ದಾವಣಗೆರೆ, ಫೆ.10 – ದೇಹದ ಆಂತರಿಕ ಕ್ರಿಯೆಗಳಿಂದ ಮೊದಲ್ಗೊಂಡು ಹೊರಜಗತ್ತಿನ ಎಲ್ಲ ವ್ಯವಹಾರಗಳಲ್ಲೂ ಗಣಿತವು ಹಾಸು ಹೊಕ್ಕಾಗಿದ್ದು, ಗಣಿತದ ಕಲಿಕೆ ಕಷ್ಟಕರ ವಿದ್ಯೆ ಅಲ್ಲ ಎಂದು ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ ಅಭಿಪ್ರಾಯ ಪಟ್ಟರು.
ನಿನ್ನೆ ಸಂಜೆ ನಗರದ ಆರ್ಯಭಟ ಅಬ್ಯಾಕಸ್ ಮತ್ತು ವೇದಿಕ್ ಮ್ಯಾಥ್ಸ್ ನ ನಾಲ್ಕನೇ ಅಂತರ ಕೇಂದ್ರ ಸ್ಪರ್ಧಾ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಣ್ಣ ಸಣ್ಣ ಲೆಕ್ಕಗಳಿಗೂ ಕ್ಯಾಲ್ಕುಲೇಟರ್ ಹಾಗೂ ಮೊಬೈಲ್ ಗಳನ್ನು ಬಳಸುತ್ತಾ ಇಂದಿನ ಪೀಳಿಗೆ ಸ್ವಸಾಮರ್ಥ್ಯದ ಗಣಿತವನ್ನು ಮರೆಯುತ್ತಿದ್ದಾರೆ, ಉಪಕರಣಗಳಿಗಿಂತಲೂ ವೇಗವಾಗಿ ಸ್ವತಃ ಗಣಿತ ಮಾಡಬಹುದಾದ ಅಬ್ಯಾಕಸ್ ಹಾಗೂ ವೇದಿಕ್ ಗಣಿತಗಳ ಕಲಿಕೆ ಒಳ್ಳೆಯದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಸಂಗಮೇಶ್ವರ ಗೌಡ್ರು, ಅಬಾಕಸ್ ಕಲಿಯುವುದರಿಂದ ಮಕ್ಕಳಲ್ಲಿ ಗಣಿತದ ಬುದ್ಧಿ ಚುರುಕಾಗುತ್ತದೆ, ಸಾಧನೆಗೆ ಇದು ಅನುಕೂಲ ಎಂದರು. ಮತ್ತೋರ್ವ ಮುಖ್ಯ ಅತಿಥಿ ಡಾ. ಹರ್ಷ ಬಾಬಾಜಿ ಮಾತನಾಡಿ, ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕರೊಂದಿಗೆ ಪೋಷಕರ ಪಾತ್ರವೂ ಮಹತ್ತರವಾಗಿದೆ ಎಂದರು.
ಆರ್ಯಭಟ ಅಬ್ಯಾಕಸ್‌ನ ರಾಜೇಶ್ವರಿ ಚಿದಾನಂದರವರ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ನಾಗರತ್ನ ಚಂದ್ರಮೌಳಿಯವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕು.ಸ್ತುತಿ ಪ್ರಾರ್ಥಿಸಿದರು.
ಮಕ್ಕಳ ಅಬ್ಯಾಕಸ್ ಪ್ರತಿಭಾ ಪ್ರಾತ್ಯಕ್ಷಿಕೆಯನ್ನು ಜಯ ಶ್ರಾವಣಿ ನಿರ್ವಹಿಸಿದರು. ನವ್ಯಾ ನಿರೂಪಿಸಿದರು. ಕು. ಶುದ್ಧಿ ವಂದಿಸಿದರು. ಮಾಗನೂರು ಬಸಪ್ಪ ಪಬ್ಲಿಕ್ ಶಾಲೆಯ ಪ್ರಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು.