ವಿಶ್ವ ಸಮ್ಮೇಳನಕ್ಕೆ 50 ಲಕ್ಷ, ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನಗಳಿಗೆ ಹಣ ಮೀಸಲು
ದಾವಣಗೆರೆ, ಫೆ.6- ಮಹಾನಗರ ಪಾಲಿಕೆಯ ಆಡಳಿತಾರೂಢ ಕಾಂಗ್ರೆಸ್ 2025–26ನೇ ಸಾಲಿನ ಆರ್ಥಿಕ ವರ್ಷಕ್ಕೆ 516.35 ಲಕ್ಷ ರೂಪಾಯಿಯ ಮಿಗತೆ ಬಜೆಟ್ಟನ್ನು ಗುರುವಾರ ನಗರದ ಪಾಲಿಕೆ ಸಭಾಭವನದಲ್ಲಿ ಮಂಡಿಸಿತು.
ಪಾಲಿಕೆ ಮೇಯರ್ ಕೆ.ಚಮನ್ ಸಾಬ್, `ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ಹೋಗಬಾರದು…’ ವಚನದ ಮೂಲಕ ಬಜೆಟ್ ಮಂಡಿಸುತ್ತಾ, ಕೊನೆಯಲ್ಲಿ `ಇವನಾರವ ಇವನಾರವ…’ ವಚನ ಹೇಳುವ ಮೂಲಕ ಎಲ್ಲರೂ ಅಭಿವೃದ್ಧಿಗೆ ಕೈ ಜೋಡಿಸುವಂತೆ ಕರೆ ನೀಡಿದರು.
ಬಜೆಟ್ನಲ್ಲಿ ಕೆಲವು ಹೊಸ ಯೋಜನೆ, ಕಾಮಗಾರಿಗಳಿಗೆ ಅನುದಾನ ಘೋಷಿಸಿದ್ದರೂ, ಈ ಹಿಂದಿನ ಬಜೆಟ್ಗಳಲ್ಲಿ ಘೋಷಿಸಿದ್ದ ಹಲವು ಯೋಜನೆಗಳನ್ನು ಈ ಬಾರಿಯ ಬಜೆಟ್ನಲ್ಲಿ ಮತ್ತೆ ಪ್ರಸ್ತಾಪಿಸಲಾಗಿದೆ.
ವಿಶ್ವ ಕನ್ನಡ ಸಮ್ಮೇಳನಕ್ಕೆ 50 ಲಕ್ಷ ರೂ.: ಮುಂದಿನ ವರ್ಷ ದಾವಣಗೆರೆ ನಗರದಲ್ಲಿ ರಾಜ್ಯ ಸರ್ಕಾರವು ವಿಶ್ವ ಸಮ್ಮೇಳನ ಆಯೋಜಿಸುವ ಸಾಧ್ಯತೆ ಇರುವುದಾಗಿ ಹೇಳಿ, ಇದಕ್ಕಾಗಿ ಪಾಲಿಕೆ 50 ಲಕ್ಷ ರೂ. ವಂತಿಕೆ ನೀಡಲು ಅನುದಾನ ಕಾಯ್ದಿರಿಸಿದೆ.
ತಾಲ್ಲೂಕು, ಜಿಲ್ಲಾ ಸಮ್ಮೇಳನಕ್ಕೆ ಅನುದಾನ: ಅಲ್ಲದೆ ಪಾಲಿಕೆ ವತಿಯಿಂದ ಆಚರಿಸುವ ಕನ್ನಡ ರಾಜ್ಯೋತ್ಸವಕ್ಕೆ 50 ಲಕ್ಷ ರೂ. ಸೇರಿದಂತೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 50 ಸಾವಿರ ರೂ. ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 25 ಲಕ್ಷ ರೂ. ದೇಣಿಗೆ ನೀಡಲು ನಿರ್ಧರಿಸಲಾಗಿದೆ.
