ಸೈಬರ್‌ ವಂಚಕರಿಂದ ಸುರಕ್ಷಿತವಾಗಿರಿ : ಪಿ.ಎನ್. ಲೋಕೇಶ್

ಸೈಬರ್‌ ವಂಚಕರಿಂದ ಸುರಕ್ಷಿತವಾಗಿರಿ : ಪಿ.ಎನ್. ಲೋಕೇಶ್

ಪ್ರಸ್ತುತ ದಿನಗಳಲ್ಲಿ ಸೈಬರ್‌ ಅಪರಾಧಗಳು ಹೆಚ್ಚಾಗಿದ್ದು, ಸಾರ್ವಜನಿಕರು ಆನ್‌ಲೈನ್‌ ಮೂಲಕ ಹಣಕಾಸು ವಂಚನೆ, ಬೆದರಿಕೆ ಕರೆ ಹಾಗೂ ಮಾಹಿತಿ ಕಳ್ಳತನ ಸೇರಿದಂತೆ ಇತರೆ ಸಮಸ್ಯೆಗೆ ತುತ್ತಾದಲ್ಲಿ ಸೈಬರ್ ಸಹಾಯವಾಣಿ 1930 ಕರೆ ಮಾಡಿ, ದೂರು ನೋಂದಾಯಿಸಿ.

ದಾವಣಗೆರೆ, ಫೆ. 23 – ಮಾಹಿತಿ ತಂತ್ರಜ್ಞಾನದ ಕಾಲಘಟ್ಟದಲ್ಲಿ ಇಂಟರ್ ನೆಟ್ ಬಹಳ ಮುಖ್ಯವಾಗಿದ್ದು, ಇದನ್ನು ಸದುದ್ದೇಶಕ್ಕೆ ಬಳಕೆ ಮಾಡಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುರಕ್ಷಿತ ಅಂತರ್ಜಾಲ ದಿನ ಉದ್ದೇಶಿಸಿ ಮಾತಾನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವ ಜನತೆ ಅಂತರ್ಜಾಲವನ್ನು ಹೆಚ್ಚು ವೀಕ್ಷಣೆ ಮಾಡುತ್ತಿದ್ದಾರೆ ಎಂದರು.

ಯುವಕರು ಜ್ಞಾನಾರ್ಜನೆ ದೃಷ್ಟಿಯಿಂದ ಇಂಟರ್‌ನೆಟ್‌ ಬಳಕೆ ಮಾಡಿಕೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ್ಜಾಲ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಸುರಕ್ಷಿತ ಬ್ರೌಸಿಂಗ್, ವ್ಯಾಟ್ಸ್‌ಆಪ್‌ನಲ್ಲಿ ಸುರಕ್ಷಿತ ಸಂದೇಶ ಕಳುಹಿಸಲು ಹಾಗೂ ಅಧಿಕಾರಿಗಳು ಡೇಟಾ ಹಾಗೂ ಬಳಕೆದಾರ ಐಡಿ, ಪಾಸ್‍ವರ್ಡ್, ಒಟಿಪಿ ಮತ್ತು ಡಿಜಿಟಲ್ ಸಹಿ ಟೋಕನ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ತಿಳಿಸಿದರು.

ಇತರರ ಸಾಧನಗಳಲ್ಲಿ ಸ್ಥಾಪಿಸಲಾದ ಅಪ್ಲಿಕೇಶನ್‍ಗಳನ್ನು ನಿಮ್ಮ ವಿವರಗಳೊಂದಿಗೆ ನೋಂದಾಯಿಸಬಾರದು. ಡೇಟಾವನ್ನು ಹಂಚಿಕೊಳ್ಳಲು ಅಧಿಕಾರ ಹೊಂದಿದ್ದರೆ, ಡೇಟಾವನ್ನು ಪಾಸ್‍ವರ್ಡ್ ರಕ್ಷಿತ ಫೈಲ್‍ಗಳೊಂದಿಗೆ ಮಾತ್ರ ಹಂಚಿಕೊಳ್ಳಬೇಕು ಎಂದರು.

ರಾಷ್ಡ್ರೀಯ ಮಾಹಿತಿ ಕೇಂದ್ರದ ಅಧಿಕಾರಿ ಎಂ.ಎಸ್. ರಮೇಶ್ ಮಾತನಾಡಿ, ಆಧಾರ್ ಕಾರ್ಡ್, ಪಾನ್ ಕಾರ್ಡ್,  ವೈದ್ಯಕೀಯ ವಿವರಗಳು ಪಾಸ್‍ಪೋರ್ಟ್ ವಿವರ, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ ಇಂತಹ ಗುರುತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಹೇಳಿದರು.

ಈ ವೇಳೆ ಜಿಲ್ಲಾ ಸರ್ಜನ್ ನಾಗೇಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರವಿಚಂದ್ರ, ಶಿರಸ್ತೇದಾರ್ ಶ್ರೀನಿವಾಸ್, ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕ ರಾಕೇಶ್ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಇದ್ದರು.

error: Content is protected !!