ಮೈಸೂರು ಲೋಕಸಭಾ ಸದಸ್ಯ ಯದುವೀರ್ ಒಡೆಯರ್
ಭರಮಸಾಗರ, ಫೆ. 12- ಮೈಸೂರು ಅರಮನೆಗೂ ಸಿರಿಗೆರೆ ತರಳಬಾಳು ಮಠಕ್ಕೂ ಅವಿ ನಾಭಾವ ಸಂಬಂಧವಿದೆ. ಈ ಸಂಬಂಧ ಮುಂದೆನೂ ಕೂಡ ಇರುತ್ತದೆ. ಭಾರತೀಯ ಪರಂಪರೆ, ಸಂಸ್ಕೃತಿ, ಸಂಸ್ಕಾರ ಉಳಿದಿರುವುದೇ ಮಠಗಳಿಂದ ಎಂದು ಮೈಸೂರು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನದ ಕಾರ್ಯಕ್ರಮದಲ್ಲಿ `250 ಶರಣರ 22 ಸಾವಿರ ವಚನಗಳ ವಚನ ಸಂಪುಟದ ತಂತ್ರಾಂಶ’ ಬಿಡುಗಡೆ ಮಾಡಿ ಮಾತನಾಡಿದರು.
ಅಂದಿನ ನಮ್ಮ ರಾಜರು ಜನರ ಕಲ್ಯಾಣಕ್ಕಾಗಿ ಅನೇಕ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರು. ಇಂದು ತರಳಬಾಳು ಜಗದ್ಗುರು ಕೆರೆಗಳಿಗೆ ನೀರು ತುಂಬಿಸುವ ಮಹತ್ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಧರ್ಮಕ್ಕಾಗಿ ಭಾರತೀಯ ತ್ಯಾಗ ಮಾಡಿದ್ದು, ಧರ್ಮ ಸಂರಕ್ಷಣೆಗಾಗಿ ದುಡಿದ್ದಾರೆ. ಭಾರತೀಯರ ಪರಿಶ್ರಮದಿಂದ ಇನ್ನೂ ಪರಂಪರೆ, ಸಂಸ್ಕೃತಿ, ಸಂಸ್ಕಾರ ಉಳಿದಿದೆ ಎಂದು ಹೇಳಿದರು.
ಭಾರತೀಯ ಪರಂಪರೆಗೆ ಕರ್ನಾಟಕದ ಕೊಡುಗೆ ಅಪಾರವಾದುದು. ಪ್ರತಿಯೊಬ್ಬ ಭಾರತೀಯರು ಕನ್ನಡಿಗರಲ್ಲ. ಆದರೆ ಪ್ರತಿಯೊಬ್ಬ ಕನ್ನಡಿಗರು ಭಾರತೀಯರು. ಪರಂಪರೆ, ಸಂಸ್ಕೃತಿಯ ರಕ್ಷಣೆಗಾಗಿ ಪ್ರತಿಯೊಬ್ಬರೂ ನಿಲ್ಲಬೇಕಾಗಿದೆ. ಪ್ರಥಮ ಕರ್ತವ್ಯ ಕೂಡ ಆಗಬೇಕು ಎಂದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರಾಗಿರುವ ಕಾರಣ ಧರ್ಮ, ಪರಂಪರೆ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದಕ್ಷಿಣ ಭಾರತದಲ್ಲಿ ಧರ್ಮ ರಕ್ಷಣೆಗೆ ನಿಂತಿರುವುದು ಕರ್ನಾಟಕ. ಹನ್ನೆರಡನೇ ಶತಮಾನದ ವಚನಕಾರರ ವಚನ ಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು.
