2024ರ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ ಕಳವಳ
ಸೋಮೇಶ್ವರದ ಕೆ.ಎಂ ಸುರೇಶ್ ಅವರಿಗೆ `2024ರ ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ
ದಾವಣಗೆರೆ, ಫೆ.13- ಪ್ರಸ್ತುತ ದಿನಮಾನಗಳಲ್ಲಿ ಹೊಸ-ಹೊಸ ತಾಂತ್ರಿಕ ಆವಿಷ್ಕಾರಗಳ ನಡುವೆ ಮುದ್ರಣ ಮಾಧ್ಯಮ ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಎಂದು ಕನ್ನಡ ಪ್ರಾಧ್ಯಾಪಕ ಹಾಗೂ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಕಳವಳ ವ್ಯಕ್ತಪಡಿಸಿದರು.
ಜಿಲ್ಲೆ ಸಮಾಚಾರ ಬಳಗದ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ 2024ರ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ಮಾರ್ಟ್ ಫೋನ್ ಈ ಶತಮಾನದ ಬಹುದೊಡ್ಡ ಆವಿಷ್ಕಾರ ಆಗಿದೆ. ಇಡಿ ಪ್ರಪಂಚದ ವಿದ್ಯಮಾನವನ್ನು ಅಂಗೈಯಲ್ಲಿ ನೋಡಲು ಅನುಕೂಲ ಮಾಡುತ್ತಿದೆ. ಇಂತಹ ವ್ಯವಸ್ಥೆಯ ನಡುವೆ ದಿನಪತ್ರಿಕೆಗಳನ್ನು ನಡೆಸುವುದು ಬಹು ಕಷ್ಟಕರ ಎಂದರು.
ತಂತ್ರಜ್ಞಾನದ ವೇಗದಿಂದಾಗಿ ಪತ್ರಿಕಾ ಮಾಧ್ಯಮ ಮತ್ತು ಪುಸ್ತಕ ಸಂಸ್ಕೃತಿ ಆತಂಕವನ್ನು ಎದುರಿಸುತ್ತಿದೆ. ಇದರ ನಡುವೆಯೇ 18 ವರ್ಷಗಳಿಂದ ಜಿಲ್ಲಾ ಸಮಾಚಾರ ಪತ್ರಿಕಾ ಬಳಗ ವಿಶೇಷ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲ್ಯಾಘಿಸಿದರು.
ಸುದ್ದಿ ಕೊಡುವ ಅವಸರಕ್ಕೆ ಬಿದ್ದ ಮಾಧ್ಯಮಗಳು ಅಪಘಾತ, ಕಲಹ ಮತ್ತು ಹೊಡೆದಾಟದಂತಹ ಸುದ್ದಿಗಷ್ಟೇ ಜೋತು ಬೀಳದೇ ಪ್ರಕೃತಿಪರ, ಮನುಷ್ಯಪರ ಹಾಗೂ ನಗರಪರವಾಗಿರುವ ಒಳ್ಳೆಯ ವಿಚಾರಗಳನ್ನು ಸುದ್ದಿಯ ರೂಪದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಸಲಹೆ ನೀಡಿದರು.
ಉತ್ತಮ ಸಂಸ್ಕಾರ, ವಿಶ್ವಾಸ, ಪ್ರೀತಿ, ಪ್ರಾಮಾಣಿಕತೆಯನ್ನು ಆಂತರಿಕವಾಗಿ ಗಳಿಸಬೇಕು. ಬಾಹ್ಯವಾಗಿ ಆಸ್ತಿ, ಸಂಪತ್ತು, ಶ್ರೀಮಂತಿಕೆಯನ್ನು ಗಳಿಸಬೇಕು. ಇದರಲ್ಲಿ ಬಾಹ್ಯವಾಗಿ ಗಳಿಸಿದ್ದನ್ನು ಆಂತರಿಕವಾಗಿ ತೆಗೆದುಕೊಂಡರೆ ಮನುಷ್ಯ ಹಾಳಾಗುತ್ತಾನೆ ಎಂದು ಎಚ್ಚರಿಕೆಯ ಮಾತುಗಳನ್ನಾಡಿದರು.
ಮನುಷ್ಯನಿಗೆ ಸೋಲು, ಬಡತನ ಹಾಗೂ ಅವಮಾನ ಗೊತ್ತಿದ್ದರೆ, ಅವನಲ್ಲಿ ಮಾನವೀಯ ಗುಣಗಳು ತುಂಬಿಕೊಂಡು ಸಾಧಕನಾಗುತ್ತಾನೆ. ಸಾಧಕರಾದ ಬಳಿಕ ಭೂತಕಾಲ ಮರೆಯಬಾರದು. ಸಾಧನೆಯ ಹಮ್ಮಿನಲ್ಲಿ ಮೆರೆಯಬಾರದು ಎಂದು ಕಿವಿಮಾತು ಹೇಳಿದರು.
ಮಕ್ಕಳಿಗೆ ಧೈರ್ಯವಾಗಿ ಬದುಕಬೇಕು ಎಂಬುದನ್ನು ಕಲಿಸುತ್ತಿದ್ದರಿಂದಲೇ ಅವರಲ್ಲಿ ಸೂಕ್ಷ್ಮತೆ ಮರೀಚಿಕೆ ಯಾಗುತ್ತಿದೆ. ಸಾರ್ವಜನಿಕ ಬದುಕಿನಲ್ಲಿ ಸಂಕೋಚ ಮತ್ತು ಲಜ್ಜೆ ಬಹಳ ಮುಖ್ಯ ಎಂದರು. ಯಾರ ಬಗ್ಗೆಯೂ ಪರೋಕ್ಷವಾಗಿ ಕೆಟ್ಟದಾಗಿ ಮತ್ತು ಲಘುವಾಗಿ ಮಾತನಾಡ ಬಾರದು. ಸಮಾಜಕ್ಕೆ ಉತ್ತಮ ಸೇವೆ ನೀಡಬೇಕು.
ಇದೇ ವೇಳೆ ಸೋಮೇಶ್ವರ ಸಮೂಹ ಸಂಸ್ಥೆಯ ಸಂಸ್ಥಾಪಕ ಕೆ.ಎಂ ಸುರೇಶ್ ಅವರಿಗೆ `2024ರ ವರ್ಷದ ವ್ಯಕ್ತಿ’ ಪ್ರಶಸ್ತಿ ನೀಡಿ ಗೌರವಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅವರು, ವರ್ಷದ ವ್ಯಕ್ತಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದರು. ಹಿರಿಯ ಪತ್ರಕರ್ತ ವಿ. ಹನುಮಂತಪ್ಪ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೌಜ, ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್, ಹಿರಿಯ ವಕೀಲ ರಾಮಚಂದ್ರ ಕಲಾಲ್, ಸಿ.ಕೆ.ಆನಂದ ತೀರ್ಥಾಚಾರ್, ಸಾಲಿಗ್ರಾಮ ಗಣೇಶ್ ಶೆಣೈ, ಶ್ರೀಮತಿ ಹೆಚ್.ಕೆ. ಸತ್ಯಭಾಮ ಮಂಜುನಾಥ್, ಮಹಾಂತೇಶ್ ವಿ. ಒಣರೊಟ್ಟಿ, ಕೆ. ರಾಘವೇಂದ್ರ ನಾಯರಿ ಇತರರು ಇದ್ದರು.