ವಾಲ್ಮೀಕಿ ಜಾತ್ರೋತ್ಸವದಲ್ಲಿ ರಾಜನಹಳ್ಳಿ ಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಸ್ವಾಮೀಜಿ ಕರೆ
ರಾಜನಹಳ್ಳಿ, ಫೆ.9- ಬೇಡ ನಾಯಕ ಸಮಾಜಕ್ಕೆ ಬಹುದೊಡ್ಡ ಚರಿತ್ರೆ ಇದೆ. ಅಂಬೇ ಡ್ಕರ್ ಕೊಟ್ಟ ಸಂವಿಧಾನದ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟನೆಯಾಗಬೇಕು ಎಂದು ರಾಜನಹಳ್ಳಿಯ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಹರಿಹರ ತಾಲ್ಲೂಕು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ 27ನೇ ವಾರ್ಷಿಕೋತ್ಸವ, ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಸ್ವಾಮೀಜಿಯವರ 18ನೇ ವರ್ಷದ ಪುಣ್ಯಾರಾಧನೆ ಹಾಗೂ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರ 17ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಜರುಗಿದ ಜನಜಾಗೃತಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಜಾತ್ರೆ ಮೂಲಕ ಜಾಗೃತರಾಗಿದ್ದೇವೆ ಎನ್ನು ವುದನ್ನು ಸರ್ಕಾರಕ್ಕೆ ತಿಳಿಸುವುದೇ ಜಾತ್ರೆಯ ಮುಖ್ಯ ಉದ್ದೇಶವಾಗಿದೆ. ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ, ಸುಳ್ಳು ಜಾತಿ ಪ್ರಮಾಣ ಪಡೆದುಕೊಳ್ಳುತ್ತಿದ್ದು, ಸರ್ಕಾರ ತಡೆಯಬೇಕು. ಬ್ಯಾಕ್ಲಾಗ್ ಹುದ್ದೆಗಳನ್ನು ಸರ್ಕಾರ ತುಂಬಿಕೊಳ್ಳ ಬೇಕು ಎಂಬುದು ನಮ್ಮ ಆಶಯ ವಾಗಿದೆ. ಕಳೆದ 17 ವರ್ಷಗಳಿಂದ ನಾವು ರಾಜ್ಯವನ್ನು ಸುತ್ತಿ ಸಮಾಜವನ್ನು ಸಂಘಟನೆ ಮಾಡುತ್ತಿದ್ದೇವೆ. ಸರ್ಕಾರದ ಶಕ್ತಿಯಾಗಿರುವ ನಮ್ಮ ಸಚಿವರು ಗಳು ಅಧಿವೇಶನದಲ್ಲಿ ಮಾತನಾಡಿ, ನಮ್ಮ ಸಮಾಜಕ್ಕೆ ನ್ಯಾಯ ಕೊಡಿಸಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಶ್ರೀಗಳು ರಾಜನಹಳ್ಳಿಯಿಂದ ರಾಜಧಾನಿವರೆಗೆ ಪಾದಯಾತ್ರೆ ಮಾಡಿ, ಸುದೀರ್ಘವಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ ನಂತರ, ಮೀಸಲಾತಿ ಹೆಚ್ಚಳವಾಯಿತು. ಇಡೀ ವಿಶ್ವ ರಾಮಾಯಣ ಒಪ್ಪಿಕೊಂಡಿದೆ. ಶೋಷಿತ ಸಮುದಾಯ ಉತ್ತರದಲ್ಲಿ ಅತ್ಯಂತ ಹಿಂದುಳಿದಿದೆ. ಶಿಕ್ಷಣದ ಮೂಲಕ ಸಮಾಜ ಬದಲಾವಣೆಯಾಗಬೇಕು. ಆ ನಿಟ್ಟಿನಲ್ಲಿ ಮಠ ಉತ್ತಮ ಕೆಲಸ ಮಾಡುತ್ತಿದೆ. ಜಾತಿ ಜನಗಣತಿ ಯಾಗಬೇಕೆಂಬುದು ಎಲ್ಲರ ಆಸೆಯಾಗಿದೆ. ಸರ್ಕಾರಕ್ಕೆ ವರದಿ ಬಂದರೂ ಕೆಲ ವಿಚ್ಛಿದ್ರಕಾರಕ ಶಕ್ತಿಗಳು ತಡೆಯುವ ಕೆಲಸ ಮಾಡುತ್ತಿವೆ. ಆದರೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂತಹ ಸಂದರ್ಭ ಬಂದರೂ ಕೂಡ ಜಾತಿ ಜನಗಣತಿ ವರದಿ ಪ್ರಕಟಣೆ ಮಾಡುತ್ತಾರೆ ಎಂದರು.
