ಮಾರ್ಚ್ 8 ರಂದು ಜಿಲ್ಲೆಯಲ್ಲಿ ಲೋಕ ಅದಾಲತ್

ಮಾರ್ಚ್ 8 ರಂದು ಜಿಲ್ಲೆಯಲ್ಲಿ ಲೋಕ ಅದಾಲತ್

ಲೋಕ ಅದಾಲತ್ ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರಿಗೆ ಜಿಲ್ಲಾ ನ್ಯಾಯಾಧೀಶರಾದ  ರಾಜೇಶ್ವರಿ  ಹೆಗಡೆ ಕರೆ

ದಾವಣಗೆರೆ, ಫೆ. 18 – ಬರುವ ಮಾರ್ಚ್ 8 ರಂದು ನಡೆಯುವ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ, ರಾಜೀ ಆಗಬಹುದಾದ ಎಲ್ಲಾ ರೀತಿಯ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿನ ವಕೀಲರ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಿಗಳ ಆದೇಶದ ಮೇರೆಗೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಮಾರ್ಚ್ 8 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದರು.

ಸಿವಿಲ್ ವ್ಯಾಜ್ಯ, ಮೋಟಾರ್ ವಾಹನ ಅಪಘಾತ ಪರಿಹಾರದ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ವಿದ್ಯುತ್ ಮಂಡಳಿ ಮುಂತಾದ ಸ್ಥಳೀಯ ಸಂಸ್ಥೆಗಳ ಪರ ಮತ್ತು ವಿರುದ್ಧ ದಾಖಲಾದ ಪ್ರಕರಣಗಳು, ಬ್ಯಾಂಕ್, ಸಹಕಾರಿ ಸಂಘ, ಖಾಸಗಿ ವ್ಯಕ್ತಿಗಳ ನಡುವಿನ ಚೆಕ್ ಅಮಾನ್ಯ, ಹಣ ವಸೂಲಾತಿ ಪ್ರಕರಣಗಳಿಗೆ ಸಂಬಂಧಿಸಿದ ವ್ಯಾಜ್ಯಗಳು, ವೈವಾಹಿಕ ಪ್ರಕರಣಗಳು ವಿವಾಹ ವಿಚ್ಛೇದನ  ಹೊರತುಪಡಿಸಿ ಇತರೆ  ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬಹುದೆಂದರು.

ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರ ಣಗಳು, ಕಾರ್ಮಿಕ ನಷ್ಟ ಪರಿಹಾರ ಪ್ರಕರಣ ಗಳು, ಕಾನೂನಿನಲ್ಲಿ ರಾಜೀ ಆಗಬಹುದಾದ ಎಲ್ಲಾ ತರಹದ ಕ್ರಿಮಿನಲ್ ಪ್ರಕರಣಗಳನ್ನು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗು ವುದು. ಸಿವಿಲ್ ವ್ಯಾಜ್ಯಗಳಲ್ಲಿ ಪಕ್ಷಗಾರರು ಲೋಕ್ ಅದಾಲತ್‌ನಲ್ಲಿ ರಾಜಿಯಾದರೆ ಪಕ್ಷಗಾರರು ಸರ್ಕಾರಕ್ಕೆ ಪಾವತಿಸಿರುವ ನ್ಯಾಯಾಲಯದ ಶುಲ್ಕವನ್ನು ವಾಪಸ್ಸು ಕೊಡಲು ಅವಕಾಶವಿದೆ ಎಂದು ತಿಳಿಸಿದರು.

1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಹೆಚ್. ಅಣ್ಣಯ್ಯನವರ್ ಮಾತನಾಡಿ, ಲೋಕ್ ಅದಾಲತ್‌ನ ಮೂಲಕ ಸಾರ್ವಜನಿಕರಿಗೆ ಶೀಘ್ರ ಮತ್ತು ಕಡಿಮೆ ಖರ್ಚಿನಲ್ಲಿ ನ್ಯಾಯ ಒದಗಿಸುವಲ್ಲಿ ವಕೀಲರ ಪಾತ್ರ ಬಹು ಮುಖ್ಯವಾಗಿದೆ. ವಕೀಲರು ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ ಅತ್ಯುತ್ತಮ ಮಾರ್ಗ ಗಳನ್ನು ನೀಡಬೇಕೆಂದು ಕರೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಮಾತನಾಡಿ, ಲೋಕ್ ಆದಾಲತ್‌ನಲ್ಲಿ ಉಭಯ ಪಕ್ಷಗಾರರು ಪರಸ್ಪರ ಒಪ್ಪಿದಲ್ಲಿ ಮಾತ್ರ ರಾಜೀ ಮಾಡಿಕೊಳ್ಳಬಹುದು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆಶಯದಂತೆ ಲೋಕ್ ಆದಾಲತ್ ಮುಖಾಂತರ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಲೋಕ್‌ಆದಾಲತ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಸಾರ್ವಜನಿಕರು ವಿಶೇಷವಾಗಿ ಕಕ್ಷಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ಲೋಕ ಅದಾಲತ್‌ ಅನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ ಕುಮಾರ್‌ ಮಾತನಾಡಿ, ದಾವಣಗೆರೆ ಜಿಲ್ಲೆಯ ವಕೀಲರು ತಮ್ಮ ಬಳಿ ಬರುವ ಕಕ್ಷಿಗಾರರಿಗೆ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಯತ್ನ ಮಾಡುತ್ತಾ ಬಂದಿದ್ದು, ಈ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪ್ರಶಂಸನೀಯ ಪತ್ರಗಳು ಕೂಡ ಬಂದಿವೆ ಎಂದು ನೆನಪಿಸಿದರು. 

ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಕೊಡುವ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವ ಲೋಕ್ ಅದಾಲತ್ ಮತ್ತು ಕಾನೂನು ಸೇವೆಗಳ ಪ್ರಕ್ರಿಯೆಗಳಲ್ಲಿ ವಕೀಲರು ಯಾವುದೇ ಹಿಂಜರಿಕೆ ಇಲ್ಲದೆ ಭಾಗವಹಿಸುತ್ತಾರೆಂದು ಎಲ್ಲಾ ವಕೀಲರ ಪರವಾಗಿ ಮಾತನಾಡಿದರು.

ಸಭೆಯಲ್ಲಿ ದಾವಣಗೆರೆ ಘಟಕದ ನ್ಯಾಯಾಧೀಶರು, ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ಹಾಗೂ ಮಹಿಳಾ ನ್ಯಾಯವಾದಿಗಳು ಭಾಗವಹಿಸಿದ್ದರು. 

ಕಾರ್ಯದರ್ಶಿ ಎಸ್. ಬಸವರಾಜ್ ನಿರೂಪಿಸಿದರೆ, ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಸ್ವಾಗತಿಸಿದರು.

error: Content is protected !!