ಮೀಸಲಾತಿ : ನಮ್ಮ ಹೋರಾಟ ಬರೀ ಪಂಚಮಸಾಲಿ ಜನರಿಗೆ ಸೀಮಿತವಲ್ಲ

ಮೀಸಲಾತಿ : ನಮ್ಮ ಹೋರಾಟ ಬರೀ ಪಂಚಮಸಾಲಿ ಜನರಿಗೆ ಸೀಮಿತವಲ್ಲ

ಹೊಸ ಹರ್ಲಾಪುರ ಬಸವೇಶ್ವರ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆಯಲ್ಲಿ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ

ಹರಿಹರ, ಫೆ.17- ಪಂಚಮಸಾಲಿ ಸಮಾ ಜಕ್ಕೆ 2-ಎ ಮೀಸಲಾತಿ ಸಿಕ್ಕರೆ, ಪಂಚಮಸಾಲಿ ಸಮಾಜ ವಲ್ಲದೇ ಗೌಳಿ ಲಿಂಗಾಯತರು ಸೇರಿದಂತೆ ಅನೇಕ   ಒಳಪಂಗಡಗಳ ಜನರಿಗೆ ಸೌಲಭ್ಯ ದೊರೆಯುತ್ತದೆ.  ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕೂಡಲ ಸಂಗಮದ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.

ಇಲ್ಲಿನ ಹೊಸ ಹರ್ಲಾಪುರ ಬಡಾವಣೆಯ ವೀರಶೈವ ಸಮಾಜದ ವತಿಯಿಂದ ನಡೆದ ಶ್ರೀ ಬಸವೇಶ್ವರ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ ಮತ್ತು ಕಳಸರೋಹಣ ಹಾಗೂ ಮೂರ್ತಿ ಪುನರ್ ಸ್ಥಾಪನೆಯ, ಧರ್ಮ ಜಾಗೃತಿ ವೇದಿಕೆ ಸಮಾರಂಭದ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

ನಮ್ಮ ಸಮಾಜದ ಜನರನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ, ರಾಜಕೀಯದಲ್ಲಿ ಮುನ್ನಲೆಗೆ ತರುವ ನಿಟ್ಟಿನಲ್ಲಿ ಹಲವಾರು ವರ್ಷಗಳ ಕಾಲ ಹೋರಾಟಕ್ಕೆ ಮುಂದಾಗಿದ್ದು, ಆದರೆ ನಮ್ಮ ಹೋರಾಟ ಕೇವಲ ಪಂಚಮಸಾಲಿ ಸಮಾಜದ ಜನರ ಒಳಿತಿಗಾಗಿ ಅಷ್ಟೇ ಅಲ್ಲದೇ, ನಾಡಿನಾದ್ಯಂತ ಇರುವಂತ ವೀರಶೈವ ಸಮಾಜದ ಹಲವಾರು ಒಳಪಂಗಡಗಳ ಒಳಿತಿಗಾಗಿ  ಎಂದು ಹೇಳಿದರು.

ಲಿಂಗವಂತರು ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಭಾವನೆಗಳ ಅಡಿಯಲ್ಲಿ ಸಮಾಜವನ್ನು ಸದೃಢವಾಗಿ ಕಟ್ಟೋಣ ಎಂದರು.

ಹರಿಹರ ಪಂಚಮಸಾಲಿ ಗುರುಪೀಠ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಮಾತನಾಡಿ, ದೇವಸ್ಥಾನ ಜೀರ್ಣೋದ್ಧಾರ ಮಾಡುವುದಷ್ಟೇ ಅಲ್ಲದೇ ದೇವರ ಮೂರ್ತಿಗೆ ನಿರಂತರವಾಗಿ ಅಭಿಷೇಕ ಪೂಜೆ ಸಲ್ಲಿಸುವಂತಾದರೆ ಆ ದೇವಸ್ಥಾನದ ದೈವಿಕ ಶಕ್ತಿ ಪ್ರಕಾಶವಾಗಿ ಹೊಳೆಯುತ್ತದೆ ಎಂದು ಹೇಳಿದರು.