ಪ್ರತಿವರ್ಷ 58 ಸಾವಿರ ಕೋಟಿ ಹಣ ವ್ಯಯ ಮಾಡಿ, 5 ಗ್ಯಾರಂಟಿಗಳನ್ನು ನಾವು ಪೂರೈಸುತ್ತಿದ್ದೇವೆ. ಸಿದ್ದರಾಮಯ್ಯನವರ ಸರ್ಕಾರ ಕಷ್ಟ – ಸುಖದಲ್ಲಿ ನಿಮ್ಮ ಜೊತೆಯಲ್ಲಿದ್ದೇವೆ ವಾಲ್ಮೀಕಿ ಮಠದಲ್ಲಿ ವೈದ್ಯಕೀಯ ಹಾಗೂ ಇಂಜನಿಯರಿಗ್ ಕಾಲೇಜು ತೆರೆಯಿರಿ, ನಮ್ಮ ಸಹಕಾರವಿದೆ ಎಂದರು. ಶ್ರೀರಾಮನ ಹೆಸರನ್ನು ಹೇಳಿ ಜನರನ್ನು ವಂಚಿಸಲು ಬರುವವರು ಇದ್ದಾರೆ ಎಚ್ಚರವಾಗಿರಿ ಎಂದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳು ಜಾರಿಯಾಗಲು ನಾವು ಶ್ರಮಪಡಬೇಕಿದೆ ಎಂದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, ಜಾತಿ ವಿನಾಶವಾಗ ಬೇಕು ಎಂದು ಅಂಬೇಡ್ಕರ್, ಬಸವಣ್ಣನವರು ಹೇಳಿದರೂ ಸಹ ಇತ್ತೀಚಿಗೆ ಜಾತಿಗಟ್ಟಿಯಾಗುತ್ತದೆ. ರಾಮಾಯಣ ಬರೆದ ಗುಂಪಿಗೆ ಸೇರಿದವರು ನಾವುಗಳೆಲ್ಲಾ ಉತ್ತೇಜಿತರಾಗಬೇಕು. ರಾಮ ಪೂಜಾ ವಸ್ತುವಲ್ಲ. ನಾವು ಶಿಕ್ಷಣ ಪಡೆಯಬೇಕು. ಕೇಸರಿಕರಣವಾಗದೇ ನೀಲಿಕರಣವಾಗಬೇಕು ಎಂದರು.
ಮದಕರಿ ನಾಯಕ ಪ್ರಶಸ್ತಿ ವಿಜೇತ ಚಲನಚಿತ್ರ ನಟ ಶಶಿಕುಮಾರ್ ಮಾತನಾಡಿ, ಎಸ್ಸಿ-ಎಸ್ಟಿಯವರು ಒಂದಾದರೆ ರಾಜ್ಯದಲ್ಲಿ ಪ್ರಮುಖ ಹುದ್ದೆಯ ಚುಕ್ಕಾಣೆ ಹಿಡಿಯಬಹುದು. ವಿದ್ಯೆ ಯಾರು ಕದಿಯದ ವಸ್ತು ಹಾಗಾಗಿ ಪ್ರತಿಯೊಬ್ಬರು ಶಿಕ್ಷಣವಂತರಾಗಿ ಒಳ ಜಗಳ ಬಿಟ್ಟು ಎಲ್ಲರೂ ಒಂದಾಗಿ ಮಠದಲ್ಲಿ ಶಿಕ್ಷಣ ಸಂಸ್ಥೆಗಳು ಆಗಲಿ ಎಂದರು.
ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಭಾರತದ ಇತಿಹಾಸದಲ್ಲಿ ಮಹಾಕಾವ್ಯ ರಚಿಸಿದ ವಾಲ್ಮೀಕಿ ನಾಯಕರು, ರಾಜರು, ಪಾಳೇಗಾರರು, ಭೇಟೆಯಾಡುವವರು ಶ್ರೇಣೀಕೃತ ಸಮಾಜದ ವ್ಯವಸ್ಥೆಯಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದ್ದು, ಸುಶಿಕ್ಷಿತರಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಜಾಗೃತರಾಗಬೇಕು ಎಂದು ಹೇಳಿದರು.
ಸಂಸದ ಇ.ತುಕಾರಾಂ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಜಾತ್ರೆಯ ಅಧ್ಯಕ್ಷ ಜಗಳೂರಿನ ಶಾಸಕ ಬಿ.ದೇವೇಂದ್ರಪ್ಪ ಚಿಕ್ಕಮ್ಮನಹಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಹರಪನಹಳ್ಳಿ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ, ಚಳ್ಳಕೆರೆ ಶಾಸಕ ರಘುಮೂರ್ತಿ, ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ಶಿಗ್ಗಾಂವಿ ಶಾಸಕ ಪಠಾಣಾ ಯಾಸೀರ್ ಅಹ್ಮದ್, ಹೆಗ್ಗಡದೇವನಕೋಟೆ ಶಾಸಕ ಅನೀಲ ಚಿಕ್ಕಮಾಧು, ಹಿರೇಕೆರೂರು ಶಾಸಕ ಯು.ಬಿ.ಬಣಕಾರ, ಸುರಪುರ ಶಾಸಕ ರಾಜಾವೇಣು ಗೋಪಾಲನಾಯಕ, ಮಾಯಕೊಂಡ ಶಾಸಕ ಕೆ.ಎಸ್ ಬಸವಂತಪ್ಪ, ಕಂಪ್ಲಿ ಶಾಸಕ ಗಣೇಶ್, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ಮಾಜಿ ಶಾಸಕ ವೈ.ರಾಮಪ್ಪ, ಮಠದ ಧರ್ಮದರ್ಶಿ ದಾವಣಗೆರೆ ಬಡಗಿ ವೀರಣ್ಣ, ದಾವಣಗೆರೆ ಮಾಜಿ ಮಹಾಪೌರ ವಿನಾಯಕ ಪೈಲ್ವಾನ್, ನಂದಿಗಾವಿ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಚನ್ನಗಿರಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಹೊದಿಗೆರೆ ರಮೇಶ್ ಸೇರಿದಂತೆ ಇತರರು ಇದ್ದರು.