ಮಲೇಬೆನ್ನೂರು, ಫೆ. 10 – ಭದ್ರಾ ನಾಲೆಯಲ್ಲಿ ಅಳವಡಿಸಿರುವ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ಶನಿವಾರದವರೆಗೂ ನಡೆದಿದ್ದು, 14 ಅಕ್ರಮ ಪಂಪ್ ಸೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ನೀರಾವರಿ ನಿಗಮದ 3 ಮತ್ತು 4ನೇ ಉಪವಿಭಾಗದಲ್ಲಿ ನಾಲೆಗೆ ರೈತರು ಅಕ್ರಮವಾಗಿ ಅಳವಡಿಸಿದ್ದ ಪಂಪ್‌ಸೆಟ್‌ಗಳ ಫುಟ್ವಾಲ್ ಎತ್ತಿ ಹಾಕಿಕೊಂಡು ಮತ್ತು ವಿದ್ಯುತ್ ಸಂಪರ್ಕಗಳನ್ನು ಅಧಿಕಾರಿಗಳ ತಂಡ ಕಡಿತಗೊಳಿಸಿದೆ.
ದಿಬ್ಬದಹಳ್ಳಿಯಿಂದ ಆರಂಭವಾದ ತೆರವು ಕಾರ್ಯಾಚರಣೆ ಕೊಮಾರನಹಳ್ಳಿ, ಮಲೇಬೆನ್ನೂರು, ಜಿ. ಬೇವಿನಹಳ್ಳಿ, ಯಲವಟ್ಟಿ ಕ್ಯಾಂಪ್‌ವರೆಗೆ ನಡೆದಿದೆ. ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯದಲ್ಲಿ ಎಇಇ ಕೃಷ್ಣಮೂರ್ತಿ, ಉಪತಹಶೀಲ್ದಾರ್ ಆರ್ ರವಿ, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಆಡಳಿತಾಧಿಕಾರಿಗಳಾದ ಅಣ್ಣಪ್ಪ, ರಾಮಕೃಷ್ಣ, ಷರೀಫ್ ಮತ್ತು ಬೆಸ್ಕಾಂ, ನೀರಾವರಿ, ಕಂದಾಯ ,ಪೊಲೀಸ್ ಇಲಾಖೆಗಳ ಸಿಬ್ಬಂದಿಗಳು ಇದ್ದರು.
ಗೇಜ್ ಕುಸಿತ : ಕೊಮಾರನಹಳ್ಳಿ ಬಳಿಯ ಮುಖ್ಯ ನಾಲೆಯಲ್ಲಿ ಮಧ್ಯಾಹ್ನದ ವೇಳೆಗೆ 4.3 ಅಡಿ ಇದ್ದರೆ ಕೊನೆ ಭಾಗಕ್ಕೆ ನೀರು ಹರಿಯೋದಿಲ್ಲ ಎಂಬುದು ನೀರಗಂಟಿಗಳ ಅಭಿಪ್ರಾಯವಾಗಿದೆ. ಕೊನೆ ಭಾಗದ ಭತ್ತದ ಗದ್ದೆಗಳಿಗೆ ನೀರಿಲ್ಲ ಎಂದರೆ ತೋಟಗಳಿಗೆ ನೀರು ದೊರೆಯುವುದು ಕನಸಿನ ಮಾತು ಎಂದು ರೈತ ಪ್ರಭುಗೌಡ ಬೇಸರ ವ್ಯಕ್ತಪಡಿಸಿದರು.
ಭದ್ರಾ ಕಾಲುವೆಗಳಿಗೆ ಅಳವಡಿಸಿರುವ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ಅಧಿಕಾರಿಗಳ ತಂಡವನ್ನು ರಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹರಿಹರ ತಹಶೀಲ್ದಾರ್ ಗುರುಬಸವರಾಜ್ ಅವರು ಹರಿಹರ ತಾಲ್ಲೂಕಿನ ನಾಲಾ ವ್ಯಾಪ್ತಿಯಲ್ಲಿ 144ನೇ ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.