜ್ ಮಾತನಾಡಿ, R2 ನಲ್ಲಿ ನಮ್ಮ ಭಾಗಕ್ಕೆ ನೀರು ಕಡಿಮೆ ಬರುತ್ತದೆ. ಹಾಗಾಗಿ ಕೊನೆ ಭಾಗಕ್ಕೆ ನೀರು ಬರುತ್ತಿಲ್ಲ. ನೀವು ನೀರು ಹರಿಸಲು ಸಾಧ್ಯವಾಗದಿದ್ದರೆ, ಬೆಳೆ ಪರಿಹಾರ ಕೊಡಿಸಿ ಎಂದು ಇಂಜಿನಿಯರ್ಗಳನ್ನು ಒತ್ತಾಯಿಸಿದರು.
ಯಲವಟ್ಟಿ ಯೋಮಕೇಶ್ವರಪ್ಪ, ಲಕ್ಕಶೆಟ್ಟಿಹಳ್ಳಿ ಕಾಳಪ್ಪ, ಸಿರಿಗೆರೆ ಬೂದಾಳ್ ತಿಪ್ಪಣ್ಣ, ಎಂ.ಜಿ.ಪರಮೇಶ್ವರಗೌಡ, ಜಗಳಿಯ ಬಿಳಸನೂರು ಚಂದ್ರಪ್ಪ, ನಂದಿತಾವರೆಯ ಮಂಜಳಮ್ಮ, ಮುರುಗೇಂದ್ರಯ್ಯ ಮತ್ತಿತರರು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿರಿಗೆರೆಯ ಎನ್.ಜಿ.ನಾಗನಗೌಡ್ರು ಮಾತನಾಡಿ, ಕೊನೆ ಭಾಗಕ್ಕೆ ರೈತರಿಗೆ ನೀರಿನ ವಿಷಯದಲ್ಲಿ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಕೈಗೊಂಡಿರುವ 3 ನಿರ್ಣಯಗಳ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹಾಕೋಣ ಎಂದರು.
ಶನಿವಾರ ಮಲೇಬೆನ್ನೂರಿನ ನೀರಾವರಿ ಕಚೇರಿ ಅಥವಾ ದಾವಣಗೆರೆ ಡಿಸಿ ಆಫೀಸ್ನಲ್ಲಿ ಭದ್ರಾ ಎಸ್ಇ ಅವರ ಸಮ್ಮುಖದಲ್ಲಿ ನೀರಿನ ನಿರ್ವಹಣೆ ಕುರಿತು ಡಿಸಿ ನಡೆಸುವುದಾಗಿ ಸಭೆಯ ಕೊನೆಯಲ್ಲಿ ಹರೀಶ್, ಶ್ರೀನಿವಾಸ್ ಮತ್ತು ದ್ಯಾವಪ್ಪರೆಡ್ಡಿ ತಿಳಿಸಿದರು.
ಸಿರಿಗೆರೆ ಗ್ರಾ.ಪಂ ಅಧ್ಯಕ್ಷ ಪ್ರಭು, ತಿಪ್ಪೇರುದ್ರಪ್ಪ, ಕೆ.ಜಿ.ಸದಾಶಿವಪ್ಪ, ರೈತ ಸಂಘದ ಪಾಲಾಕ್ಷಪ್ಪ, ಯಲವಟ್ಟಿಯ ಜಿ.ಆಂಜನೇಯ ಡಿ.ಹೆಚ್.ಚನ್ನಬಸಪ್ಪ, ಡಿ.ಹೆಚ್.ಮಹೇಂದ್ರಪ್ಪ, ಜಿಗಳಿಯ ನಾಗರಸನಹಳ್ಳಿ ಮಹೇಶ್ವರಪ್ಪ, ಜಿ.ಪಿ.ಹನುಮಗೌಡ, ಭಾನುವಳ್ಳಿಯ ಹೆಚ್.ಕೆ.ನಾರಾಯಣಪ್ಪ, ವಾಸನದ ವಸಂತಪ್ಪ, ಜೆ.ಪಿ.ಗೌಡ, ಪಾಳ್ಯದ ಗದಿಗೆಪ್ಪ, ಸಿರಿಗೆರೆಯ ಬಣಕಾರ್ ಉಮೇಶ್, ಶಿವಕುಮಾರ್, ಕುಂದೂರು ಮಂಜಪ್ಪ, ಕೆ.ರುದ್ರೇಶ್, ರಾಜು, ಕಮಲಾಪುರದ ಷಣ್ಮುಖಪ್ಪ ಸೇರಿದಂತೆ ನೂರಾರು ರೈತರು ಮತ್ತು ಎಇಇ ಕೃಷ್ಣಮೂರ್ತಿ ಸಭೆಯಲ್ಲಿದ್ದರು.