ಒಣ ತ್ಯಾಜ್ಯ ನಿರ್ವಹಣೆಗೆ 11.10 ಕೋಟಿ ರೂ. : ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ವಿಲೇಪಡಿಸಲು 97 ಪಿ.ಟಿ.ಡಿ. ಸಾಮರ್ಥ್ಯದ ಮೆಟೀರಿಯಲ್ ರಿಕವರಿ ಫಿಸಿಲಿಟಿ ಅಭಿವೃದ್ಧಿ ಪಡಿಸಲು ಆಯೋಜಿಸಲಾಗಿದ್ದು, ಇದಕ್ಕಾಗಿ 11.10 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ಸಾರ್ವಜನಿಕ ಶೌಚಾಲಯಕ್ಕೆ 1.26 ಕೋಟಿ.: ನಗರದ ವಿವಿಧೆಡೆ ಸಾರ್ವಜನಿಕ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ನಿರ್ಮಿಸಲು 126.32 ಲಕ್ಷ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ.
ಜಲಸಿರಿ: ವಿಪಕ್ಷ-ಆಡಳಿತ ಪಕ್ಷ ವಾಕ್ಸಮರ
34 ಝೋನ್ಗಳಲ್ಲಿ ಜಲಸಿರಿ ಯೋಜನೆ ಪೂರ್ಣಗೊಂಡಿರುವುದಾಗಿ ಬಜೆಟ್ನಲ್ಲಿ ಸುಳ್ಳು ಹೇಳಿ, ಜನರನ್ನು ದಾರಿ ತಪ್ಪಿಸ ಲಾಗುತ್ತಿದೆ ಎಂದು ಬಿಜೆಪಿ ಸದಸ್ಯರು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
ಪಾಲಿಕೆ ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ್ 24 ತಾಸು ಎಲ್ಲಿ ನೀರು ಬರು ತ್ತಿದೆ ತೋರಿಸಿ ಎಂದು ಹೇಳಿದರು. ಮಾಜಿ ಮೇಯರ್ ಎಸ್.ಟಿ. ವೀರೇಶ್, ಖಾಲಿ ಮೀಟರ್ಗಳು ಓಡ್ತಿವೆ. ಸಾವಿರಾರು ರೂಪಾಯಿ ಬಿಲ್ ಬರ್ತಿದೆ ಎಂದು ಕಿಡಿಕಾರಿದರು.
ಮಧ್ಯ ಪ್ರವೇಶಿಸಿದ ಎ. ನಾಗರಾಜ್, 34 ಝೋನ್ ಗಳಲ್ಲಿ ಕಾಮಗಾರಿ ಪೂರ್ಣ ವಾಗಿ ನೀರು ನೀಡಲಾಗುತ್ತಿದೆ ಎಂದರು. ಜನರಲ್ಲಿ ಮಾಹಿತಿ ಕೊರತೆಯಿಂದ ನಲ್ಲಿ ಬಂದ್ ಮಾಡದ ಕಾರಣ ಬಿಲ್ ಹೆಚ್ಚು ಬರುತ್ತಿತ್ತು, ಈಗ ಎಲ್ಲವೂ ಸರಿಹೋಗಿದೆ ಎಂದರು.
ನಮ್ಮ ಭಾಗದ ಜನರಿಗೆ ಜಲಸಿರಿ ಏನೆಂಬುದೇ ಗೊತ್ತಿಲ್ಲ ಎಂದು ಶಿವಪ್ರಕಾಶ್ ಹೇಳಿದರೆ, ನಮ್ಮ ವಾರ್ಡ್ನಲ್ಲಿ ಅರ್ಧದಷ್ಟೂ ಕಾಮಗಾರಿ ನಡೆದಿಲ್ಲ ಎಂದು ಕೆ.ಎಂ. ವೀರೇಶ್ ಹೇಳಿದರು. ಈ ಹಿಂದೆ ವಿಶಾಖಪಟ್ಟಣಂಗೆ ಪ್ರವಾಸ ಹೋಗಿದ್ದಾಗ ಅಲ್ಲಿ ನೀರಿನ ಬಿಲ್ 184 ರೂ. ದಾಟಿಲ್ಲ. ಆದರೆ ಇಲ್ಲಿ ಸಾವಿರಾರು ರೂ. ಬಿಲ್ ಬರುತ್ತಿದೆ ಎಂದು ಶಿವಾನಂದ ತರಾಟೆಗೆ ತೆಗೆದುಕೊಂಡರು.