ರಾಜ ಮನೆತನಕ್ಕೆ ರಾಜ್ಯಪಾಲರ ಹುದ್ದೆ ನೀಡಲಿ
ತರಳಬಾಳು ಹುಣ್ಣಿಮೆ ಸಮಾರೋಪ ಸಮಾರಂಭದಲ್ಲಿ ತರಳಬಾಳು ಜಗದ್ಗುರುಗಳು
ದಾವಣಗೆರೆ, ಫೆ. 12- ಅರಸೊತ್ತಿಗೆ ತೊರೆದು ರಾಜ್ಯವನ್ನು ಪ್ರಜಾಪ್ರಭುತ್ವಕ್ಕೆ ಒಪ್ಪಿಸಿದ ಮಹಾರಾಜರನ್ನು ರಾಜ್ಯಪಾಲರನ್ನಾಗಿ ಮಾಡಬೇಕು. ರಾಜರು ಹೆಚ್ಚು ಇದ್ದರೆ ಸರದಿ ಪ್ರಕಾರ ನೀಡಬೇಕಿತ್ತು. ಮೈಸೂರು ಮಹಾರಾಜರ ಮನೆತನದ ಮೇಲಿನ ಕೇಸುಗಳನ್ನು ಸರ್ಕಾರ ವಾಪಾಸ್ ಪಡೆಯಬೇಕು. ಇದಕ್ಕಾಗಿ ರಾಜ್ಯದ ಜನತೆ ಒಕ್ಕೊರಲಿನ ಆಗ್ರಹ ಮಾಡಬೇಕಾಗಿದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಒಂಭತ್ತನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಶ್ರೀಗಳು ಮಾತನಾಡಿದರು.
ಕೇವಲ ಕೇಸ್ ವಾಪಾಸ್ ಪಡೆಯುವುದಷ್ಟೇ ಅಲ್ಲ. ರಾಜಮನೆತನವನ್ನು ಗೌರವಿಸುವ ಕೆಲಸ ಆಗಬೇಕಾಗಿದೆ. ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ಕೇಸ್ ಗಳನ್ನು ವಾಪಾಸ್ ಪಡೆಯುವ ಅಧಿಕಾರವಿದೆ. ಹಲವು ಕೇಸ್ಗಳನ್ನು ವಾಪಾಸ್ ಪಡೆಯಲಾಗಿದೆ ಎಂದು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಕರ್ನಾಟಕದಲ್ಲಿ ಜಾರಿಯಾದ ಮೇಲೆ ಮೈಸೂರಿನ ಅರಸರು ರಾಜ್ಯವನ್ನು ಉದಾರ ಮನಸ್ಸಿನಿಂದ ಸರ್ಕಾರಕ್ಕೆ ಬಿಟ್ಟುಕೊಟ್ಟರು. ಹಾಗಾಗಿ ಅವರನ್ನು ಗೌರವಿಸುವ ಅವಶ್ಯವಿದೆ. ಆದರೆ ರಾಜಮನೆತನಕ್ಕೆ ವಿನಾಕರಾಣ ಕಿರಿಕಿರಿ ಉಂಟುಮಾಡುತ್ತಿರುವುದು ಸರಿಯಲ್ಲ ಎಂದರು.
ಇಂಗ್ಲೆಂಡ್ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಸಹ ಅಲ್ಲಿನ ಮಹಾರಾಜರು ಹೆಡ್ ಆಫ್ ದಿ ಸ್ಟೇಟ್ ಆಗಿದ್ದಾರೆ. ಅನೇಕ ದೇಶಗಳಲ್ಲಿ ಈ ವ್ಯವಸ್ಥೆ ಕೂಡ ಜಾರಿಯಲ್ಲಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಗೂ ಮೈಸೂರು ರಾಜ ಮನೆತನಕ್ಕೂ ನಿಕಟ ಸಂಪರ್ಕವಿತ್ತು. ವಾಣಿವಿಲಾಸ ಸಾಗರ, ರಾಣಿಕೆರೆ, ಗಾಯತ್ರಿ ಜಲಾಶಯ ಕಟ್ಟಿಸಿದವರು ಮೈಸೂರು ಮಹಾರಾಜರು ಎಂದರು.
60 ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಯಧುವೀರರ ತಾತನವರಾದ ಜಯಚಾಮರಾಜ ಒಡೆಯರ್ ಪಾಲ್ಗೊಂಡಿದ್ದರು ಎಂಬುದನ್ನು ಸ್ಮರಿಸಿಕೊಂಡರು.
