ರಾಜ್ಯದ ಮೀಸಲಾತಿ ಪ್ರಮಾಣ ಹೆಚ್ಚಲಿ

ರಾಜ್ಯದ ಮೀಸಲಾತಿ ಪ್ರಮಾಣ ಹೆಚ್ಚಲಿ

ಛತ್ರಪತಿ ಶಿವಾಜಿ ಜಯಂತ್ಯುತ್ಸವದಲ್ಲಿ ಸಚಿವ ಸಂತೋಷ್‌ ಲಾಡ್‌ ಒತ್ತಾಯ

ಅಂಬೇಡ್ಕರ್ ಪರಿಶಿಷ್ಟರಿಗೆ ಮಾತ್ರ ಸೀಮಿತ ಎಂಬ ಭಾವನೆ ತಪ್ಪು. ಅವರು ಎಸ್ಸಿ-ಎಸ್ಟಿಗಳಿಗೆ ಶೇ.15ರಷ್ಟು ಮೀಸಲಾತಿ ಕಲ್ಪಿಸಿದ್ದರೆ, ಹಿಂದುಳಿದ ವರ್ಗಗಳಿಗೆ ಶೇ.29ರಷ್ಟು ಮೀಸಲು ನೀಡಿದ್ದಾರೆ.

– ಪಿ.ಜಿ.ಆರ್. ಶಿಂಧ್ಯಾ, ಮಾಜಿ ಸಚಿವ

ಪಿ.ಜಿ.ಆರ್. ಶಿಂಧ್ಯಾ ಬೇರೆ ಪಕ್ಷದಲ್ಲಿ ಇದ್ದಿದ್ದರೆ ಮುಖ್ಯಮಂತ್ರಿಯಾಗುತ್ತಿದ್ದರು. ಆದರೆ, ಅವರ ಪಕ್ಷದಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಮುಂದಿನ ದಿನಗಳಲ್ಲಿ ನಾಡಿನ ದೊರೆ ಆಗಬಹುದು.

– ಹೆಚ್‌. ಆಂಜನೇಯ, ಮಾಜಿ ಸಚಿವ

ದಾವಣಗೆರೆ, ಫೆ.21- ರಾಜ್ಯದಲ್ಲಿ ರುವ ಮೀಸಲಾತಿ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಳ ಮಾಡಬೇಕು. ಇದರಿಂದ ಮರಾಠ ಸೇರಿದಂತೆ ಇತರೆ ಸಣ್ಣ, ಪುಟ್ಟ ಸಮುದಾಯಗಳಿಗೂ ಮೀಸಲಾತಿ ಸಿಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ವತಿಯಿಂದ ನಗರದ ಶ್ರೀ ಡಿ. ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಭವಾನಿ ಕಲ್ಯಾಣ ಮಂಟಪದ ಉದ್ಘಾಟನೆ ಹಾಗೂ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಮಿಳುನಾಡು ಸರ್ಕಾರದ ಮಾದರಿ ಯಲ್ಲಿ ರಾಜ್ಯ ಸರ್ಕಾರವು ಮೀಸಲಾತಿ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ ಅವರು, ನಾನು ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವು ದರ ಪರ ಇದ್ದೇನೆ ಎಂದು ತಿಳಿಸಿದರು.

ಶಾಹು ಮಹಾರಾಜರು ಅಂಬೇಡ್ಕರ್ ಅವರನ್ನು ಓದಿಸದಿದ್ದರೆ, ಅವರು ಸಂವಿಧಾನ ಬರೆಯಲು ಸಾಧ್ಯವಾಗುತ್ತಿ ರಲಿಲ್ಲ. ಸಂವಿಧಾನದಲ್ಲಿ ಹಿಂದೂ ಕೋಡ್ ಬಿಲ್ ತರದೇ ಹೋಗಿದ್ದರೆ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗುತ್ತಿರಲಿಲ್ಲ ಎಂದರು.

ಶಿವಾಜಿ ಸಲಹೆಗಾರ ಮುಸ್ಲಿಂ ಆಗಿದ್ದರು. ಮರಾಠ ಮತ್ತು ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಲ್ಲ. ಹೀಗೆ ಹೇಳುವವರು ಯಾರೂ ಇತಿಹಾಸ ಓದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬರುವುದನ್ನು ನೋಡಿ ತಪ್ಪು ಮಾಹಿತಿ ಹೇಳಬೇಡಿ. ಮಕ್ಕಳಿಗೆ ಸರಿಯಾದ ಇತಿಹಾಸ ತಿಳಿಸಬೇಕು. ಎಲ್ಲಾ ಧರ್ಮ, ಜಾತಿಗಳ ಜನರು ಒಂದೇ ತಾಯಿಯ ಮಕ್ಕಳಂತೆ ಸಹೋದರತ್ವದಿಂದ ಬಾಳಿ ಬದುಕಬೇಕು ಎಂದು ಹೇಳಿದರು.