ಈ ವೇಳೆ ನಮ್ಮ ಮನೆಯ ಬಿಲ್ ಕಡಿಮೆ ಬಂದಿದೆ ನೋಡಿ ಎಂದು ಎ.ನಾಗರಾಜ್ ತೋರಿಸಿದಾಗ, ಕಾಂಗ್ರೆಸ್ ಪಕ್ಷದವರು ಎಂದು ಕಡಿಮೆ ಬಿಲ್ ಬಂದಿರಬಹುದು. ಈ ಬಗ್ಗೆ ತನಿಖೆಯಾಗಲಿ ಎಂದು ಎಸ್.ಟಿ. ವೀರೇಶ್ ಹೇಳಿದರು.
ಮೇಯರ್ ಚಮನ್ ಸಾಬ್, ಇದು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ, ನಿಮ್ಮ ಪ್ರಕಾರ ತಪ್ಪಿದೆ. ನಮ್ಮ ಪ್ರಕಾರ ಎಲ್ಲವೂ ಸರಿ ಇದೆ. ಬೇರೆ ವಿಷಯ ಚರ್ಚಿಸೋಣ ಎಂದು ವಾಕ್ಸಮರಕ್ಕೆ ತೆರೆ ಎಳೆದರು.
ಶುಲ್ಕ ಭಾಗ್ಯ
ಈ ಬಾರಿಯ ಬಜೆಟ್ನಲ್ಲಿ 6 ಕೋಟಿ ರೂ. ನೀರಿನ ಕಂದಾಯ ವಸೂಲಿ ಗುರಿ ಹೊಂದಲಾಗಿದೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಅನುಷ್ಠಾನಗೊಳಿಸಿ ಇದರಿಂದ 25 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಅಲ್ಲದೇ ಉದ್ಯಾನವನಗಳಿಗೂ ಪ್ರವೇಶ ಶುಲ್ಕ ವಿಧಿಸಿ 5 ಲಕ್ಷ ರೂ. ಆದಾಯ ಸಂಗ್ರಹಿಸುವ ಯೋಜನೆ ಇದೆ.
ಖಾಲಿ ಚೊಂಬು ಪ್ರದರ್ಶಿಸಿದ ಬಿಜೆಪಿ
ಕಾಂಗ್ರೆಸ್ ಬಜೆಟ್ ಮಂಡಿಸುತ್ತಿದ್ದಂತೆ ಖಾಲಿ ಚೊಂಬು ಹಿಡಿದ ಬಿಜೆಪಿ ಸದಸ್ಯರು ‘ಇದೊಂದು ಖಾಲಿ ಚೊಂಬು ಬಜೆಟ್ ಆಗಿದೆ. ಇದರಲ್ಲಿ ಹೊಸದಾಗಿ ಏನನ್ನೂ ಘೋಷಿಸಿಲ್ಲ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು, ‘ಇದೊಂದು ಉತ್ತಮ ಬಜೆಟ್’ ಆಗಿದೆ. ನಿಮ್ಮ ತಲೆ ಖಾಲಿಯಾಗಿದೆ. ಅದ್ದರಿಂದ ಚೊಂಬು ಪ್ರದರ್ಶಿಸುತ್ತಿದ್ದೀರಿ ಎಂದು ತಿರುಗೇಟು ನೀಡಿದರು.
