ದಾವಣಗೆರೆಗೆ ರಂಗ ಸಂವೇದನೆಯ ನೆಲೆಗಟ್ಟಿದೆ

ದಾವಣಗೆರೆಗೆ ರಂಗ ಸಂವೇದನೆಯ ನೆಲೆಗಟ್ಟಿದೆ

ದಾವಣಗೆರೆ, ಫೆ. 13 – ದಾವಣಗೆರೆ ನೆಲ ಸಂಸ್ಕೃತಿಯಲ್ಲಿ ಸುಮಾರು 128 ನಾಟಕ ಕಂಪನಿಗಳು ತಮ್ಮ ರಂಗಪ್ರಯೋಗವನ್ನು ಮಾಡಿವೆ. ಇಂದಿನ ಯುವ ಜನತೆ ರಂಗಭೂಮಿಯಲ್ಲಿ ವಿಶೇಷ ಆಸಕ್ತಿ  ಹೊಂದಿದ್ದಾರೆ. ಆದರೆ ತಮ್ಮನ್ನು ತಾವು ಬಳಸಿಕೊಳ್ಳಲು ವಿಫಲವಾಗುತ್ತಿದ್ದಾರೆ ಎಂದು ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.  

ಕೊಂಡಜ್ಜಿಯ ಸ್ಕೌಟ್ ಕ್ಯಾಂಪ್‌ನಲ್ಲಿ ವೃತ್ತಿ ರಂಗಭೂಮಿ ರಂಗಾಯಣ (ದಾವಣಗೆರೆ), ಕರ್ನಾಟಕ ನಾಟಕ ಅಕಾಡೆಮಿ (ಬೆಂಗಳೂರು) ಇವರ ಸಹಯೋಗದೊಂದಿಗೆ ಏರ್ಪಡಿಸಿದ್ದ ವೃತ್ತಿ ರಂಗನಾಟಕ ರಚನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಯಾವುದೇ ಶಿಬಿರಗಳು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತವೆ ವಿನಃ ಕೈ ಹಿಡಿದು ನಡೆಸುವುದಿಲ್ಲ. ಶಿಬಿರಗಳು ತೋರಿಸಿದ ಮಾರ್ಗದಲ್ಲಿ ಶಿಬಿರಾರ್ಥಿಗಳು ಮುನ್ನಡೆದು ಯಶ ಸ್ಸನ್ನು ಕಾಣಬೇಕು ಎಂದು ಕಡಕೋಳ ಆಶಯ ವ್ಯಕ್ತಪಡಿಸಿದರು.

ಶಿಬಿರದ ಸಂಪನ್ಮೂಲ ವ್ಯಕ್ತಿ ನಟರಾಜ್ ಹೊನ್ನವಳ್ಳಿ ಮಾತನಾಡಿ, ಶಿಬಿರಗಳಲ್ಲಿ  vision format ವಿಷನ್‌ ಫಾರ್ಮಾಟ್‌ ಜಾಸ್ತಿ ಆಗಬೇಕು. ಇಂದಿನ ದಿನಮಾನಗಳಲ್ಲಿ ಒಬ್ಬ ನಾಟಕ ರಚನೆಕಾರರನ್ನು ಸೃಷ್ಟಿ ಮಾಡುವುದು ಬಹಳ ಕಷ್ಟ. ಆದರೆ, ಇಂಥ ಶಿಬಿರಗಳು ಬರಹಗಾರರೊಂದಿಗೆ ಸಂವಾದ ನಡೆಸಿ ಸೂಕ್ಷ್ಮತೆಯ ದಿಕ್ಕನ್ನು ತೋರಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ರಂಗಭೂಮಿ ಕಲಾವಿದ ಬಾ.ಮ. ಬಸವರಾಜಯ್ಯ ಮಾತನಾಡಿ, ಮೊದಲಿನಿಂದಲೂ ಕೊಂಡಜ್ಜಿಗೂ ಹಾಗು ರಂಗಭೂಮಿಗೂ ವಿಶೇಷವಾದ ನಂಟಿದೆ. ಯಾವುದೇ ನಾಟಕವನ್ನು ರಚಿಸುವಾಗ ವಾಸ್ತವ, ವರ್ತಮಾನದೊಂದಿಗೆ ನೈಜ ಆಲೋಚನೆಗಳನ್ನು ಅಳವಡಿಸಿಕೊಂಡು ಉತ್ತಮ ನಾಟಕವನ್ನು ರಚಿಸಬೇಕೆಂದು ಕರೆಕೊಟ್ಟರು.

ಶಿಬಿರದ ನಿರ್ದೇಶಕ ಬಸವರಾಜ ಪಂಚಗಲ್ ಮಾತನಾಡಿದರು. ಶಿಬಿರದ ನಿರ್ದೇಶಕ ಬಸವರಾಜ ಪಂಚಗಲ್, ವೃತ್ತಿ ರಂಗಭೂಮಿಯ ವಿಶೇಷ ಅಧಿಕಾರಿಗಳಾದ ರವಿಚಂದ್ರ, ಗಣೇಶ್ ಅಮೀನಗಡ ಉಪಸ್ಥಿತರಿದ್ದರು. ವೀಣಾ. ಪಿ ನಿರೂಪಿಸಿದರು. 

error: Content is protected !!