ದಾವಣಗೆರೆ, ಫೆ.17- ಸರ್ಕಾರಿ ಆಸ್ಪತ್ರೆಗಳನ್ನು ಉಳಿಸುವ ಜತೆಗೆ ಸುಸಜ್ಜಿತಗೊಳಿಸಬೇಕು ಮತ್ತು ಆರೋಗ್ಯ ಕ್ಷೇತ್ರದ ಖಾಸಗೀಕರಣ ನಿಲ್ಲಿಸಬೇಕೆೆಂದು ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ವತಿಯಿಂದ ನಗರದ ಉಪ ವಿಭಾಗಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿತು.
ಎ.ಸಿ. ಕಚೇರಿ ಬಳಿ ಜಮಾಯಿಸಿದ ಸಂಘಟನೆಯ ಪದಾಧಿಕಾರಿಗಳು ಬೇಡಿಕೆ ಈಡೇರಿಸುವಂತೆ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮುಖ್ಯಮಂತ್ರಿಗಳಿಗೆ ರವಾನಿಸುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು. ಜಯದೇವ ಹೃದ್ರೋಗ ಆಸ್ಪತ್ರೆಯ ಜಿಲ್ಲಾ ಘಟಕವನ್ನು ನಗರದಲ್ಲಿ ಸ್ಥಾಪಿಸಬೇಕು. ಜಿಲ್ಲಾಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ, ಪಿಹೆಚ್‌ಸಿ ಹಾಗೂ ತಾಲ್ಲೂಕು ಆಸ್ಪತ್ರೆಗಳ ಗುಣಮಟ್ಟ ಹೆಚ್ಚಿಸುವ ಜತೆಗೆ, ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಬೆಡ್ ಹಾಗೂ ವೈದ್ಯರ ಸಂಖ್ಯೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಆಸ್ಪತ್ರೆಗೆ ಅವಶ್ಯಕ ಸುಸಜ್ಜಿತ ಕಟ್ಟಡ, ಕೊಠಡಿಗಳು, ಶೌಚಾಲಯ, ಶುದ್ಧ ಕುಡಿಯುವ ನೀರು, ಮೂಲಭೂತ ಆಧುನಿಕ ಯಂತ್ರೋಪಕರಣಗಳು ಹಾಗೂ ಇತರೆ ಸೌಕರ್ಯಗಳನ್ನು ಒದಗಿಸಬೇಕು. ಅವಶ್ಯಕತೆ ಇರುವಷ್ಟು ನುರಿತ ವೈದ್ಯರು, ದಾದಿಯರು, ಮತ್ತಿತರೆ ವೈದ್ಯಕೀಯ ಸಿಬ್ಬಂದಿ ಹಾಗೂ `ಡಿ’ ಗ್ರೂಪ್ ನೌಕರರನ್ನು ಖಾಯಂ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು ಎಂದರು. ಬಿಪಿಎಲ್ ಕಾರ್ಡ್‌ದಾರರು ಸೇರಿದಂತೆ, ಎಲ್ಲಾ ಜನ ಸಾಮಾನ್ಯರಿಗೆ ಉಚಿತ ಚೀಟಿ, ಸ್ಕ್ಯಾನಿಂಗ್, ರಕ್ತ ಪರೀಕ್ಷೆ, ಸರ್ಜರಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚೀಟಿ ಹಾಗೂ ಹಣ ಪಾವತಿ, ಔಷಧಿ ಕೌಂಟರ್‌ಗಳ ಸಂಖ್ಯೆ ಹೆಚ್ಚಿಸಬೇಕು. ಆಸ್ಪತ್ರೆಯ ಔಷಧಾಲಯಗಳಲ್ಲಿ ಗುಣಮಟ್ಟದ ಎಲ್ಲಾ ಅವಶ್ಯಕ ಔಷಧಿಗಳನ್ನು ಪೂರೈಸಬೇಕು. ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಣಂತಿ ಮತ್ತು ನವಜಾತ ಶಿಶುವಿನ ಸಾವು ತಡೆಗಟ್ಟಬೇಕು. ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದರು.
ಜಯದೇವ ಹೃದ್ರೋಗ ಘಟಕ ಪ್ರಾರಂಭಿಸಲು ದಾವಣಗೆರೆಗೆ ತಜ್ಙರ ಸಮಿತಿ ಭೇಟಿ ಮಾಡಿ ಸ್ಥಳ ಗುರುತಿಸಿದರೂ ಘಟಕ ಪ್ರಾರಂಭಿಸದಿರುವುದು ಆಶ್ಚರ್ಯ ಉಂಟುಮಾಡಿದೆ ಖಾಸಗಿ ಆಸ್ಪತ್ರೆಗಳ ಲಾಭಿಗೆ ಸರ್ಕಾರಗಳು ಮಣಿದಂತಿವೆ. ಶಿಥಿಲಾವಸ್ಥೆಯಲ್ಲಿರುವ ಜಿಲ್ಲಾ ಆಸ್ಪತ್ರೆಯ ಕಟ್ಟಡಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಸುಸಜ್ಜಿತ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕೈದಾಳೆ ಮಂಜುನಾಥ್, ಕುಕ್ಕುವಾಡ ಮಂಜುನಾಥ್, ಅಪರ್ಣಾ, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಹಿರೇಮಠ, ಇಸ್ಮಾಯಿಲ್, ಪರಶುರಾಮ, ನಾಗಸ್ಮಿತ, ಭಾರತಿ, ಅನಿಲ್ ಇತರರು ಇದ್ದರು.