ವಸತಿ ಯೋಜನೆಯಲ್ಲಿ ಅವ್ಯವಹಾರ
ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಆಶ್ರಯ ವಸತಿ ಯೋಜನೆಯಡಿ ಫಲಾ ನುಭವಿಗಳಿಗೆ ಹಕ್ಕು ಪತ್ರ ನೀಡುತ್ತಿಲ್ಲ ಎಂದು ಸದಸ್ಯರಾದ ಶಿವಾನಂದ್, ಕೆ.ಎಂ. ವೀರೇಶ್ ಸಭೆಯಲ್ಲಿ ಆರೋಪಿಸಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಗ್ರಾಮಗಳನ್ನು ದಾವಣಗೆರೆಗೆ ಸೇರಿಸಿಕೊಂಡು ನಿವೇಶನ ಹಂಚಿಕೆ ಮಾಡಲಾಗಿತ್ತು. ಆಗ ಒಂದು ಸಂವಿಧಾನ, ಕಾನೂನು ಇತ್ತು, ಈಗ ಒಂದು ಕಾನೂನು, ಸಂವಿಧಾನ ಇದೆಯಾ ಎಂದು ಪ್ರಶ್ನಿಸಿದರು.
ಹಕ್ಕುಪತ್ರ ನೀಡುವುದು ನಾನಲ್ಲ. ಆಶ್ರಯ ಸಮಿತಿ. ಈ ಸಮಿತಿಯ ಅಧ್ಯಕ್ಷರನ್ನು ಕೇಳಿ. ದಾವಣಗೆರೆ ದಕ್ಷಿಣದಲ್ಲಿ ಹೆಚ್ಚು ಕಡಿಮೆ ಆಗಿದೆ. ಈ ಕಾರಣಕ್ಕೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಕೆ. ಚಮನ್ ಸಾಬ್ ಹೇಳಿದರು.
ದಾವಣಗೆರೆ ಭೀಷ್ಮ ಎಂದು ಕರೆಯಿಸಿಕೊಳ್ಳುವ ಎಸ್. ಎ. ರವೀಂದ್ರನಾಥ್ ಅವರು ಬಡವರಿಗೆ ಸೂರು ಒದಗಿಸುವ ಕೆಲಸ ಮಾಡಿದ್ದಾರೆ. ಆದರೆ ಜನರು ಟೆಂಟ್ ಹಾಕಿಕೊಂಡು, ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ. ಚೇಳು, ಹಾವುಗಳ ಕಾಟದ ಮಧ್ಯೆ ಬದುಕು ಸಾಗಿಸುತ್ತಿದ್ದು, ಅವರ ಕಷ್ಟವನ್ನಾದರೂ ಅರಿತು ಹಕ್ಕುಪತ್ರ ನೀಡುವಂತೆ ಕೆ.ಎಂ. ವೀರೇಶ್ ಒತ್ತಾಯಿಸಿದರು.
ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯರಾದ ಎ. ನಾಗರಾಜ್ ಮತ್ತು ಗಡಿಗುಡಾಳ್ ಮಂಜುನಾಥ್, ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಭಾರೀ ಹಗರಣ ನಡೆದಿದೆ. ಹಣ ಪಡೆದು ನಿವೇಶನ ನೀಡಲಾಗುತ್ತಿದೆ. ನಾಳೆಯೇ ಹಣ ಕೊಟ್ಟವರನ್ನು ಕರೆದುಕೊಂಡು ಬರುತ್ತೇನೆ ಎಂದರು. ಆಗ ಬಿಜೆಪಿ ಸದಸ್ಯರು ಕರೆದುಕೊಂಡು ಬನ್ನಿ. ಹಣ ಕೊಟ್ಟವರ ಹೆಸರು ಬಹಿರಂಗಪಡಿಸಿ. ಇಲ್ಲಿಗೆ ಕರೆಯಿಸಿ ಎಂದು ಸವಾಲೆಸೆದರು. ಈ ಸವಾಲು ಸ್ವೀಕರಿಸಿದ ಎ. ನಾಗರಾಜ್ ನಾಳೆಯೇ ಕರೆದುಕೊಂಡು ಬರುತ್ತೇನೆ. ಹಣ ವಾಪಸ್ ಕೊಡಿಸಬೇಕು ಎಂದರು. ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಹಗರಣವನ್ನು ಸಿಒಡಿ ತನಿಖೆಗೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಚಮನ್ ಸಾಬ್ ಹೇಳಿದರು.
