ಸೋಮೇಶ್ವರ ವಿದ್ಯಾಲಯದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಕ್ಕಿ ಸಮರ್ಪಣೆಯಲ್ಲಿ ಕೆ.ಎಂ. ಸುರೇಶ್
ದಾವಣಗೆರೆ. ಫೆ. 24 – ದಾನಗಳಲ್ಲಿ ಶ್ರೇಷ್ಠ ಅನ್ನದಾನ ಕೂಡ ಒಂದು. ಅನ್ನದಾನ ಮಾಡುವುದು ಹಿಂದೂ ಧರ್ಮದ ಅತ್ಯಗತ್ಯ ಸದ್ಗುಣವಾಗಿದೆ ಎಂದು ನಗರದ ಶ್ರೀ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ. ಎಂ ಸುರೇಶ್ ತಿಳಿಸಿದರು.
ನಗರದಲ್ಲಿ ಮೂರನೇ ಬಾರಿಗೆ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಅಕ್ಕಿ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಸೋಮೇಶ್ವರ ವಿದ್ಯಾಲಯ ಕೇವಲ ಅಕ್ಷರ ಕಲಿಸುವ ಕೆಲಸ ಮಾಡುತ್ತಿಲ್ಲ, ಜೊತೆಗೆ ಮಕ್ಕಳಲ್ಲಿ ದಾನದ ಶ್ರೇಷ್ಠತೆಯನ್ನು ಮೈಗೂಡಿಸಿಕೊಳ್ಳುವಂತಹ ಮನೋಭಾವ ಬೆಳೆಸುತ್ತಿದೆ. ಈ ಕಾರಣ ಶಾಲಾ ಮಕ್ಕಳೂ ಸಹ ಒಂದು ಹಿಡಿ ಅಕ್ಕಿ ನೀಡುವ ಮೂಲಕ ಸೇವೆಯಲ್ಲಿ ಭಾಗಿಯಾಗಿದ್ದಾರೆ ಎಂದರು.
ಇದರ ಉದ್ದೇಶ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಪ್ರಾಥಮಿಕ ಹಂತದಲ್ಲಿಯೇ ಸಮಾಜ ಸೇವೆ ದಾನ ಧರ್ಮದಂತ ಕಾರ್ಯಕ್ರಮಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಬೇಕು. ಈ ಕಾರಣ ನಮ್ಮ ವಿದ್ಯಾಲಯ ವಿದ್ಯೆ ಜೊತೆಗೆ ಅನ್ನದಾನದ ಮಹತ್ವವನ್ನು ಈ ಮೂಲಕ ತಿಳಿಸುತ್ತಿದೆ ಎಂದರು.
ಬಳಿಕ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ಅನ್ನದಾನ, ಅಥವಾ ಆಹಾರವನ್ನು ದಾನ ಮಾಡುವ ಕ್ರಿಯೆಯು ಭಾರತೀಯ ಸಂಸ್ಕೃತಿಯಲ್ಲಿ ಮಹತ್ತರವಾದ ಮಹತ್ವವನ್ನು ಹೊಂದಿದೆ. ಇದು ದಾನಿಗೆ ಆಶೀರ್ವಾದ ಮತ್ತು ಅಧ್ಯಾತ್ಮಿಕ ಅರ್ಹತೆಯನ್ನು ತರುತ್ತದೆ ಎಂದು ತಿಳಿಸಿದರು.
ನೀವು ಅಕ್ಷಯ ಚೈತನ್ಯದ ಮೂಲಕ ಆಹಾರವನ್ನು ದಾನ ಮಾಡಿದಾಗ, ನೀವು ನಿಮ್ಮ ಧಾರ್ಮಿಕ ಜವಾಬ್ದಾರಿಗಳನ್ನು ಪೂರೈಸುವುದು ಮಾತ್ರವಲ್ಲದೆ ಹಸಿವನ್ನು ನಿವಾರಣೆ ಮಾಡುವಲ್ಲಿಯೂ ಪಾತ್ರ ವಹಿಸುತ್ತದೆ, ಹೀಗಾಗಿ ಸುರೇಶ್ ಅವರು ಮಕ್ಕಳನ್ನು ದಾನದ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಉತ್ತಮ ಸೇವೆ ಎಂದರು.
ಈ ವೇಳೆ ಯುವ ಮೋರ್ಚಾ ನಿಕಟಪೂರ್ವ ಕಾರ್ಯದರ್ಶಿ ವೀರಣ್ಣ, ಶಾಲೆಯ ಪ್ರಾಚಾರ್ಯರು, ಆಡಳಿತಾಧಿಕಾರಿಗಳು, ಶೈಕ್ಷಣಿಕ ನಿರ್ದೇಶಕರು, ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.