ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ 50 ವಾರದ ಸಂಭ್ರಮಾಚರಣೆಯಲ್ಲಿ ಡಾ. ಆರತಿ ಸುಂದರೇಶ್
ದಾವಣಗೆರೆ, ಫೆ. 17 – ಹೋಮಿಯೋಪತಿ ವೈದ್ಯ ಪದ್ಧತಿಯು ಪ್ರಾರಂಭಗೊಂಡು ಸುಮಾರು 265 ವರ್ಷಗಳು ಕಳೆದಿದ್ದು, ಇಂದು ಆಧುನಿಕ ವೈದ್ಯ ಪದ್ಧತಿಗಳಲ್ಲಿ ಹೋಮಿಯೋಪತಿ ವೈದ್ಯ ಪದ್ದತಿಗೆ ಪ್ರಮುಖ ಸ್ಥಾನವಿರುವುದು ಹೆಮ್ಮೆಯ ಸಂಗತಿ ಎಂದು ವೈದ್ಯರಾದ ಡಾ. ಆರತಿ ಸುಂದರೇಶ್ ಹೇಳಿದರು.
ಹೋಮಿಯೋಪತಿ ವೈದ್ಯ ಪದ್ಧತಿಯು ಸಂಪೂರ್ಣ ಅಡ್ಡ ಪರಿಣಾಮಗಳಿಲ್ಲದ ಒಂದು ವೈದ್ಯ ಪದ್ಧತಿ. ಈ ಪದ್ಧತಿಯಲ್ಲಿ ಕಾಯಿಲೆಗಳು ಸಂಪೂರ್ಣವಾಗಿ ಗುಣಪಡುತ್ತವೆ. ಬಡವರು ಹೆಚ್ಚಿನ ಪ್ರಮಾಣದಲ್ಲಿ ಉಚಿತ ಆರೋಗ್ಯ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳ ಬೇಕು ಎಂದು ಅವರು ಕರೆ ನೀಡಿದರು.
ಹೋಮಿಯೋಪತಿ ವೈದ್ಯಕೀಯ ಸಂಘ (ದಾವಣಗೆರೆ) ಹಾಗೂ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ 50 ವಾರದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕರುಣಾ ಟ್ರಸ್ಟಿನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ತಮ್ಮ ಅನಾರೋಗ್ಯದ ಸಂದರ್ಭದಲ್ಲಿ ಅಲೋಪತಿಯಿಂದ ಗುಣವಾಗದಿದ್ದಾಗ ಹೋಮಿಯೋಪತಿ ಚಿಕಿತ್ಸೆಯಿಂದಾಗಿ ಗುಣಪಡಿಸಿ ಕೊಂಡಿರುವುದರ ಬಗ್ಗೆ ಎಲ್ಲರೊಂದಿಗೆ ಹಂಚಿಕೊಂಡರು.
ಪ್ರತಿ ತಿಂಗಳು ಉಚಿತವಾಗಿ ನಡೆಯುವ ಆರೋಗ್ಯ ತಪಾಸಣಾ ಶಿಬಿರಕ್ಕೆ ಕಾರಣರಾದ ಡಾ. ಮಾವಿಶೆಟ್ಟರ್, ಡಾ. ಕೆ.ಆರ್. ಶರತ್‌ರಾಜ್, ಡಾ. ಸಿ.ಎನ್. ಕೋಟಿಹಾಳ್, ಡಾ. ಎ.ಎನ್.ಸುಂದರೇಶ್, ಡಾ. ಆರತಿ ಸುಂದರೇಶ್, ಡಾ. ಜಿ.ಎಸ್. ಗಿರೀಶ್, ಡಾ. ಎಸ್.ರಂಗರಾಜನ್. ಶ್ರೀಧರ್ ಮತ್ತು ನಾರಾಯಣ್ ಭಟ್‌ರವರ ಸತ್ಕಾರ್ಯಕ್ಕೆ ಡಾ. ಹಾನಿಮನ್ ಆರೋಗ್ಯ ಸೇವಾ ಪ್ರಶಸ್ತಿಯನ್ನು ಕೊಡುವುದರ ಮೂಲಕ ಕೃತಜ್ಞತಾ ಸಮರ್ಪಣೆ ಸಲ್ಲಿಸಿದರು.
ಡಾ. ಸಿ.ಎನ್. ಕೋಟಿಹಾಳ್ ಮಾತನಾಡಿ, ಹೋಮಿಯೋ ಚಿಕಿತ್ಸಾ ಪದ್ಧತಿಯಲ್ಲಿ ರೋಗಿಗಳ ಇತಿಹಾಸವನ್ನು ಸಂಪೂರ್ಣವಾಗಿ ತಿಳಿದುಕೊಂಡು ಚಿಕಿತ್ಸೆ ನೀಡಲಾಗುತ್ತದೆ ಮತ್ತು ರೋಗಿಗಳ ಮನಸ್ಸಿನಿಂದ ಉಂಟಾಗುವ ದೈಹಿಕ ಕಾಯಿಲೆಗಳಿಗೆ ಔಷಧ ನೀಡಲಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಹೆಚ್.ಎನ್. ಮಲ್ಲಿಕಾರ್ಜುನ್ ಮಾತನಾಡಿ, ಅಲೋಪತಿ, ವೈದ್ಯ ಪದ್ದತಿ ಮತ್ತು ಹೋಮಿಯೊಪತಿ ವೈದ್ಯ ಪದ್ಧತಿಯೊಂದಿಗಿನ ಚಿಕಿತ್ಸಾ ಕ್ರಮದಲ್ಲಿನ ವ್ಯತ್ಯಾಸಗಳನ್ನು ಹೇಳಿ, ರೋಗಿಗಳು ಅವರವರ ದೇಹ ಪ್ರಕೃತಿಗೆ ಹೊಂದಿಕೊಳ್ಳುವ ವೈದ್ಯ ಪದ್ಧತಿಯನ್ನು ಅನುಸರಿಸಲು ತಿಳಿಸಿದರು.
ಟ್ರಸ್ಟಿನ ನಿರ್ದೇಶಕರಾದ ಶ್ರೀಮತಿ ಮಂಜುಳಾ ಬಸವಲಿಂಗಪ್ಪ ವಂದಿಸಿದರು, ನಿರ್ದೆಶಕ ಪ್ರೊ. ಎಂ. ಬಸವರಾಜ್, ಡಾ. ಹೆಚ್.ವಿ. ವಾಮದೇವಪ್ಪ, ಸಿ.ಜಿ. ದಿನೇಶ್, ಹೆಚ್.ಆರ್. ಉದಯ್ ಕುಮಾರ್, ಮಧುಸೂದನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದರು.