ಮಕ್ಕಳು ಪಠ್ಯೇತರ ಚಟುವಟಿಕೆಗೂ ಪ್ರಾಮುಖ್ಯತೆ ನೀಡಲಿ

ಮಕ್ಕಳು ಪಠ್ಯೇತರ ಚಟುವಟಿಕೆಗೂ ಪ್ರಾಮುಖ್ಯತೆ ನೀಡಲಿ

ಲತಿಕಾ ದಿನೇಶ್ ಶೆಟ್ಟಿ ಕರೆ

ದಾವಣಗೆರೆ, ಫೆ.10- ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಲತಿಕ್ ದಿನೇಶ್ ಶೆಟ್ಟಿ ತಿಳಿಸಿದರು.

ಋಷಿ ಎಜುಕೇಶನ್ ಟ್ರಸ್ಟ್ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ನಿನ್ನೆ ಸಂಜೆ ಆಯೋಜಿಸಿದ್ದ `ಪರ್ವ ಜಾನಪದ ಲೋಕ’ ಹಾಗೂ ಶಾಲೆಯ 10ನೇ ವರ್ಷದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸ್ವದೇಶಿ ಕಲೆಗಳು ಹಾಗೂ ಸಂಸ್ಕೃತಿಯನ್ನು ಬಾಲ್ಯದಿಂದಲೇ ಮೈಗೂಡಿಸಿಕೊಂಡು ಬೆಳೆಯಬೇಕು. ಹಾಗೆಯೇ ಸದ್ಗುಣಗಳನ್ನು ಕಲಿತು ದೇಶಕ್ಕೆ ಉತ್ತಮ ಪ್ರಜೆಯಾಗಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮಾಜಿ ಖಜಾಂಚಿ ಅನಿಲ್ ಬಾರೆಂಗಳ್‌ ಮಾತನಾಡಿ, ವಿದ್ಯಾಭ್ಯಾಸದ ಜತೆಗೆ ಕ್ರೀಡಾ ಕ್ಷೇತ್ರದಲ್ಲೂ ಆಸಕ್ತಿ ತೋರಬೇಕು. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳ ಆಸಕ್ತಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು. ಶಿಕ್ಷಣ ಸಂಸ್ಥೆ ಹುಟ್ಟು ಹಾಕುವುದು ಸುಲಭ ಕೆಲಸ ವಾದರೂ ಗುಣಮಟ್ಟದ ಶಿಕ್ಷಣ ನೀಡುವ ಶಾಲೆ ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸವಾಗಿದೆ ಎಂದು ತಿಳಿಸಿದರು.

ಟ್ರಸ್ಟಿನ ಅಧ್ಯಕ್ಷರಾದ ಆರ್‌.ಆರ್‌. ಜ್ಯೋತಿ, ಖಜಾಂಚಿ ವಿಕ್ರಂ ವಿ. ಜೋಶಿ, ಕಾರ್ಯದರ್ಶಿ ಕಿಶನ್ ಪಟೇಲ್, ನಿರ್ದೇಶಕ ನಿಖಿಲಾ ಧೀರಜ್, ಸಂತೋಷ್, ಮುಖ್ಯ ಶಿಕ್ಷಕಿ ಹೆಚ್‌.ಪಿ. ಲಕ್ಷ್ಮಿ ಹಾಗೂ ಶಾಲಾ ಸಿಬ್ಬಂದಿ ಇದ್ದರು.

error: Content is protected !!