ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅಭಿಮತ
ದಾವಣಗೆರೆ, ಫೆ.26- ಪೋಕ್ಸೋ ಕಾಯ್ದೆಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ತ್ವರಿತ ನ್ಯಾಯದ ಜೊತೆಗೆ ಸೂಕ್ತ ನೆರವು ಹಾಗೂ ಸೌಲಭ್ಯಗಳು ದೊರಕುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್.ಹೆಗಡೆ ಹೇಳಿದರು.
ಸ್ಥಳೀಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದ ಸಭಾಂಗಣದಲ್ಲಿ ನಿನ್ನೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪೋಕ್ಸೋ ಸಭೆ ಹಾಗೂ ವಿಶೇಷ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ರಕ್ಷಣಾ ಕಾಯ್ದೆಗಳು ಸೇರಿದಂತೆ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಅರಿವು ಮೂಡಿಸಲು ನುರಿತ ವಕೀಲರ ತಂಡಗಳನ್ನು ರಚಿಸಿ, ಶಾಲೆಗಳಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು. ಆವರಗೆರೆ ಎಸ್‌ಪಿಎಸ್ ನಗರದಲ್ಲಿರುವ ಶಾಲೆಯಲ್ಲಿ ಲೈಬ್ರರಿ ಸ್ಥಾಪಿಸಬೇಕು. ಸಾಮಾಜಿಕವಾಗಿ ಹಿಂದುಳಿದ ವರ್ಗದವರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತಾಗಬೇಕು. ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಸಂತ್ರಸ್ತರಿಗೆ ತುರ್ತು ಮತ್ತು ಮಧ್ಯಂತರ ಪರಿಹಾರ ಸೇರಿದಂತೆ ಎಲ್ಲಾ ಸೌಲಭ್ಯಗಳು ಗರಿಷ್ಠ ಪ್ರಮಾಣದಲ್ಲಿ ದೊರಕಬೇಕು. ಅವರಿಗಿರುವ ಕಾನೂನಿನ ಅವಕಾಶಗಳ ಮಾಹಿತಿ ದೊರಕಿಸಲು ಇಲಾಖೆ ಮುಂದಾಗಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ಮಾತನಾಡಿ, ಶಾಲೆ, ಹಾಸ್ಟೆಲ್‌ಗಳಲ್ಲಿ ಗ್ರಂಥಾಲಯ ಇಲ್ಲದೇ ಇರುವುದು ತುಂಬಾ ಬೇಸರದ ಸಂಗತಿ. ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಹಾಸಿಗೆ ವ್ಯವಸ್ಥೆ, ಊಟ, ವಸತಿಯ ವ್ಯವಸ್ಥೆ, ಓದಲು ಬರೆಯಲು ಟೇಬಲ್ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಆಸ್ಪತ್ರೆಯ ಕಟ್ಟಡ ತುಂಬಾ ಹಳೆಯದಾಗಿದೆ. ಕೂಡಲೇ ಕಟ್ಟಡ ನವೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಬಾಣಂತಿ, ಗರ್ಭಿಣಿಯವರಿಗೆ ಗುಣಮಟ್ಟದ ಔಷಧಿ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹೆಚ್ಚು ಜಾಗೃತಿಯಿಂದ ಕೆಲಸ ನಿರ್ವಹಿಸಬೇಕು. ಉಪಯುಕ್ತವಾದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ಸ್ಥಳದಲ್ಲಿ ಇರಬೇಕು. ಸಿಡಿಪಿಒ ತಮ್ಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಿದರು.
ಪೋಕ್ಸೋ ಕಾಯ್ದೆ ಕುರಿತು ಎಲ್ಲಾ ಶಾಲಾ – ಕಾಲೇಜುಗಳಲ್ಲಿ ಜಾಗೃತಿ ನೀಡಬೇಕು. ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ, ಮಾನವ ಕಳ್ಳಸಾಗಣೆ ತಡೆ, ಬಾಲನ್ಯಾಯ ಮಂಡಳಿ ಸೇರಿದಂತೆ ಸಹಾಯಕ್ಕಾಗಿ ಇರು ವ ಮತ್ತು ತುರ್ತು ಸಂಪರ್ಕಕ್ಕಾಗಿ ಇರುವ ಸಹಾಯ ವಾಣಿಗಳ ಕುರಿ ತಂತೆ ಶಾಲಾ – ಕಾಲೇಜುಗಳ ಸೂಚನಾ ಫಲಕ ಗಳಲ್ಲಿ ವಿದ್ಯಾರ್ಥಿಗಳಿಗೆ ಕಾಣುವಂತೆ ಪ್ರದರ್ಶಿಸ ಬೇಕು. ಇಂತಹ ಕಾನೂನುಗಳ ವಿಷಯವಾಗಿ ವಿದ್ಯಾರ್ಥಿ ಗಳಿಗೆ ಅರಿವು ಮೂಡಿಸಬೇಕೆಂದು ಸೂಚನೆ ನೀಡಿದರು.
ಭಾಷಾ ನಗರ, ಆಜಾದ್ ನಗರ, ಗಾಂಧಿನಗರಗಳಲ್ಲಿ ತುಂಬಾ ಕಳ್ಳತನ ಪ್ರಕರಣಗಳು ಕಂಡು ಬಂದಿರುತ್ತವೆ. ಕೂಡಲೇ ಇದರ ಬಗ್ಗೆ ಕಾಳಜಿ ವಹಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಾರ್ಚ್ 8 ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ಅಷ್ಟರೊಳಗಾಗಿ ಎಲ್ಲಾ ರಾಜೀಯಾಗಬಲ್ಲ ಪ್ರಕರಣಗಳನ್ನು ಪಟ್ಟಿ ಮಾಡಿ, ಇತ್ಯರ್ಥಕ್ಕೆ ಕ್ರಮ ವಹಿಸಬೇಕು. ಸಾರ್ವಜನಿಕರು ಸಹ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಇಲಾಖೆಗಳು ಗಮನ ಹರಿಸಲು ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಂಜುನಾಥ್, ಜಿ.ಪಂ. ಯೋಜನಾ ನಿರ್ದೇಶಕ ಮಲ್ಲಾನಾಯ್ಕ, ವಕೀಲರಾದ ಬಸವರಾಜ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು