ಕುಕ್ಕುವಾಡ ಗ್ರಾಮದ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ

ಕುಕ್ಕುವಾಡ ಗ್ರಾಮದ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ

ಶಿಕ್ಷಣದಿಂದ ಮಾತ್ರ ಮನುಷ್ಯನ ಜೀವನ ಸಾರ್ಥಕತೆ ಕಂಡುಕೊಳ್ಳಲಿದ್ದು, ಪ್ರತಿಯೊಬ್ಬರು ಶಿಕ್ಷಣವಂತರಾಗಲು ಉದ್ಯಮಿ ಎಸ್.ಎಸ್. ಗಣೇಶ್ ಕರೆ

ದಾವಣಗೆರೆ, ಫೆ. 9 – ಪ್ರತಿಯೊಬ್ಬರ ಜೀವನ ಪರಿಪೂರ್ಣತೆ ಹೊಂದ ಬೇಕಾದರೆ, ಅದು ಶಿಕ್ಷಣದಿಂದ ಮಾತ್ರ ಸಾಧ್ಯವಾಗಲಿದೆ ಎಂಬುದನ್ನು ಅರಿತು ಪ್ರತಿಯೊಬ್ಬರು ಶಿಕ್ಷಣ ಪಡೆಯಲು ಮುಂದಾಗಬೇಕೆಂದು ದಾವಣಗೆರೆ ಷುಗರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್. ಗಣೇಶ್ ಕರೆ ನೀಡಿದರು.

ಇಲ್ಲಿಗೆ ಸಮೀಪದ ಕುಕ್ಕುವಾಡ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ನಿನ್ನೆ ಹಮ್ಮಿಕೊಂಡಿದ್ದ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಶಿಕ್ಷಣ ನಮ್ಮನ್ನು ವಿನಯವಂತರನ್ನಾಗಿ ಮಾಡುತ್ತದೆ. ಶಿಕ್ಷಣವು ಜಾಗೃತಿ ಮೂಡಿಸುತ್ತದೆ ಮತ್ತು ನಮ್ಮ ಪರಿಧಿಯನ್ನು ವಿಸ್ತರಿಸುತ್ತದೆ. ನಾವು ನಮ್ಮ ಬಗ್ಗೆ, ಸಮಾಜ ಮತ್ತು ನಮ್ಮನ್ನು ಸುತ್ತುವರೆದಿರುವ ಮತ್ತು ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ಎಲ್ಲದರ ಬಗ್ಗೆ ಹೆಚ್ಚು ಜಾಗೃತರಾಗುತ್ತೇವೆ ಎಂಬುದನ್ನು ನಾವು ಅರಿತು ಶಿಕ್ಷಣವಂತರಾಗಲು ಪ್ರಯತ್ನಿಸಬೇಕು ಎಂದರು.

ಈ ಹಿಂದೆ ಎಲ್ಲರಿಗೂ ಶಿಕ್ಷಣ ದೊರೆಯುತ್ತಿರಲಿಲ್ಲ. ಆದರೆ ಇಂದು ಸರ್ಕಾರವೇ ಕಡ್ಡಾಯ ಶಿಕ್ಷಣ ಜಾರಿಗೆ ತಂದಿದ್ದು, ಇದರಿಂದ ಎಷ್ಟೋ ಬಡವರ ಮಕ್ಕಳು ಶಿಕ್ಷಣ ಪಡೆದು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂದ ಅವರು ತಾವು ಶಿಕ್ಷಣ ಪಡೆದ ಬಗ್ಗೆ ವಿವರವಾಗಿ ತಿಳಿಸಿದರು.

ತಮ್ಮ ತಂದೆಯವರಾದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಈ ಕಾರ್ಯಕ್ರಮವನ್ನು ನೆರವೇರಿಸಬೇಕಾಗಿತ್ತು. ಅವರು ಕಾರಣಾಂತರಗಳಿಂದ ಬಾರದ ಕಾರಣ, ನನಗೆ ಈ ಸುದೈವ ಬಂದಿದ್ದು, ಈ ಗ್ರಾಮಕ್ಕೆ ನಮ್ಮ ತಂದೆಯವರ ಕೊಡುಗೆ ಸಾಕಷ್ಟಿದೆ ಎಂದು ತಿಳಿಸಿದ ಅವರು, ಸದಾ ಜನರ ಸಂಕಷ್ಟಕ್ಕೆ ಸ್ಪಂದಿಸಿ, ಅಭಿವೃದ್ಧಿ ಪರ ಕೆಲಸ ಮಾಡುವವರನ್ನು ಬೆಂಬಲಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.

ಗ್ರಾಮದ ಹಿರಿಯ ಮುಖಂಡ ಡಿ. ಮಲ್ಲೇಶಪ್ಪ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಈ ಭಾಗದ ಶಾಸಕರಾದ ನಂತರ ಗ್ರಾಮದ ಅಭಿ ವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಅವರು ಅನುದಾನ ನೀಡಲು ನಮಗೆ ಯಾವಾಗಲೂ ಬೆಂಬ ಲವಾಗಿ ಎಸ್.ಎಸ್. ಗಣೇಶ್ ಅವರು ನಿಂತಿದ್ದಾರೆ ಎಂದು ಉದಾಹರಣೆ ಸಮೇತ ವಿವರಿಸಿದರು.

ದಾವಣಗೆರೆ ತಾಲ್ಲೂಕು ಮಾಜಿ ಸದಸ್ಯ ಜಿ.ಎಂ. ರುದ್ರೇಗೌಡ ಮಾತನಾಡಿ, ಎಸ್ಸೆಸ್ ಸದಾ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಾರೆ ಎಂಬುದಕ್ಕೆ ನಮ್ಮ ಗ್ರಾಮಕ್ಕೆ ಅವರು ನೀಡಿದ ಕೊಡುಗೆಯೇ ಸಾಕ್ಷಿ ಎಂದರು.

ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರ ಶಿವಮೂರ್ತಿ, ಗ್ರಾಮದ ಮುಖಂಡರುಗಳಾದ ಅರವಿಂದ್, ಪ್ರವೀಣ್, ಜಗದೀಶ್, ರಾಜಶೇಖರಪ್ಪ, ಶಂಕರ್, ಲಿಂಗರಾಜ್, ಗುತ್ತಿಗೆದಾರರು ಹಾಗೂ ಮತ್ತಿತರರಿದ್ದರು.

error: Content is protected !!