ಬೀದಿ ನಾಯಿಗಳ ಬಗ್ಗೆ ಗಂಭೀರ ಚರ್ಚೆ
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಇಂದಿನ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಸದಸ್ಯರು ಪಕ್ಷಭೇದ ಮರೆತು ನಾಯಿಗಳ ಕಡಿವಾಣಕ್ಕಾಗಿ ಒತ್ತಾಯಿಸಿದರು.
ಪಾಲಿಕೆಯಿಂದ ಸಂತಾನ ಹರಣ ಶಸ್ತ್ರ ಚಕಿತ್ಸೆಗಾಗಿ ಪ್ರತಿ ವರ್ಷ 1 ಕೋಟಿ ರೂ. ಖರ್ಚು ಮಾಡಿದರೂ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಶಿವಾನಂದ್ ಚರ್ಚೆ ಆರಂಭಿಸಿದರು. ಸಾಕಷ್ಟು ಚರ್ಚೆಯ ನಂತರ ಮೇಯರ್ ಚಮನ್ ಸಾಬ್ ಮಾತನಾಡಿ, ನಾಯಿಗಳ ಕಡಿವಾಣದ ಬಗ್ಗೆ ಚರ್ಚಿಸಲು ಪ್ರಾಣಿ ದಯಾ ಸಂಘ ದವರನ್ನೂ ಸೇರಿಸಿಕೊಂಡು ಒಂದು ಸಭೆ ನಡೆಸೋಣ ಎಂದರು.
ನಾಯಿ ಕಡಿದವರಿಗೆ ಕೊಡುವ ಪರಿಹಾರ ಹೆಚ್ಚಿಸುವ ಸಲಹೆ ಕೇಳಿ ಬಂದಾಗ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಆಯುಕ್ತೆ ರೇಣುಕಾ ಹೇಳಿದರು.
ವರದಿಗಾರರ ಕೂಟಕ್ಕೆ ನಿವೇಶನ
ವಿದ್ಯಾನಗರದಲ್ಲಿ 40×60 ಅಡಿಯ ನಿವೇಶವನ್ನು ಜಿಲ್ಲಾ ವರದಿಗಾರರ ಕೂಟಕ್ಕೆ ನೀಡಲು ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ವೇಳೆ ನಾಮ ನಿರ್ದೇಶಿತ ಸದಸ್ಯ ಸುರಭಿ ಶಿವಮೂರ್ತಿ, ವರದಿಗಾರರ ಕೂಟದ ಕಟ್ಟಡ ನಿರ್ಮಾಣಕ್ಕೆ ವೈಯಕ್ತಿಕವಾಗಿ 1 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದರು.
ಕ್ರೀಡಾಪಟುಗಳಿಗೆ ಸಿಗದ ಪ್ರೋತ್ಸಾಹ : ವೀರೇಶ್ ಆರೋಪ
ಈ ಬಾರಿಯ ಬಜೆಟ್ನಲ್ಲಿ ಗರಡಿ ಕುಸ್ತಿ ಪಟುಗಳನ್ನು ಉತ್ತೇಜಿ ಸಲು ಹಾಗೂ ಕುಸ್ತಿ ಕ್ರೀಡೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮೇಯರ್ ಕಪ್ ಪಂದ್ಯಾವಳಿಗೆ 20 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ. ಆದರೆ ಯಾವ ವರ್ಷವೂ ಮೇಯರ್ ಕಪ್ ಕ್ರೀಡೆ ನಡೆಯಲಿಲ್ಲ. ಇದು ಬರೀ ಲೆಕ್ಕ ತೋರಿಸಲಷ್ಟೇ ಮೀಸಲಾಗಿದೆ ಎಂದು ಕೆ.ಎಂ. ವೀರೇಶ್ ಆರೋಪಿಸಿದರು.
