ಅರಸೀಕೆರೆಯಲ್ಲಿನ ಸರ್ವಧರ್ಮ ಕಾರ್ಯಕ್ರಮದಲ್ಲಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ
ಹರಪನಹಳ್ಳಿ, ಫೆ.4- ಹಂಪಿಯೊಳಗೆ ಹಂಪಿ ನಿರ್ಮಾಣ ಮಾಡಿದ್ದು ದೊಡ್ಡದಲ್ಲ. ಅರಸಿಕೇರಿಯಲ್ಲಿ ಕೋಲಶಾಂತೇಶ್ವರ ಸ್ವಾಮಿಜೀಯವರು ಜೋಳಿಗೆಯಿಂದ ಮಠದಲ್ಲಿ ಹಂಪಿ ನಿರ್ಮಾಣ ಮಾಡಿ ಕೂಲ್ ಶಾಂತೇಶ್ವರರಾಗಿದ್ದಾರೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಭಾನುವಾರ ನಡೆದ ಎರಡನೇ ದಿನದ ಸರ್ವಧರ್ಮ ಸಮ್ಮೇಳನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳು ಮಾತನಾಡಿದರು.
ನಿಸರ್ಗ ನಮಗೆ ಎಲ್ಲಾ ಪುಕ್ಕಟೆ ಕೊಟ್ಟಿದೆ. ಅದರೆ ನಿಸರ್ಗ ಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬುದನ್ನು ಚಿಂತಿಸಬೇಕು ಎಂದರು.
ಮನುಷ್ಯನು ಯಾವ ರೀತಿ ಜೀವಿಸಬೇಕು ಎನ್ನುವುದನ್ನು ಶರಣರು ತಮ್ಮ ಅಮೂಲ್ಯ ಪ್ರವಚನಗಳ ಮೂಲಕ ತಿಳಿಸಿದ್ದಾರೆ. ಅದನ್ನು ಅರಿತು ಮನುಷ್ಯ ಬದುಕನ್ನು ನಡೆಸಬೇಕು. ದೇವರು ಜೀವನವನ್ನು ಎಲ್ಲರಿಗೂ ಒಂದೇ ತೆರನಾಗಿ ನೀಡಿದ್ದಾನೆ, ಆದರೆ ಅವರವರ ಭಾವಕ್ಕೆ ತಕ್ಕಂತೆ ಜೀವಿಸುತ್ತಾರೆ, ಜೀವನವನ್ನು ಇದ್ದಂತೆ ಅರಿಯಬೇಕು. ಆಗ ಮಾತ್ರ ಬದುಕು ಸಾರ್ಥಕವಾಗುತ್ತದೆ, ಇಲ್ಲವಾದರೆ ಭ್ರಾಂತಿಯಾಗುತ್ತದೆ ಎಂದರು.
ನಾಮ, ರೂಪ, ಸ್ಥಳಗಳು ಬೇರೆ ತೆರನಾಗಿ ಇರಬಹುದು. ಆದರೆ ಸಾವಿನ ನಂತರ ಎಲ್ಲರೂ ತೆರಳುವುದು ಮಣ್ಣಿಗೇನೆ. 12 ನೇ ಶತಮಾನದ ಶರಣರು ಜೀವನವನ್ನು ಇರುವಂತೆ ಜೀವಿಸಿದರು, ಕೀರ್ತಿ ಸಂಪತ್ತುಗಳು ಶಾಶ್ವತವಲ್ಲ, ಜಗತ್ತನ್ನು ಗೆದ್ದಂತ ಅಲೆಕ್ಸಾಂಡರ್ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾನೆ ಎಂದರು.
ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಚರಿತ್ರೆಗಳು ನಶಿಸಿ ಹೋಗುವ ಮುನ್ನ ಇತಿಹಾಸದ ಗತವೈಭವ ಮರಳಿ ಪಡೆದು ಚರಿತ್ರೆ ಸೃಷ್ಠಿಸುವ ಕೆಲಸವನ್ನು ಕೋಲಶಾಂತೇಶ್ವರ ಮಠವು ಮಾಡುತ್ತದೆ. ಇಂದು ಯಾವುದೇ ಕ್ಷೇತ್ರಗಳು ಅಭಿವೃದ್ಧಿ ಹೊಂದಲು ಶಿಕ್ಷಣ ಅತ್ಯಗತ್ಯವಾಗಿದೆ, ಅದನ್ನು ಪ್ರತಿಯೊಬ್ಬರಿಗೆ ಶ್ರೀ ಮಠವು ನೀಡುತ್ತಾ ಬಂದಿದೆ, ಇಂತಹ ಸ್ವಾಮಿಗಳನ್ನು ಪಡೆದ ನೀವೇ ಧನ್ಯರು ಎಂದು ಹೇಳಿದರು.