ಶಿಥಿಲಗೊಳ್ಳುತ್ತಿರುವ ಕೌಟುಂಬಿಕ ಜೀವನ
ಇಂದಿನ ಕೌಟುಂಬಿಕ ಜೀವನ ಶಿಥಿಲಗೊಳ್ಳುತ್ತಿದ್ದು, ಇದಕ್ಕೆ ಕಾರಣ ಹೃದಯ ಪ್ರೀತಿ ಮತ್ತು ಜ್ಞಾನದ ಕೊರತೆ. ಕೌಟುಂಬಿಕ ಮೊಬೈಲ್ ಸಂಪರ್ಕದಂತೆ ಇರಬೇಕು. ಬೇರೆ ಯಾವುದೇ ಕರೆಗಳನ್ನು ತಿರಸ್ಕರಿಸಿದರೂ ಸರಿ, ಆದರೆ, ಪತ್ನಿಯ, ತಂದೆ-ತಾಯಿ, ಸಹೋದರರ, ಸಹೋದರಿಯರ ಕರೆಗಳನ್ನು ಮಾತ್ರ ನಿಷೇಧಿಸದಿರಿ ಎಂದು ಕಿವಿಮಾತು ಹೇಳಿದರು. ಮಧ್ಯೆ ರಾತ್ರಿಯಾದರೂ ತಾಳ್ಮೆಯಿಂದ ಕುಳಿತಿರುವುದನ್ನು ನೋಡಿದರೆ ತಮ್ಮ ಮೇಲೆ ಇಟ್ಟಿರು ಅಗಾಧವಾದ ಭಕ್ತಿ ಕಾರಣ. ಭಾವನಾತ್ಮಕ ಸಂಬಂಧ ಇರುವವರೆಗೂ ನಾವು ಗಟ್ಟಿಯಾಗಿಯೇ ಇರುತ್ತೇವೆ ಎಂದರು.
ಮುಂದಿನ ಹುಣ್ಣಿಮೆ ಭದ್ರಾವತಿಯಲ್ಲಿ
2026 ರ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಭದ್ರಾವತಿಯಲ್ಲಿ ಆಚರಿಸಲು ಶ್ರೀಮಠ ನಿರ್ಧರಿಸಿದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಘೋಷಿಸಿದರು. ದುಬೈ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಣೆಗೆ ಅವಕಾಶ ಕೋರಿ ಅರ್ಜಿಗಳು ಬಂದಿದ್ದು, ಅತಿ ಹೆಚ್ಚು ಮತಗಳನ್ನು ಪರಿಗಣಿಸಿ ಮುಂದಿನ ಬಾರಿ ಭದ್ರಾವತಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕಂಕಣಬದ್ಧರಾಗಬೇಕಾಗಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ನಮ್ಮ ಪ್ರಾಚೀನ ಗ್ರಂಥಗಳ ಸಂರಕ್ಷಣೆಗಾಗಿ ಅನುದಾನ ಘೋಷಣೆ ಮಾಡಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಮೂಲಕ ಬರದ ನಾಡಿಗೆ ಶಾಶ್ವತ ಪರಿಹಾರ ನೀಡುವಲ್ಲಿ ತರಳಬಾಳು ಜಗದ್ಗುರು ಗಳ ಅವಿರತ ಶ್ರಮ ಶ್ಲ್ಯಾಘನೀಯ ಎಂದರು.
ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸದ ಜೊತೆಗೆ ನ್ಯಾಯಾಲಯಗಳಲ್ಲಿ ಬಗೆಹರಿಯದ ವ್ಯಾಜ್ಯಗಳು, ಸಮಸ್ಯೆಗಳಿಗೆ ತರಳಬಾಳು ಸದ್ಧರ್ಮ ನ್ಯಾಯ ಪೀಠದ ಮೂಲಕ ಮಹತ್ವದ ಪರಿಹಾರ ನೀಡಿದ ಅನೇಕ ಉದಾಹರಣೆಗಳಿವೆ. ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಅನೇಕ ವಿಚಾರಗಳ ಬಗ್ಗೆ ಚಿಂತನ-ಮಂಥನ ನಡೆಸಿ, ಭಕ್ತ ಸಮೂಹಕ್ಕೆ ಜ್ಞಾನದ ದಾಸೋಹ ಉಣಬಡಿಸಿದ್ದಾರೆ ಎಂದು ಹೇಳಿದರು.
ವಿಜ್ಞಾನ ಮತ್ತು ಧರ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರೈತನದು ಬಯಲು ಕಾರ್ಖಾನೆ. ಆದರೆ ಬಂಡವಾಳಗಾರನ ಕಟ್ಟಡದ ಒಳಗೆ ನಿರ್ಮಾಣವಾಗಿರುವ ಕಾರ್ಖಾನೆಗೆ ಎಲ್ಲಾ ರೀತಿಯ ವ್ಯವಸ್ಥೆಗಳಿರುತ್ತವೆ ಎಂದರು.
