ರಾಜ್ಯದಲ್ಲೇ ಮೊದಲ ಬಾರಿಗೆ ಪಿಎಚ್‍ಸಿಯಲ್ಲಿ ತಂತ್ರಜ್ಞಾನ ಆಧಾರಿತ ಚಿಕಿತ್ಸಾ ಯೋಜನೆಗೆ ಶಾಸಕ ಬಿ. ದೇವೇಂದ್ರಪ್ಪ ಚಾಲನೆ
ಪಲ್ಲಾಗಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‍ಸಿ) ಅಗತ್ಯ ನೆರವು ಕಲ್ಪಿಸಲು ಆರೋಗ್ಯ ಇಲಾಖೆ ಸಚಿವರ ಜೊತೆ ಚರ್ಚಿಸುತ್ತೇನೆ. ಮುಖ್ಯರಸ್ತೆ ಅಭಿವೃದ್ಧಿಗೂ ಕ್ರಮ ಕೈಗೊಳ್ಳುತ್ತೇನೆ.
– ಬಿ. ದೇವೇಂದ್ರಪ್ಪ, ಶಾಸಕ
ಜಗಳೂರು, ಫೆ.10- ತಾಲ್ಲೂಕಿನ ಪಲ್ಲಾಗಟ್ಟೆ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ತಂತ್ರಜ್ಞಾನ ಆಧಾರಿತ ವರ್ಚ್ಯುವಲ್ ಮೂಲಕ ಚಿಕಿತ್ಸೆ ನೀಡುವ ವ್ಯವಸ್ಥೆಗೆ ಶಾಸಕ ಬಿ.ದೇವೇಂದ್ರಪ್ಪ ಹಾಗೂ ಯೋಜನಾ ಆಯೋಗದ ಮಾಜಿ ಸದಸ್ಯ ಡಾ.ಕೆ.ಪಿ. ಬಸವರಾಜಪ್ಪ ಸೋಮವಾರ ಚಾಲನೆ ನೀಡಿದರು.
ಕೇಂದ್ರ-ರಾಜ್ಯ ಸರ್ಕಾರ, ಸಿರಿಗೆರೆಯ ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜಿಲ್ಲಾ, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರಿನ ಟೆಸ್ಲಾನ್ ಟೆಕ್ನಾಲಜೀಸ್ ಮತ್ತು ಸರ್ಜಿ ಹೈಟೆಕ್ ಆಸ್ಪತ್ರೆ ಸಂಯುಕ್ತಾಶ್ರ ಯದಲ್ಲಿ ಕಾರ್ಯಕ್ರಮ ನಡೆಯಿತು.
ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಪಿಎಚ್‍ಸಿ ಆಯ್ಕೆ ಮಾಡಿಕೊಂಡು, ಗಂಭೀರ ಸಮಸ್ಯೆಗಳಾದ ಕ್ಯಾನ್ಸರ್, ಸ್ತ್ರೀರೋಗ ಸಂಬಂಧಿ ಸಮಸ್ಯೆ ಸೇರಿದಂತೆ ಅನೇಕ ರೋಗಗಳಿಗೆ ವೈದ್ಯರು ವರ್ಚ್ಯುವಲ್ ಮೂಲಕ ರೋಗಿಗೆ ಚಿಕಿತ್ಸೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ. ದೇವೇಂದ್ರಪ್ಪ ಅವರು, ರಾಜ್ಯದಲ್ಲೇ ಇಂತಹ ಮಹತ್ವದ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ನೀಡುವ ವಿಧಾನ ಆರಂಭಿಸಿದ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ದೂರ ದೃಷ್ಟಿಗೆ ನಾನು ಆಭಾರಿಯಾಗಿದ್ದೇನೆ ಎಂದರು.
ಗಂಭೀರ ಕಾಯಿಲೆಗಳಿಗೆ ಬೆಂಗಳೂರು ಮತ್ತು ಶಿವಮೊಗ್ಗದ ಸರ್ಜಿ ಆಸ್ಪತ್ರೆಯ ವೈದ್ಯರು, ವರ್ಚ್ಯುವಲ್ ಮೂಲಕ ನಿರ್ದೇಶನ ನೀಡಿ ರೋಗಿಯ ಪ್ರಾಣ ಉಳಿಸುವ ಆಧುನಿಕ ತಂತ್ರಜ್ಞಾನದ ವಿಧಾನ ಕಾರ್ಯಗತ ಗೊಂಡಿರುವುದು ಶ್ಲ್ಯಾಘನೀಯ ಎಂದರು.
