ಸ್ತ್ರೀ ಸಮಾನತೆಯಿಂದ ಸಮಾಜದ ಉದ್ಧಾರ ಸಾಧ್ಯ

ಸ್ತ್ರೀ ಸಮಾನತೆಯಿಂದ ಸಮಾಜದ ಉದ್ಧಾರ ಸಾಧ್ಯ

ಎಸ್.ಬಿ.ಸಿ. ಕಾಲೇಜಿನ ಕಾರ್ಯಕ್ರಮದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌

ಅಂಬೇಡ್ಕರ್‌ ಜೀ ಅವರೂ ಹೇಳುತ್ತಿದ್ದರು. `ಸ್ತ್ರೀಯರಿಗೆ ಸಮಾನತೆ ಸಿಗದಿದ್ದರೇ ರಾಷ್ಟ್ರ ಉದ್ಧಾರ ಆಗಲ್ಲ. ಹಾಗಾಗಿ ಅನುಚ್ಛೇದ 15(3)ನ್ನು ಮಾಡಿದರು.

– ಕೃಷ್ಣ ಎಸ್‌. ದೀಕ್ಷಿತ್‌, ಹೈಕೋರ್ಟ್‌ ನ್ಯಾಯಮೂರ್ತಿ

ದಾವಣಗೆರೆ, ಫೆ.9- ಸಮುದಾಯದಲ್ಲಿ ಮಹಿಳೆಯರನ್ನು ಸಮಾನತೆಯಿಂದ ಕಾಣದಿದ್ದರೇ, ಸಮಾಜದ ಉದ್ಧಾರ ಅಸಾಧ್ಯ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಹೇಳಿದರು.

ಅಧಿವಕ್ತಾ ಪರಿಷತ್‌, ಎಸ್‌.ಬಿ.ಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು `ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಮಹಿಳೆಯರ ಪಾತ್ರ’ ಎಂಬ ವಿಷಯದಡಿ ಅವರು ಮಾತನಾಡಿದರು.

12ನೇ ಶತಮಾನದ ಅನುಭಾವ ಮಂಟಪದಲ್ಲಿ ಸ್ತ್ರೀ ಚಿಂತನೆ, ಸ್ವಾತಂತ್ರ್ಯ ಹಾಗೂ ಅವರ ಸಮಾನತೆಗೆ ಪ್ರಾಶಸ್ತ್ಯ ನೀಡಲಾಗಿತ್ತು. ಹಾಗಾಗಿ ಬಸವಣ್ಣ ಸ್ತ್ರೀ ಸಮಾನತೆಯ ಹರಿಕಾರರು ಆಗಿದ್ದಾರೆ ಎಂದು ತಿಳಿಸಿದರು.

ಮರತೂರಿನ ವಿಜ್ಞಾನೇಶ್ವರನ ಮಿತಾಕ್ಷರದಲ್ಲಿ `ಯಾವುದೇ ಮನೆಯಲ್ಲಿ ನಡೆಯುವ ಹೋಮ-ಹವನಗಳು, ಷೋಡಶ ಸಂಸ್ಕಾರಗಳಲ್ಲಿ ಹೆಣ್ಣು ಕೂರುವ ದಿಕ್ಕು ಬದಲಾಗಬಹುದು. ಆದರೆ ಅವಳ ಉಪಸ್ಥಿತಿ ಬೇಕೇ-ಬೇಕು’ ಎಂದು ಹೇಳುತ್ತದೆ ಎಂದು ವಿವರಿಸಿದರು.

ವೇದಕಾಲದಲ್ಲಿ ಮಹಿಳೆ, ಗಂಡನೊಂದಿಗೆ ವಾಗ್ವಾದ ಮಾಡುತ್ತಿದ್ದಳು ಎನ್ನುವ ಶ್ಲೋಕಗಳಿವೆ. `ಎಲ್ಲೆಲ್ಲಿ ತಾಯಿ ಇರುತ್ತಾಳೊ, ಅಲ್ಲಲ್ಲಿ ಭಗವಂತ ಇರುತ್ತಾನೆ ಎಂದು ಮನುಸ್ಮೃತಿ ಹೇಳುತ್ತದೆ ಎಂದರು.

7ನೇ ಶತಮಾನದಲ್ಲಿ ಮಂಡನ ಮಿಶ್ರ ಮತ್ತು ಆದಿ ಶಂಕರರ ನಡುವೆ ಶ್ರೇಷ್ಠ ಚರ್ಚೆ ನಡೆದಿತ್ತು. ಇದರಲ್ಲಿ ಮಂಡನ ಮಿಶ್ರನ ಹೆಂಡತಿ ಉಭಯ ಭಾರತಿಯೇ ನ್ಯಾಯಮೂರ್ತಿ ಆಗಿದ್ದಳು. ಹಾಗಾಗಿ ಮಹಿಳೆಯನ್ನು ನ್ಯಾಯ ದೇವತೆ ಎಂದು ಕರೆಯುತ್ತೇವೆ ಎಂದು ಹೇಳಿದರು.