ಶ್ರೀಮಂತವಾದ ನಾಡು, ಆದರೆ ರೈತ ಮಾತ್ರ ಬಡವನಾಗಿದ್ದಾನೆ. ಆದ್ದರಿಂದ ರೈತರ ಬದುಕು ಹಸನಾಗಲು ತರಳಬಾಳು ಜಗದ್ಗುರುಗಳ ಮಾರ್ಗದರ್ಶನ ಅತ್ಯವಶ್ಯಕ ಎಂದು ಹೇಳಿದರು.
ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ತರಳಬಾಳು ಜಗದ್ಗುರುಗಳ ರೈತರ ಬಗೆಗಿನ ಕಾಳಜಿಯಿಂದಾಗಿ ಸರ್ಕಾರದ ಸಂಬಂಧಿಸಿದ ಸಚಿವರೊಂದಿಗೆ ಸಂಪರ್ಕ ಮಾಡಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತಂದು ರೈತರ ಬದುಕಿಗೆ ಆಸರೆಯಾಗಿದ್ದಾರೆಂದು ತಿಳಿಸಿದರು.
ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ, ಇಸ್ರೋ ವಿಜ್ಞಾನಿ ಡಾ. ಬಿ.ಎನ್. ಸುರೇಶ್, ಬೆಂಗಳೂರು ವಿಭಾ ಅಕಾಡೆಮಿಯ ಸಂಸ್ಕೃತ ಮತ್ತು ಇಂಡಾಲಜಿ ವಿದ್ವಾಂಸರಾದ ಬಿ.ವಿ. ಆರತಿ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರ್ ಸಾಹುಕಾರ್, ವಾರಣಾಸಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಬೆಿಟಿನಾ ಬಾಯ್ಕರ್, ಮೈಸೂರಿನ ಸಾಹಿತಿ ಡಾ.ಹೆಚ್.ಎಸ್. ಹರಿಶಂಕರ್, ರಷ್ಯಾದ ಸಂಶೋಧನಾ ವಿದ್ಯಾರ್ಥಿನಿ ಗಲಿನ ಕೊಪೆಲಿಯೋವಿಚ್, ಸ್ವಿಡ್ಜರ್‌ಲ್ಯಾಂಡ್ ನಿವೃತ್ತ ಭೌತ ವಿಜ್ಞಾನಿ ಡಾ. ಖಮರ್ ಮುನೀರ್, ಮುಂಬೈನ ಸಿನೀಯರ್ ಕಮಾಂಡರ್ ಏರ್ಇಂಡಿಯಾದ ಕ್ಯಾಪ್ಟನ್ ಶಿಖಾ ಹರ್ನೆ, ಶಾಸಕರಾದ ಡಿ.ಜಿ. ಶಾಂತನಗೌಡ, ಯು.ಬಿ. ಬಣಕಾರ್ ಮಾತನಾಡಿದರು.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಂ. ಚಂದ್ರಪ್ಪ, ವಿಯನ್ನಾ ಭಾರತೀಯ ರಾಯಭಾರಿ ಕಚೇರಿ ಮಾಜಿ ಅಧಿಕಾರಿ ಆಸೀಮ್ ನಾಥ್ ಮುಖರ್ಜಿ, ರೈತ ಮುಖಂಡ ಹೆಚ್.ಆರ್. ಬಸವರಾಜಪ್ಪ, ಡಾ. ರಾಜನಾಥ್ ಸಿಂಗ್, ಶಾಸಕ ಕೆ.ಎಸ್. ಬಸವಂತಪ್ಪ, ಜಿ.ಎಸ್. ಅನಿತ್ ಕುಮಾರ್, ತುಮ್‌ಕೋಸ್ ನಿರ್ದೇಶಕ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಹುತಾತ್ಮ ಯೋಧರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ.ಗಳೊಂದಿಗೆ ಗೌರವ ಸಮರ್ಪಿಸಿದರು. ಶೈಲೇಶ್ ಕುಮಾರ್ ಸ್ವಾಗತಿಸಿದರು. ಕೊಗುಂಡೆ ಮಂಜಣ್ಣ ವಂದಿಸಿದರು.