ಶುದ್ಧ ನೀರು, ಆಹಾರ, ಗಾಳಿ ಇಲ್ಲದೇ, ಆರೋಗ್ಯ ಇಲ್ಲ. ಈಗೀಗ ಎಲ್ಲವೂ ಕಲುಷಿತವಾಗುತ್ತಿದ್ದು, ರೋಗದ ಲಕ್ಷಣ ಕಂಡು ಬಂದ ಕೂಡಲೇ ಮುಂಚಿತವಾಗಿ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಡಾ.ಕೆ.ಪಿ. ಬಸವರಾಜಪ್ಪ ಮಾತನಾಡಿ, ದಾವಣಗೆರೆಯ ಎಸ್.ಎಸ್ ಆಸ್ಪತ್ರೆ, ಶಿವಮೊಗ್ಗದ ಸರ್ಜಿ ಆಸ್ಪತ್ರೆಗಳ ಸಮೂಹ ವೈದ್ಯರನ್ನು ಒಳಗೊಂಡ ವರ್ಚ್ಯುವಲ್ ಮೂಲಕ ರೋಗಿಗೆ ಪ್ರಾಥಮಿಕ ಕೇಂದ್ರಗಳಲ್ಲೇ ಚಿಕಿತ್ಸೆ ನೀಡುವ ಯೋಜನೆ ಇದಾಗಿದ್ದು, ತರಳಬಾಳು ಶ್ರೀಗಳ ಮಾರ್ಗದರ್ಶನದಲ್ಲಿ ಈ ಯೋಜನೆ ರೂಪಿಸಲಾಗಿದೆ. ಈ ವ್ಯವಸ್ಥೆಯಿಂದ ಗ್ರಾಮೀಣ ಪ್ರದೇಶದ ಜನರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಗುಣಮಟ್ಟದ ಮತ್ತು ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.
ಕೆಂಚಮ್ಮನಹಳ್ಳಿ ವೈ.ಕೆ. ಬಸವರಾಜಪ್ಪ ಮತ್ತು ಜಿ.ಪಂ ಮಾಜಿ ಸದಸ್ಯ ಎಸ್.ಕೆ. ಮಂಜುನಾಥ್ ಅವರು 10 ಲಕ್ಷ ರೂ.ಗಳ ನೆರವು ನೀಡಿದ್ದು, ಈ ತಂತ್ರಜ್ಞಾನಕ್ಕೆ ಒಟ್ಟು 40 ಲಕ್ಷ ರೂ. ಖರ್ಚಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲೇ ದಾವಣಗೆರೆ ಜಿಲ್ಲೆ ಅಪೌಷ್ಠಿಕತೆಯಲ್ಲಿ 5ನೇ ಸ್ಥಾನದಲ್ಲಿದ್ದು, ಅದರಲ್ಲಿ ದಾವಣಗೆರೆ ಮತ್ತು ಜಗಳೂರು ತಾಲ್ಲೂಕು ಒಂದು ಮತ್ತು ಎರಡನೇ ಸ್ಥಾನದಲ್ಲಿವೆ. ಕಲುಷಿತ ಆಹಾರ ಸೇವನೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಆರೋಗ್ಯ, ಆಹಾರ, ಜೀವನ ಶೈಲಿ ಬದಲಾಗಬೇಕು ಎಂದರು.
ಗರ್ಭಿಣಿಯರ ಸಾವಿನ ಸಂಖ್ಯೆ ಕಡಿಮೆಯಾಗಬೇಕು ಎಂಬುದು ತರಳಬಾಳು ಶ್ರೀಗಳ ದೂರ ದೃಷ್ಟಿಯಾಗಿದ್ದು, ಅದಕ್ಕಾಗಿ ತಂತ್ರಜ್ಞಾನ ಆಧಾರಿತ ಚಿಕಿತ್ಸೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಸಕಾಲಕ್ಕೆ ಚಿಕಿತ್ಸೆ ಕೊಡಿಸುವ ಕಾರ್ಯ ಆರಂಭವಾಗಿದೆ ಎಂದರು.
ಈ ವೇಳೆ ದಾನಿ ವೈ.ಕೆ. ಬಸವರಾಜಪ್ಪ, ಡಿಎಚ್‍ಒ ಡಾ. ಷಣ್ಮುಖಪ್ಪ, ಕೆವಿಕೆ ವಿಜ್ಞಾನಿ ಡಾ.ಎಂ.ಜಿ. ಬಸವನಗೌಡ, ಡಾ. ಅರವಿಂದ್, ಎಚ್.ಎಸ್. ರಾಘವೇಂದ್ರ, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಗುರುಮೂರ್ತಿ, ಎಸ್.ಕೆ. ಮಂಜುನಾಥ್, ವಿಜ್ಞಾನಿಗಳಾದ ಜೆ. ರಘುರಾಜ, ಡಾ. ಸುಪ್ರಿಯಾ. ಟಿಎಚ್‍ಒ ಡಾ. ವಿಶ್ವನಾಥ್, ಪಲ್ಲಾಗಟ್ಟೆ ವೈದ್ಯ ಡಾ. ಬಸವಂತ್ ಇದ್ದರು.