ಮೂರನೇ ದಿನವೂ ಅರ್ಧ ಹೆಲ್ಮೆಟ್ ಕಾರ್ಯಾಚರಣೆ

ಮೂರನೇ ದಿನವೂ ಅರ್ಧ ಹೆಲ್ಮೆಟ್ ಕಾರ್ಯಾಚರಣೆ

ದಾವಣಗೆರೆ, ಫೆ.24- ಜಿಲ್ಲಾ ಪೊಲೀಸ್ ಇಲಾಖೆ ನಗರದಲ್ಲಿ ನಡೆಸುತ್ತಿರುವ ಅರ್ಧ ಹೆಲ್ಮೆಟ್ ಕಾರ್ಯಾಚರಣೆ ಸೋಮವಾರವೂ ಮುಂದುವರೆದಿದ್ದು, ನಗರದ ಹಲವೆಡೆ ಅರ್ಧ ಹೆಲ್ಮೆಟ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಅರ್ಧ ಹೆಲ್ಮೆಟ್ ಕಾರ್ಯಾಚರಣೆ ನಡೆಸಿದ ಪೊಲೀಸರು, ವಾಹನ ಸವಾರರಿಗೆ  ಹೆಲ್ಮೆಟ್ ಕುರಿತು ಅರಿವು ಮೂಡಿಸಿದರು.

ಬೆಳಗಿನಿಂದಲೂ ನಗರದಲ್ಲಿ ಸಂಚಾರ ಪೊಲೀಸ್ ವಿಭಾಗದ ಹಲವು ಅಧಿಕಾರಿಗಳು, ಪೇದೆಗಳು ವಿವಿಧ ವೃತ್ತಗಳಲ್ಲಿ ವಾಹನ ಸವಾರರಿಗೆ ಸುರಕ್ಷತೆ ಸಂಚಾರಕ್ಕಾಗಿ ಜಾಗೃತಿ ಅಭಿಯಾನ ನಡೆಸಿ ವಿಶೇಷವಾಗಿ ದ್ವಿಚಕ್ರ ಸವಾರರಿಗೆ ಸಂಪೂರ್ಣ ಸುರಕ್ಷತೆ ನೀಡುವ ಶಿರಸ್ತ್ರಾಣವನ್ನು ಧರಿಸುವಂತೆ ಮನವಿ ಮಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ನಡೆದ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಇಲ್ಲದ ಕಾರಣ ತಲೆಗೆ ಹಾನಿಯಾಗಿ ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ, ಎಎಸ್‌ಐ ಮಾರ್ಕ್‌ ಇರುವ ಹೆಲ್ಮೆಟ್‌ಗಳನ್ನು ಧರಿಸಿ ಪ್ರಾಣ ರಕ್ಷಿಸಿಕೊಳ್ಳುವಂತೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಎಂ. ಸಂತೋಷ್ ಕರೆ ನೀಡಿದರು.

ಪತ್ನಿ, ಮಕ್ಕಳು, ಹೆತ್ತವರು ಹೀಗೆ ಒಬ್ಬರನ್ನು  ನೆಚ್ಚಿಕೊಂಡು ಕುಟುಂಬದಲ್ಲಿ ಹಲವಾರು ಸದಸ್ಯರಿರುತ್ತಾರೆ. ಹೆಲ್ಮೆಟ್ ಧರಿಸದೆ ನಿರ್ಲಕ್ಷ್ಯ ವಹಿಸಿದಾಗ ಅಪಘಾತಗಳಾದರೆ ಎಲ್ಲರೂ ಬೀದಿಗೆ ಬರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹೆಲ್ಮೆಟ್ ಅತ್ಯಗತ್ಯವಾಗಿದೆ ಎಂದು ವಿಜಯಕುಮಾರ್ ಅವರು ಕಳಕಳಿ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಂತೆ ಕಳೆದ ಮೂರು ದಿನಗಳಿಂದ ವಾಹನ ಸವಾರರಿಗೆ ಹೆಲ್ಮೆಟ್ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. 5 ಸಾವಿರಕ್ಕೂ ಹೆಚ್ಚು ಹಾಫ್ ಹೆಲ್ಮೆಟ್ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಎರಡು ದಿನ ಈ ಜಾಗೃತಿ ಕಾರ್ಯಕ್ರಮ ಮುಂದುವರಿಯಲಿದೆ. ಅದಾದ ನಂತರ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಜಾಗೃತಿ ಅಭಿಯಾನದ ವೇಳೆ ನಗರ ಡಿವೈಎಸ್ಪಿ ಶರಣಬಸವೇಶ್ವರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ನಿವೃತ್ತ ಪೊಲೀಸ್ ಅಧಿಕಾರಿ ಪ್ರಹ್ಲಾದ್, ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ ನಲವಾಗಲು, ಪಿಎಸ್‌ಐಗಳಾದ ಜಯಶೀಲ, ಕೆ.ಎನ್. ಶೈಲಜಾ, ಇತರೆ ಸಿಬ್ಬಂದಿಗಳಿದ್ದರು.

error: Content is protected !!