ಶಿವರಾತ್ರಿಯ ಆರಾಧನೆಗೆ ಸಜ್ಜಾದ ದೇವನಗರಿ

ಶಿವರಾತ್ರಿಯ ಆರಾಧನೆಗೆ ಸಜ್ಜಾದ ದೇವನಗರಿ

ದಾವಣಗೆರೆ, ಫೆ.25- ಶಿವನ ಆರಾಧನೆಯ ಶಿವರಾತ್ರಿ ಹಬ್ಬಕ್ಕೆ ಜಿಲ್ಲಾದ್ಯಂತ ಭಕ್ತಿಯ ಸಂಭ್ರಮ ಕಂಡುಬಂದಿದೆ. ಶಿವರಾತ್ರಿ ಮುನ್ನಾ ದಿನವಾದ ಮಂಗಳವಾರ ಶಿವರಾತ್ರಿಗಾಗಿ ಹಣ್ಣು, ಹೂವು, ಖರೀದಿ ಭರಾಟೆ ಜೋರಾಗಿತ್ತು. ಅದರಲ್ಲೂ ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಕರ್ಜೂರ್‌ ಹಣ್ಣುಗಳು ಮಾರಾಟ ಗರಿ ಗೆದರಿದೆ. 

ನಗರದಲ್ಲಿ ಫೆಬ್ರವರಿ ಆರಂಭದಿಂದಲೇ ಬಿಸಿಲಿನ ತಾಪಮಾನ ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ಎರಡು ವಾರಗಳಿಂದ ಬಿಸಿಲಿನ ತಾಪಕ್ಕೆ ದೇಹವನ್ನು ತಂಪಾಗಿಸುವ ಕಲ್ಲಂಗಡಿ, ದ್ರಾಕ್ಷಿ, ಕರಬೂಜ ಹಣ್ಣುಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. 

ಶಿವರಾತ್ರಿಯಲ್ಲಿ ಕಲ್ಲಂಗಡಿ, ದ್ರಾಕ್ಷಿ, ಕರಬೂಜ, ಹಣ್ಣುಗಳಿಗೆ ವಿಶೇಷ ಸ್ಥಾನಮಾನವಿದೆ. ಹೀಗಾಗಿ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ,  ಶಾಮಿಯಾನ ಹಾಕಿಕೊಂಡು ಕಲ್ಲಂಗಡಿ, ಕರಬೂಜ ಮಾರಾಟ ನಡೆಯುತ್ತಿದೆ.  ಪ್ರಮುಖವಾಗಿ ಆಂಧ್ರಪ್ರದೇಶ, ತಮಿಳುನಾಡಿನ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಅಂದ ಹಾಗೆ ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗು ತ್ತದೆ. ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿ ದಿನ ಶಿವನ ಆರಾಧನೆಗೆ  ಬಿಲ್ವ ಪತ್ರೆ ಮಹತ್ವ ಎನಿಸಿದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಭಕ್ತರು ಭಕ್ತಿಯಿಂದ ಒಂದು ಬಿಲ್ವ ಪತ್ರೆಯನ್ನು ಅರ್ಪಿಸಿದರೂ ಭಗವಾನ್ ಭೋಲೆನಾಥ ಭಕ್ತರ ಕೂಗಿಗೆ ಕಿವಿಗೊಡುತ್ತಾನೆ ಎಂದು ಹೇಳಲಾಗುತ್ತದೆ. ಹಾಗಾಗಿ, ಮಹಾಶಿವರಾತ್ರಿ ಹಬ್ಬದಲ್ಲಿ ಬಿಲ್ವಪತ್ರೆಗೆ ವಿಶೇಷ ಪ್ರಾಮುಖ್ಯತೆ ಇದೆ. ನಾಳೆ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಬಿಲ್ವಪತ್ರೆಗೆ ಬೇಡಿಕೆ ಹೆಚ್ಚಾಗಿದೆ.

ಶಿವರಾತ್ರಿ ಹಬ್ಬದ ನಿಮಿತ್ತ ಜಿಲ್ಲೆಯ ವಿವಿಧ ದೇವಸ್ಥಾನ ಗಳಲ್ಲಿ ಬುಧವಾರ ವಿಶೇಷ ಪೂಜೆಗಳು ನಡೆಯಲಿವೆ. ದೇವಸ್ಥಾನಗಳಿಗೆ ಬೆಳಿಗ್ಗೆಯಿಂದಲೇ ಭಕ್ತರು ಕುಟುಂಬ ಸಮೇತ ತೆರಳಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಒಟ್ಟಾರೆ ಶಿವನಾಮ ಸ್ಮರಣೆಗೆ ಭಕ್ತರು ಉತ್ಸುಕರಾಗಿದ್ದಾರೆ. ಮನೆಗಳಲ್ಲಿ ಶಿವನಿಗೆ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇಗುಲಗಳಲ್ಲಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳನ್ನು ನಡೆಸಲು ಸಿದ್ಧತೆಗಳು ನಡೆದಿವೆ.

error: Content is protected !!