ದೇಶದ ಜನತೆಯ ವೈಶಿಷ್ಟ್ಯಗಳಲ್ಲಿ ಸಂಸ್ಕಾರ ಸಂಸ್ಕೃತಿ ಮತ್ತು ಅಧ್ಯಾತ್ಮಿಕತೆಯ ಒಲವು ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಇದರಿಂದಾಗಿ ಭಕ್ತಿಗಿಂತ ಜಗತ್ತಿನಲ್ಲಿ ಮತ್ತ್ಯಾವುದು  ಇರುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ದೇವರುಗಳ ರೂಪಗಳು ಬೇರೆ ಬೇರೆಯಾಗಿ ಇರಬಹುದು. ಆದರೆ ಭಕ್ತಿ, ನಿಷ್ಟೆ, ಶ್ರದ್ಧೆ ಏಕದೇವರ ಮೇಲೆ ಇರುವಂತಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್  ಮಾತನಾಡಿ, ಸರ್ಕಾರದಿಂದ ಒಂದು ರೂಪಾಯಿ ಧನ ಸಹಾಯವನ್ನೂ ಪಡೆಯದೇ 50 ಲಕ್ಷಕ್ಕೂ ಹೆಚ್ಚು ಹಣ ವೆಚ್ಚ ಮಾಡಿ ದೇವಸ್ಥಾನವನ್ನು ಅತ್ಯುತ್ತಮವಾಗಿ ಜೀರ್ಣೋದ್ಧಾರ ಮಾಡಿರುವುದು ಇಲ್ಲಿನ ಜನರ ಒಗ್ಗಟ್ಟು ಮತ್ತು ಭಕ್ತಿಯನ್ನು ತೋರಿಸುತ್ತದೆ ಎಂದು  ಶ್ಲ್ಯಾಘಿಸಿದರು.

ದೇವರ ಮೇಲೆ ಭಕ್ತಿಯನ್ನು ಹೆಚ್ಚು ಸಮರ್ಪಿ ಸಿದಷ್ಟು ಭಕ್ತರಿಗೆ ಹೆಚ್ಚು ಶಕ್ತಿ ವೃದ್ದಿಯಾಗುತ್ತದೆ. 1998 ರಲ್ಲಿ ಹರಿಹರ ನಗರದಲ್ಲಿ ನಡೆದ ಯುಗಮಾನೋತ್ಸವ ಮತ್ತು ಪಂಚಪೀಠದ ಗುರುಗಳ ಅಡ್ಡಪಲ್ಲಕ್ಕಿ ಉತ್ಸವ  ಈ ದೇವಸ್ಥಾನದ ಆವರಣದಿಂದಲೇ ಆರಂಭವಾದಂತಹ ಇತಿಹಾಸ ವನ್ನು  ಹೊಂದಿದೆ ಎಂದು ಸ್ಮರಿಸಿದರು. 

ದಾವಣಗೆರೆ ವಿರಕ್ತ ಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ,  ಕಾಂಗ್ರೆಸ್   ಮುಖಂಡ ನಂದಿಗಾವಿ ಶ್ರೀನಿವಾಸ್,  ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ  ಡಿ.ಜಿ. ಶಿವಾನಂದಪ್ಪ,  ಹರ್ಲಾಪುರ  ವೀರಶೈವ ಸಮಾಜದ ಅಧ್ಯಕ್ಷ ನಿಜಲಿಂಗಪ್ಪ,    ಅಕ್ಕಿ ಆಲೂರಿನ ರಾಜಪ್ಪ ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಗುತ್ತೂರು ಜಿ.ಬಿ. ಹಾಲೇಶ್ ಗೌಡ್ರು, ಮಾಜಿ ತಾಪಂ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ,  ಬಿ.ಜೆ. ಶಿವರಾಜ್, ಹೆಚ್.ಎಂ. ಸಿದ್ದವೀರಪ್ಪ, ಎನ್.ಮಾರುತಿ, ಎನ್‌. ಶಿವಮೂರ್ತಿ, ಹೆಚ್.ಸಿದ್ದಪ್ಪ, ವಿ. ವೀರಭದ್ರಪ್ಪ, ದೊಡ್ಡಮನೆ ಬಸವರಾಜ್, ಜಿ. ಹಾಲಪ್ಪ ಗೌಡ್ರು, ಸಮಾಳ ಚಂದ್ರಶೇಖರಪ್ಪ, ವೀರಭದ್ರಪ್ಪ, ಎಸ್ ಜಯಣ್ಣ, ಕೆ. ಮಲ್ಲಿಕಾರ್ಜುನ, ಹೊಟೇಲ್ ಗಂಗಾಧರ್  ಶಿವಯೋಗಿಸ್ವಾಮಿ ಇಂಜಿನಿಯರ್, ಹರೀಶ್, ಕುಮಾರ್, ಪೊಲೀಸ್ ಮಹೇಶ್, ಶಿವಶಂಕರ್ ಅಬರಗಪ್ಪ,  ಹೆಚ್.ಸಿ. ಕೀರ್ತಿ ಕುಮಾರ್, ಸರ್ಪಭೂಷಣ  ಇತರರು ಹಾಜರಿದ್ದರು.

ಪ್ರಾರ್ಥನೆ ವಿದ್ಯಾವತಿ,  ಸ್ವಾಗತ ಹೆಚ್.ಸಿ. ಕೀರ್ತಿ ಕುಮಾರ್, ನಿರೂಪಣೆ ಕೆ.ಸಿ. ಶಾಂತಕುಮಾರಿ ಮಾಡಿದರು.

error: Content is protected !!