ಶಿವಾಜಿ ಜಯಂತಿಯಿಂದ ಹಾಗೂ ಗುಡಿ-ಗುಂಡಾರಕ್ಕೆ ಅನುದಾನ ಕೇಳುವುದರಿಂದ ಸಮಾಜ ಅಭಿವೃದ್ಧಿಯಾಗಲ್ಲ. ಮಕ್ಕಳಿಗೆ ಶಿಕ್ಷಣದ ಜತೆಗೆ ವ್ಯವಹಾರದ ಕೌಶಲ್ಯ ಕಲಿಸಬೇಕು. ನೀವು ಬಯಸಿದರೆ ಉದ್ಯೋಗ ಮೇಳ ಆಯೋಜಿಸಿ ನಮ್ಮ ಸಮುದಾಯದ ಯುವಕರಿಗೆ ಉದ್ಯೋಗ ಕಲ್ಪಿಸಲು ಪ್ರಯತ್ನಿಸುತ್ತೇನೆ ಎಂದರು.

ಮಾಜಿ ಸಚಿವ ಪಿ.ಜಿ.ಆರ್. ಶಿಂಧ್ಯಾ ಮಾತನಾಡಿ, ಕಾಂತರಾಜ್ ವರದಿ ಆಧಾರದ ಮೇಲೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲು ನೀಡಬೇಕು. ನಮಗೆ ಮೀಸಲಾತಿ ನೀಡದ ಕಾರಣ ನಮ್ಮ ಮಕ್ಕಳು ಐಪಿಎಸ್, ಐಎಎಸ್ ಮಾಡಲಾಗುತ್ತಿಲ್ಲ ಎಂಬ ತಪ್ಪು ಕಲ್ಪನೆಯಿಂದ ಹೊರ ಬನ್ನಿ. ಏಕೆಂದರೆ ಮೀಸಲಾತಿಯಿಂದ ಕ್ರಾಂತಿಯಾಗಲ್ಲ. ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರನ್ನು ವ್ಯಾಪಾರ-ವಹಿವಾಟಿನಲ್ಲಿ ತೊಡಗಿಸಿ ಎಂದು ಸಲಹೆ ನೀಡಿದರು.

ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ಸ್ವಾಭಿಮಾನದಿಂದ ಜೀವನ ನಡೆಸಿ ಹಿಂದುತ್ವ ಮತ್ತು ಸನಾತನ ಧರ್ಮವನ್ನು ಉಳಿಸಿದ ಕೀರ್ತಿ ಮರಾಠ ಸಮಾಜಕ್ಕೆ ಸಲ್ಲುತ್ತದೆ. ನೀವು ಕೊಟ್ಟ ಮಾತನ್ನು ತಪ್ಪುವುದಿಲ್ಲ. ಈ ಸಮಾಜದ ಜತೆ ಸದಾ ಇರುತ್ತೇನೆ ಎಂದು ಹೇಳಿದರು.

ಮಾಜಿ ಸಚಿವ ಹೆಚ್. ಆಂಜನೇಯ ಮಾತನಾಡಿ, ಇಂದು ಉದ್ಘಾಟನೆಯಾಗಿರುವ ಶ್ರೀ ಭವಾನಿ ಕಲ್ಯಾಣ ಮಂಟಪ ಬಡ ಮತ್ತು ಮಧ್ಯಮ ವರ್ಗದವರ ಕಲ್ಯಾಣ ಕಾರ್ಯಕ್ರಮಗಳಿಗೆ ಕಡಿಮೆ ದರದಲ್ಲಿ ಸಿಗಲಿ ಎಂದು ಮನವಿ ಮಾಡಿದರು.

ದೇಶಕ್ಕೆ ಶ್ರಮಜೀವಿಗಳಾಗಿರುವ ಮರಾಠರ ಕೊಡುಗೆ ಅಪಾರವಾಗಿದೆ. ಅಂಬೇಡ್ಕರ್ ಅವರಿಗೆ ಅಸಹಾಯ ಮಾಡಿದ ಹಾಗೂ ದುರ್ಬಲರು, ಅಸಾಯಕರು ಮತ್ತು ಅವಕಾಶ ವಂಚಿತರಿಗೆ ಮೀಸಲಾತಿ ಕಲ್ಪಿಸಿದ ಶಾಹು ಮಹಾರಾಜರನ್ನು ಮರೆಯಲು ಸಾಧ್ಯವೇ ಇಲ್ಲ ಎಂದರು.

ಬೆಂಗಳೂರಿನ ಗೋಸಾಯಿ ಮಠದ ಶ್ರೀ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ಪ್ರಾಸ್ತಾವಿಕ ಮಾತನಾಡಿದರು.

ಈ ವೇಳೆ ಸಂಘದ ಅಧ್ಯಕ್ಷ ಮಾಲತೇಶರಾವ್ ಜಾಧವ್, ವಿಧಾನ ಪರಿಷತ್ ಸದಸ್ಯ ಎಂ.ಜಿ. ಮೂಳೆ, ನಿಗಮ ಮಂಡಳಿ ವ್ಯವಸ್ಥಾಕ ನಿರ್ದೇಶಕ ಡಾ.ಪ್ರಕಾಶ್ ಪಾಗೋಜಿ, ಖಜಾಂಚಿ ಎಂ. ಗೋಪಾಲ್‌ರಾವ್ ಮಾನೆ, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್, ಕಾಂಗ್ರೆಸ್ ಮುಖಂಡ ಎಂ.ಟಿ. ಸುಭಾಷ್ ಇತರರಿದ್ದರು.

error: Content is protected !!