ಇಬ್ಬರ ಚರ್ಚೆಯಲ್ಲಿ ಉಭಯ ಭಾರತಿ ಹೇಳುತ್ತಾರೆ, `ಆದಿಶಂಕರರೇ ನೀವು, ನನ್ನ ಗಂಡನೊಂದಿಗೆ ಚರ್ಚೆಯಲ್ಲಿ ಗೆದ್ದಿದ್ದೀರಿ’ ಎಂದು ಗಂಡನ ವಿರುದ್ಧವೇ ನಿಷ್ಪಕ್ಷವಾಗಿ ತೀರ್ಪು ನೀಡಿರುತ್ತಾಳೆ ಎಂಬ ಸನ್ನಿವೇಶವನ್ನು ವಿವರಿಸಿದರು.

ಭಾರತೀಯ ಸೌಂದರ್ಯ ಮೀಮಾಂಸೆಯಲ್ಲಿ ಸ್ತ್ರೀ ಅಡಗಿ ಕೂಳಿತಿದ್ದಾಳೆ ಎಂದು ಓಶೋ ಭಗವಾನ್‌ ರಜನೀಶ್‌ ಹೇಳುತ್ತಾರೆ. ಒಂದೆಡೆ ಶಂಕರಾಚಾರ್ಯರು, ಕೆಟ್ಟ ಮಗು ಹುಟ್ಟಬಹುದು, ಕೆಟ್ಟ ತಾಯಿಯಲ್ಲ ಎಂದು ಹೆಣ್ಣಿನ ಬಗ್ಗೆ ಹೇಳಿದ್ದಾರೆ ಎಂದು ತಿಳಿಸಿದರು.

`ಸಮಾಜದ ಉದ್ಧಾರಕ್ಕೆ ಎಲ್ಲ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಲೇ ಬೇಕು ಎಂದು ಅಹಲ್ಯಾ ಬಾಯಿ ಹೊಳ್ಕರ್‌ ಕಟ್ಟಜ್ಞೆ ಹೊರಡಿಸಿದ್ದರು. ಇವರು ಒಂದು ದೇವಸ್ಥಾನ ನಿರ್ಮಾಣವಾದರೆ 2 ಶಾಲೆಗಳು ನಿರ್ಮಾಣವಾಗಬೇಕು ಎಂದು ಪ್ರತಿಪಾದಿಸಿದ್ದರು ಎಂದರು.

ಸೃಷ್ಠಿ ಮಾತೆಯ ಸ್ವರೂಪ, ಇವಳಿಂದಲೇ ಶಿಷ್ಠ ಸಮಾಜದ ನಿರ್ಮಾಣ ಸಾಧ್ಯ. ಸ್ತ್ರೀ ಇಲ್ಲದೇ, ಪುರುಷ ಅಪೂರ್ಣ. ಹೆಣ್ಣು ಶಿಕ್ಷಣವಂತಳಾದರೇ, ಕುಟುಂಬವೇ ಶಿಕ್ಷಣ ಪಡೆಯಲಿದೆ ಎಂದು ಹೇಳಿದರು.

ಈ ವೇಳೆ ನ್ಯಾಯಾಧೀಶರಾದ  ರಾಜೇಶ್ವರಿ ಎನ್‌. ಹೆಗಡೆ, ಮಹಾವೀರ ಎಂ. ಕರೆಣ್ಣನವರ್‌, ಅಧಿವಕ್ತಾ ಪರಿಷತ್‌ ಜಿಲ್ಲಾಧ್ಯಕ್ಷ ಎಲ್‌. ದಯಾನಂದ, ವಿನಾಯಕ ಎಜುಕೇಷನ್‌ ಟ್ರಸ್ಟಿನ ವ್ಯವಸ್ಥಾಪಕ ಡಾ. ಅಥಣಿ ವೀರಣ್ಣ, ಕಾರ್ಯದರ್ಶಿ ಮುರುಗೇಶ್‌, ಉದ್ಯಮಿ ಬಿ.ಸಿ. ಉಮಾಪತಿ, ಎಲ್‌.ಹೆಚ್‌. ಅರುಣ ಕುಮಾರ್‌, ಶಶಿಕಾಂತ್, ಎಂ.ಎಸ್‌. ಮನೋಜ್‌ ಇತರರು ಇದ್ದರು.

error: Content is protected !!