ದಾವಣಗೆರೆ, ಫೆ.24- ಬಜೆಟ್‌ನಲ್ಲಿ ದೇವದಾಸಿ ಮಹಿಳೆಯರ ಪಿಂಚಣಿಯನ್ನು ಕನಿಷ್ಠ 3 ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘವು ಶುಕ್ರವಾರ ಪ್ರತಿಭಟನೆ ನಡೆಸಿತು.
ಜಿಲ್ಲೆಯ ಎಲ್ಲ ದೇವದಾಸಿ ಮಹಿಳೆಯರು ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗಕ್ಕೆ ಆಗಮಿಸಿ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒಕ್ಕೊರಲಿನಿಂದ ಘೋಷಣೆ ಕೂಗಿದರು.
ಈ ವೇಳೆ ಸಂಘದ ರಾಜ್ಯ ಉಪಾಧ್ಯಕ್ಷರಾದ ಟಿ.ವಿ. ರೇಣುಕಮ್ಮ ಮಾತನಾಡಿ, ಸರ್ವೆ ಪಟ್ಟಿಯಲ್ಲಿ ಕೈಬಿಟ್ಟಂತಹ ದೇವದಾಸಿ ಮಹಿಳೆಯರ ಸರ್ವೆ ಕಾರ್ಯ ಆರಂಭಿಸಬೇಕು. ದೇವದಾಸಿ ಮಹಿಳೆಯರ ಕುಟುಂಬದ ಎಲ್ಲಾ ಸದಸ್ಯರ ಗಣತಿಯನ್ನು ಆನ್‌ಲೈನ್‌ನಲ್ಲಿ ತುಂಬಲು ತಿಳಿಸಿದ್ದು, ಇದನ್ನು ತಡೆದು ಈ ಹಿಂದಿನಂತೆ ಅಂಗನವಾಡಿ ಕೇಂದ್ರ ಮತ್ತು ಕಾರ್ಯಕರ್ತೆಯರ ಮೂಲಕ ಗಣತಿಗೆ ಕ್ರಮ ವಹಿಸಲು ಶಿಫಾರಸ್ಸು ಮಾಡಬೇಕು ಎಂದರು.
ಸ್ವಯಂ ಉದ್ಯೋಗದ ನೆರವಿಗೆ ಈ ಹಿಂದೆ ಕೊಡಲಾಗುತ್ತಿದ್ದ 1 ಲಕ್ಷ ರೂ.ಗಳ ಸಹಾಯ ಧನವನ್ನು ಕೋವಿಡ್ ನೆಪದಲ್ಲಿ ಕಳೆದ 3 ವರ್ಷಗಳಿಂದ ನಿಲ್ಲಿಸಲಾಗಿದೆ.
ಇದನ್ನು ಮರು ಪ್ರಾರಂಭಿಸುವ ಜೊತೆಗೆ ಪ್ರಸ್ತುತ ಬೆಲೆ ಏರಿಕೆಯ ದಿನಮಾನಗಳಿಗೆ ತಕ್ಕಂತೆ 1.50 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ದೇವದಾಸಿ ಮಹಿಳೆಯರ ವಸತಿಗಾಗಿ ಉಚಿತ ನಿವೇಶನ ಬಿಡುಗಡೆಗೊಳಿಸಿ, ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಪಕ್ಕಾ ಮನೆ ಕಟ್ಟಿಕೊಡಬೇಕು. ಈ ವಸತಿ ನಿಗಮವು ಈ ದುರ್ಬಲ ಮಹಿಳೆಯರಿಂದ ವಂತಿಗೆಯನ್ನು ಕೇಳುತ್ತಿದೆ. ಹಾಗಾಗಿ ಸರ್ಕಾರವೇ ಈ ಮಹಿಳೆಯರ ಪರವಾಗಿ ವಂತಿಗೆ ನೀಡಲು ಅಗತ್ಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ದೇವದಾಸಿ ಮಹಿಳೆಯರು ಹಾಗೂ ಅವರ ಕುಟುಂಬದ ಸದಸ್ಯರಿಗೆ ತಲಾ 5 ಎಕರೆ ಜಮೀನು ಒದಗಿಸಬೇಕು ಮತ್ತು ಜಿಲ್ಲೆಯ ಸರ್ಕಾರಿ ಭೂಮಿಯಲ್ಲಿ ಅವರಿಗೆ ಖಾಲಿ ನಿವೇಶನ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷರಾದ ಚನ್ನಮ್ಮ, ಕಾರ್ಯದರ್ಶಿ ಮಂಜುಳಾ, ಸಿಐಟಿಯು ಕಾರ್ಯದರ್ಶಿ ಆನಂದರಾಜು, ದೇವರಮ್ಮ, ಹೊನ್ನಮ್ಮ, ಮೈಲಮ್ಮ, ಹುಚ್ಚಮ್ಮ, ಶಾಂತಮ್ಮ ಇತರರು ಇದ್ದರು.