ಹರಪನಹಳ್ಳಿಯಲ್ಲಿ ಪುರಸಭೆ ಸಾಮಾನ್ಯ ಸಭೆ
ಹರಪನಹಳ್ಳಿ, ಫೆ. 19 – ಪಟ್ಟಣದ ವಿವಿಧ ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಸದಸ್ಯ ಜಾಕಿರ್ ಒತ್ತಾಯಿಸಿದರು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಪುರಸಭೆಯಲ್ಲಿ ನಮಗೆ ಕಡಿಮೆ ಅವಧಿ ಇದ್ದು ವಾರ್ಡಗಳ ಅಭಿವೃದ್ಧಿಗೆ ಅನುದಾನ ನೀಡಿ ಎಂದು ಮನವಿ ಮಾಡಿದರು.
ಶಾಸಕರಾದ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ತಾಲ್ಲೂಕಿನ ಎಲ್ಲಾ ವಾರ್ಡುಗಳಿಗೂ ಅನುದಾನ ಒದಗಿಸುತ್ತಿದ್ದೇವೆ. ಪಟ್ಟಣದ ಅಭಿವೃದ್ಧಿ ಪಡಿಸಲು ಸಾಧ್ಯವಾದಷ್ಟು ಅನುದಾನ ಒದಗಿಸಲು ಪ್ರಯತ್ನಿಸುವೆ ಎಂದು ತಿಳಿಸಿದರು.
ಕಳೆದ 25 ವರ್ಷಗಳಿಂದಲೂ ಪಟ್ಟಣದ ಮಾಸ್ಟರ್ ಪ್ಲಾನ್ ಮಾದರಿ ಇನ್ನೂ ರೆಡಿಯಾಗಿಲ್ಲ ಇದಕ್ಕಾಗಿ ಮೀನಾ-ಮೇಷ ಎಣಿಸುತ್ತಿರುವುದು ಸರಿಯಾದ ಕ್ರಮವಲ್ಲ. ಒಂದು ತಿಂಗಳೊಳಗೆ ಈ ಸಮಸ್ಯೆ ಬಗೆಹರಿಸದಿದ್ದರೆ ಪುರಸಭೆಯ ಮುಂದೆ ಧರಣಿ ನಡೆಸುತ್ತೇವೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯ ಅಧಿಕಾರಿ ಶಿವಕುಮಾರ್, ಪುರಸಭೆಯಿಂದ ಯಾವುದೇ ವಿಳಂಬ ನೀತಿ ಅನುಸರಿಸಿಲ್ಲ. ನಾವು ಪ್ರಾಧಿಕಾರಕ್ಕೆ ಬೇಕಾದ ಎಲ್ಲಾ ಮಾಹಿತಿಗಳನ್ನು ಒದಗಿಸಿರುತ್ತೇವೆ. ಇನ್ನು ಹೆಚ್ಚಿನ ಕ್ರಮ ಅವರಿಂದಲೇ ಆಗಬೇಕು. ಇದರಲ್ಲಿ ನಮ್ಮಿಂದ ಯಾವುದೇ ತಪ್ಪು ಇರುವುದಿಲ್ಲ ಎಂದರು.
ಪಟ್ಟಣದ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆ ಅನುದಾನದಡಿ ಹಣ ನೀಡಿ ಎಂದು ಪುರಸಭೆ ಸದಸ್ಯ ಹರಾಳು ಅಶೋಕ ಕೇಳಿದ ಪ್ರಶ್ನೆಗೆ, ಶಾಸಕರು ಉತ್ತರಿಸಿ ಪರಿಸ್ಥಿತಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಪುರಸಭೆಯಲ್ಲಿ ಯಾವುದೇ ಪಕ್ಷದ ಸದಸ್ಯರು ಇರಲಿ, ಎಲ್ಲರಿಗೂ ಅಭಿವೃದ್ಧಿಗಾಗಿ ನಾನು ಸಹಕರಿಸುವೆ ಎಂದು ಶಾಸಕರು ತಿಳಿಸಿದರು. ಬೆನ್ನೂರು ಲೇಔಟ್ ನಲ್ಲಿ ಅತ್ಯಂತ ಕಳಪೆ ಕಾಮಗಾರಿ ರಸ್ತೆ ನಿರ್ಮಿಸಲಾಗಿದೆ.
ಮೇಗಳಪೇಟೆ ವೀರಶೈವ ಸಮಾಜದ ರುದ್ರಭೂಮಿ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಅದು ಸಾರ್ವಜನಿಕವಾಗಿ ಮಾತ್ರ ನೀಡಲು ಸಾಧ್ಯವೆಂದು ಸದಸ್ಯರಿಗೆ ಉತ್ತರಿಸಿದರು.
ಪಟ್ಟಣದಲ್ಲಿ 16 ರುದ್ರಭೂಮಿಗಳು ಇದ್ದು ಅದರಲ್ಲಿ ಒಂದು ಕೂಡಾ ಸ್ವಚ್ಛತೆಯಿಂದಿಲ್ಲ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದರು. ಕೂಡಲೇ ಅದನ್ನು ಸ್ವಚ್ಚಗೊಳಿಸಲು ಸೂಚಿಸಿ, ಸ್ಮಶಾನ ನಿರ್ಮಾಣದಲ್ಲಿ ಜಿಲ್ಲೆಯಲ್ಲಿಯೇ ನಮ್ಮ ತಾಲ್ಲೂಕು ಪ್ರಥಮ ಸ್ಥಾನ ಹೊಂದಿದೆ ಎಂದು ಶಾಸಕರು ತಿಳಿಸಿದರು.
ಬೀದಿ ದೀಪ, ಕುಡಿಯುವ ನೀರು, ಉದ್ಯಾನವನಗಳ ಅಭಿವೃದ್ಧಿ, ನಗರ ಸೌಂದರ್ಯೀಕರಣ ಮತ್ತು ಸರ್ಕಲ್‌ಗಳಿಗೆ ಮಹಾನ್ ವ್ಯಕ್ತಿಗಳ ನಾಮಕರಣ ಮಾಡಲು ಚರ್ಚಿಸಿ ಕುಡಿಯುವ ನೀರು ಬೀದಿ ದೀಪ ಇವುಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಪುರಸಭೆ ಅಧ್ಯಕ್ಷೆ ಫಾತಿಮಾ ಶೇಕ್ಷಾವಲಿ, ಉಪಾಧ್ಯಕ್ಷ ಹೆಚ್ ಕೊಟ್ರೇಶ್, ಸದಸ್ಯರಾದ ಎಂ.ವಿ.ಅಂಜಿನಪ್ಪ, ಗೊಂಗಡಿ ನಾಗರಾಜ್, ಗಣೇಶ್, ಕಿರಣ್ ಕುಮಾರ್ ಶಾನುಭೋಗ್, ಮಂಜುನಾಥ್ ಇಜಂತ್ಕರ್ ಸೇರಿದಂತೆ ಅನೇಕರು ಇದ್ದರು