ಅಂಬಿಗರ ಚೌಡಯ್ಯನ ವಚನದಂತೆ ಗಾಳಿ ಬಿಟ್ಟಾಗ ತೂರಿಕೊಳ್ಳಿ ಅಂದರೆ ಜೀವನದಲ್ಲಿ ಬಂದಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು, ಇಂದಿನ ಮಕ್ಕಳಿಗೆ ಸಾಕಷ್ಟು ವಿದ್ಯೆಯನ್ನು ಪೋಷಕರು ನೀಡುತ್ತಿದ್ದಾರೆ. ಆದರೆ, ಅವರಿಗೆ ಉತ್ತಮ ಸಂಸ್ಕಾರ ಜೀವನದಿಂದ ಹೊರಗಿಟ್ಟಿದ್ದಾರೆ ಎಂದರು.
ಕಲ್ಲಿನ ದೋಣಿಯಲ್ಲಿ ಸಾಗಿದರೆ ಹೇಗೆ ದಡವನ್ನು ಸೇರಲು ಅಸಾಧ್ಯವೋ ಅದರಂತೆ ನಮ್ಮ ಬದುಕಿನಲ್ಲಿ ಬರುವ ಕಷ್ಟಗಳನ್ನು ದಾಟಿ ಸೇರಿದಾಗಲೇ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ, ನಾಡಿನಲ್ಲಿ ಲಿಂಗಾಯತ ಮಠಗಳು ಮಾಡದೇ ಇರುವ ಕಾರ್ಯಗಳು ಯಾವು ಬಾಕಿ ಉಳಿದಿಲ್ಲ ಎಂದರು.
ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಅಧ್ಯಾತ್ಮಿಕ ಸಭೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕವಾಗಿ ತೇಜಸ್ಸು ಹೆಚ್ಚಾಗುತ್ತದೆ, ವಿರಕ್ತ ಮಠಾಧೀಶರಲ್ಲಿ ನಿರೀಕ್ಷೆ ಇರುವುದಿಲ್ಲ. ಅವರುಗಳು ಅಲ್ಲಮ ಪ್ರಭುಗಳ ಪ್ರವಚನಗಳಿಂದ ಪ್ರಭಾವಿತರಾಗಿದ್ದಾರೆ, ದೇಹವೇ ಮುಖ್ಯವಲ್ಲ ಎಂಬುದನ್ನು ಅರಿತವರು ವೈಭೋಗದ ಜೀವನ ನಡೆಸಲು ಇಚ್ಛಿಸುವುದಿಲ್ಲ ಎಂದರು.
ಗದಗ ತೋಂಟದ ಸಿದ್ದರಾಮ ಸ್ವಾಮಿಗಳು, ಚಿತ್ರದುರ್ಗ ಛಲವಾದಿ ಗುರುಪೀಠದ ನಾಗಿದೇವ ಸ್ವಾಮಿ ಕೂಲಹಳ್ಳಿ ಚಿನ್ಮಯಾನಂದ ಸ್ವಾಮಿಗಳು, ಹಾವೇರಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಕಡೇನಂದಿಹಳ್ಳಿ ರೇವಣಸಿದ್ದೆಶ್ವರ ಸ್ವಾಮಿಗಳು. ಮಾಜಿ ಸಂಸದ ವೈ. ದೇವೇಂದ್ರಪ್ಪ,ಅಬಕಾರಿ ಕಮೀಷನರ್ ವೈ.ಡಿ.ಮಂಜುನಾಥ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ, ಅಕ್ಷರ ಸೀಡ್ಸ್ ಮಾಲೀಕ ಎನ್. ಕೊಟ್ರೇಶ್ ಸೇರಿದಂತೆ, ಇತರರು ಇದ್ದರು.