ಮಕ್ಕಳಲ್ಲಿ‌ ಉತ್ತಮ‌ ಮೌಲ್ಯಗಳನ್ನು ಬಿತ್ತಬೇಕು‌

ಮಕ್ಕಳಲ್ಲಿ‌ ಉತ್ತಮ‌ ಮೌಲ್ಯಗಳನ್ನು ಬಿತ್ತಬೇಕು‌

ಬಸಾಪುರದ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಫೆ. 5-  ಮಕ್ಕಳಲ್ಲಿ‌  ಸೃಜನಶೀಲತೆ ಹಾಗೂ ಉತ್ತಮ‌ ಮೌಲ್ಯಗಳನ್ನು ಬಿತ್ತಬೇಕು‌ ಎಂದು‌ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.

ಬಸಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊನ್ನೆ ನಡೆದ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮಕ್ಕಳ ಚಟುವಟಿಕೆಗಳ ಬಗ್ಗೆ ಪೋಷಕರು ಪಟ್ಟಿ ಮಾಡಿ ಅವರು ಉತ್ತಮ ವಿದ್ಯಾಭ್ಯಾಸಗೈದು‌ ಸಾಧನೆ ತೋರುವಂತೆ ಮಾಡಬೇಕು‌ ಎಂದರು. 

ಬಸಾಪುರ‌ ಗ್ರಾಮಸ್ಥರೆಲ್ಲಾ ಕೈಜೋಡಿಸಿ ಶಾಲೆ ಹಾಗೂ ಇಲ್ಲಿನ ಪ್ರಾಥಮಿಕ ಆರೊಗ್ಯ ಕೇಂದ್ರದ ಅಭಿವೃದ್ದಿಗೆ ಸಹಕಾರ ನೀಡಬೇಕು. ಹಳೆಯ ವಿದ್ಯಾರ್ಥಿಗಳ ಸಂಘ ರಚಿಸುವ ಮೂಲಕ ಶಾಲೆಯ ಉನ್ನತಿಗೆ ಸಹಕಾರ ನೀಡಬೇಕು ಎಂದರು.

ಐದು ವರ್ಷಕ್ಕೊಮ್ಮೆ ಎಲ್ಲಾ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಶಾಲೆಯ ವಾರ್ಷಿ ಕೋತ್ಸವ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಶಾಲೆಯ ಋಣ ತೀರಿಸಬೇಕು ಹಾಗೂ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಬೇಕು ಎಂದರು.

ಮಕ್ಕಳಿಗೆ ಶಿಸ್ತು ಪಾಲನೆ ಮುಖ್ಯ.ಪ್ರತಿಯೊಬ್ಬರೂ ಓದಿಗೆ ಪ್ರಾಮುಖ್ಯತೆ ನೀಡಬೇಕು.ಗ್ರಂಥಾಲಯದಲ್ಲಿ ಉತ್ತಮ‌ ಪುಸ್ತಕಗಳಿರುತ್ತವೆ ಅದನ್ನು ಪಡೆದುಕೊಂಡು ಮನನ‌ ಮಾಡಬೇಕು.ಒಳ್ಳೆಯ ಸಮಾಜ ಕಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಇದೇ ವೇಳೆ ಗ್ರಾಮಸ್ಥರು ಸಂಸದರಿಗೆ ಆರತಿ ಬೆಳಗಿ ಸಾರೋಟಿನಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಕರೆತಂದಿದ್ದು ವಿಶೇಷವಾಗಿತ್ತು.

ಎಂ.ಎಸ್ ಕೊಟ್ರಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೇಯರ್ ಕೆ.ಚಮನ್ ಸಾಬ್‌  ಮಾತನಾಡಿದರು. 

ಈ ವೇಳೆ ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಹೆಚ್. ಗುರುಸಿದ್ದಯ್ಯ, ಪಾಲಿಕೆ ಸದಸ್ಯರಾದ ಶಿವಲೀಲಾ ಕೊಟ್ರಯ್ಯ, ಸಂಸದರ ಆಪ್ತ ಕಾರ್ಯದರ್ಶಿ ಹರೀಶ್ ಬಸಾಪುರ, ಮಾಜಿ ಉಪಮೇಯರ್ ಗೌಡ್ರ  ರಾಜಶೇಖರಪ್ಪ, ಡಿಡಿಪಿಐ ಜಿ. ಕೊಟ್ರೇಶ್, ಬಿಇಒ ಶೇರ್ ಅಲಿ, ಹಿರಿಯ ಪತ್ರ ಕರ್ತ ಬಾ.ಮ. ಬಸವರಾಜಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ಫಸೀಹ್ ಉದ್ದೀನ್ ಶಾಕೀರ್, ಮಂಜುಳಾ ಸುರೇಂದ್ರಪ್ಪ ಹಾಗೂ ಗ್ರಾಮಸ್ಥರಾದ ಸುರೇಂದ್ರಪ್ಪ, ಮಹೇಶ್ವರಪ್ಪ, ಸಿದ್ಧನಗೌಡ್ರು, ಕೆಂಪನಹಳ್ಳಿ ಲಿಂಗೇಶ್ವರಪ್ಪ, ನಾಗೇಂದ್ರಚಾರ್, ಮರುಳಪ್ಪ, ಕೊಟ್ರಯ್ಯ, ಲಿಂಗರಾಜ್, ದೇವೇಂದ್ರಪ್ಪ, ಪ್ರಕಾಶ್, ಶಿವಕುಮಾರ್, ತಿಪ್ಪೇಸ್ವಾಮಿ, ತಿಪ್ಪೇಶ್, ಮೌನೇಶ್ವರಚಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!