ತ್ಯಾಜ್ಯ ವಿಂಗಡಣೆ ಬುಟ್ಟಿ ವಿತರಣೆ: ನಗರದ ಆಯ್ದ ವಾರ್ಡ್ಗಳಲ್ಲಿ ತ್ಯಾಜ್ಯ ವಿಂಗಡಣೆಗಾಗಿ ಪ್ರತಿ ಮನೆಗೆ ಪ್ಲಾಸ್ಟಿಕ್ ಬುಟ್ಟಿಗಳನ್ನು ನೀಡಲು ಪ್ರಾಥಮಿಕವಾಗಿ 25 ಲಕ್ಷ ರೂ. ಕಾಯ್ದಿರಿಸಲಾಗಿದೆ.
ಜರ್ಮನ್ ಮಾದರಿ ವೃತ್ತ ಅಭಿವೃದ್ಧಿ: ಜರ್ಮನ್ ಮಾದರಿಯಲ್ಲಿ ನಗರದ ಆಯ್ದ ವೃತ್ತಗಳನ್ನು ಅಭಿವೃದ್ಧಿ ಪಡಿಸಲು ಅಂದಾಜು 2 ಕೋಟಿ ರೂ. ಯೋಜನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಡ್ರೋನ್ ಸರ್ವೇ : ಪಾಲಿಕೆ ವ್ಯಾಪ್ತಿಯ ಖಾಸಗಿ, ಸರ್ಕಾರದ ಹಾಗೂ ಅಭಿವೃದ್ಧಿ ಕಾಮಗಾರಿಗಳ ಮತ್ತು ಬಾಕಿ ಇರುವ ತೆರಿಗೆ ವಸೂಲಿ ಮಾಡುವ ಬಗ್ಗೆ ಡೋನ್ ಸರ್ವೇ ಮಾಡಲು ಅಂದಾಜು 5 ಕೋಟಿ ರೂ. ಕಾಯ್ದಿರಿಸಲಾಗಿದೆ.
ಸ್ವತ್ತು ಸಂರಕ್ಷಣೆಗೆ 2 ಕೋಟಿ: ಪಾಲಿಕೆ ಒಡೆತನದ ಪಾರ್ಕ್, ಖಾಲಿ ನಿವೇಶನಗಳನ್ನು ಗುರುತಿಸಿ ಸರ್ವೇ ಮಾಡಿ ಹದ್ದುಬಸ್ತು ಮಾಡಿ ನಾಮಫಕ ಅಳವಡಿಸಿ ಸಂರಕ್ಷಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ 2 ಕೋಟಿ ರೂ. ಕಾಯ್ದಿರಿಸಲಾಗಿದೆ.
ಪಾರ್ಕ್ ಅಭಿವೃದ್ಧಿ : ಆಯ್ದ ಉದ್ಯಾವನಗಳನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತದೆ. ಒಟ್ಟಾರೆ ಉದ್ಯಾನವನಗಳ ಅಭಿವೃದ್ಧಿಗೆ 336.50 ಲಕ್ಷ ರೂ ಕಾಯ್ದಿರಿಲಾಗಿದೆ.
ಜಲ ಸಾಹಸ ಕ್ರೀಡೆ, ದೋಣಿ ವಿಹಾರ ಕೇಂದ್ರ : ಬಾತಿ ಕೆರೆ ಅಭಿವೃದ್ಧಿ ಪಡಿಸಿ ಖಾಸಗಿ ಸಹಭಾಗಿತ್ವದೊಂದಿಗೆ ದೋಣಿ ವಿಹಾರ, ಜಲ ಸಾಹಸ ಕ್ರೀಡೆ ಇತ್ಯಾದಿಯನ್ನು ಕೈಗೊಳ್ಳಲು ಪ್ರಾಥಮಿಕವಾಗಿ 1 ಕೋಟಿ ರೂ. ಅನುದಾನ ಒದಗಿಸಲಾಗುತ್ತಿದೆ.
ಬಜೆಟ್ ಸಭೆಯಲ್ಲಿ ಉಪ ಮೇಯರ್ ಸೋಗಿ ಶಾಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಮನೆ ಗಣೇಶ್, ಉರುಬಾನ್, ಸುಧಾ ಇಟ್ಟಿಗುಡಿ ಮಂಜುನಾಥ್, ಆಶಾ ಉಮೇಶ್, ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ್ ಇತರರು ಇದ್ದರು.