ಜಗಳೂರು, ಫೆ.4- ಇದೇ ದಿನಾಂಕ 8 ಮತ್ತು 9 ರಂದು ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ನಡೆಯಲಿರುವ ವೈಚಾರಿಕ ಜಾತ್ರೆಗೆ ಪಕ್ಷಾತೀತ, ಜಾತ್ಯತೀತವಾಗಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ವಾಲ್ಮೀಕಿ ಜಾತ್ರೆಯ ಅಧ್ಯಕ್ಷ ಹಾಗೂ ಶಾಸಕ ಬಿ.ದೇವೇಂದ್ರಪ್ಪ ಮನವಿ ಮಾಡಿದರು.
ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ವಾಲ್ಮೀಕಿ ಜಾತ್ರೆಯ ಪೂರ್ವಭಾವಿಯಾಗಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ವಾಲ್ಮೀಕಿ ಪೀಠ ಸ್ಥಾಪನೆಗೊಂಡು 25 ವರ್ಷ ಪೂರೈಸಿದ್ದು, ಪುಣ್ಯಾನಂದಪುರಿ ಸ್ವಾಮೀಜಿ ಲಿಂಗೈಕ್ಯ ವಾಗಿ 18 ವರ್ಷ, ಪ್ರಸನ್ನಾನಂದಪುರಿ ಸ್ವಾಮೀಜಿ ಪಟ್ಟಾಭಿಷೇಕಗೊಂಡು 17 ವರ್ಷ ಪೂರೈಸಿದ ಮೂರು ಮುಖ್ಯ ಅಂಶಗಳ ಸ್ಮರಣೆಗಾಗಿ ಪ್ರತಿವರ್ಷ ಜರುಗುವ ವಾಲ್ಮೀಕಿ ಜಾತ್ರೆಗೆ ಸಮುದಾಯದ ಹಿರಿಯರು, ಮಠದ ಧರ್ಮದರ್ಶಿ ಗಳು, ನನ್ನನ್ನು ಸರ್ವಾನುಮತದಿಂದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದಕ್ಕೆ ಅಭಿನಂದನೆಗಳು ಎಂದರು.
ಜಾತ್ರೆಯಲ್ಲಿ ರಿಮೋಟ್ ನಿಯಂತ್ರಿತ ರಥೋತ್ಸವ, ಗೋಷ್ಠಿಗಳು, ಸಮುದಾಯದ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ನಡೆಸಲಾಗುತ್ತದೆ. ವಾಲ್ಮೀಕಿ ಸಮುದಾಯದ ನಿವೃತ್ತ ಮುಖ್ಯ ಪೊಲೀಸ್ ಅಧೀಕ್ಷಕ ಅರ್ತಿಕೋಟೆ ವೀರೇಂದ್ರಸಿಂಹ ಅವರಿಗೆ ವಾಲ್ಮೀಕಿ ರತ್ನ, ಮಾಜಿ ಸಂಸದ ಚಲನಚಿತ್ರ ನಾಯಕ ನಟ ಶಶಿಕುಮಾರ್ ಅವರಿಗೆ ಮದಕರಿ ನಾಯಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಈಗಾಗಲೇ ಕಳೆದ ವಾರದಿಂದ ರಾಜ್ಯಾದಂತ ಸಂಚರಿಸಿ ಹಲವು ಮಠಾಧೀಶರನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ಪಕ್ಷಾತೀತವಾಗಿ ಶಾಸಕರು, ಸಂಸದರುಗಳನ್ನು ಆಹ್ವಾನಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನಸಂಖ್ಯೆ ಭಾಗವಹಿಸಲಿದ್ದಾರೆ. ಆಗಮಿಸುವ ಭಕ್ತಸಮೂಹಕ್ಕೆ ಸಾರಿಗೆ, ಆರೋಗ್ಯ, ಮೂಲಸೌಕರ್ಯ ಕಲ್ಪಿಸಲು ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದರು.
ಸಾಂಸ್ಕೃತಿಕ, ವೈಚಾರಿಕ ಹಬ್ಬವಾಗಿ ಸಂಭ್ರಮದೊಂದಿಗೆ ಜನಜಾಗೃತಿ ಮೂಲಕ ಸಂವಿಧಾನಬದ್ದ ಹಕ್ಕುಗಳನ್ನು ಪಡೆಯಲು ಸಂಘಟಿತ ಹೋರಾಟ ರೂಪಿಸಲಾಗುವುದು. ವಾಲ್ಮೀಕಿ ಸಮುದಾಯ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುಖ್ಯವಾಹಿನಿಗೆ ಬರಬೇಕಿದೆ. ಮುಂಬರುವ ದಿನಗಳಲ್ಲಿ ತರಳಬಾಳು ಹುಣ್ಣಿಮೆ ಮಾದರಿಯಲ್ಲಿ ವಾಲ್ಮೀಕಿ ಜಾತ್ರೆಯನ್ನು ರಾಜ್ಯದ ವಿವಿಧೆಡೆ ಆಯೋಜಿಸಲಾಗುವುದು ಎಂದು ತಿಳಿಸಿದರು.
ವಾಲ್ಮೀಕಿ ಜಾತ್ರಾ ಮಹೋತ್ಸವದ ಸಂಚಾಲಕ ಶ್ರೀನಿವಾಸ್ ದಾಸಕರಿಯಪ್ಪ ಮಾತನಾಡಿ, ವಾಲ್ಮೀಕಿ ಜಾತ್ರೆ ಜನಜಾಗೃತಿಗಾಗಿ ನಡೆಸಲಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಬಡಯ್ಯ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ್ ಮರೇನಹಳ್ಳಿ, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಲಿಂಗಣ್ಣನಹಳ್ಳಿ ಕೃಷ್ಣಮೂರ್ತಿ, ಸಣ್ಣಸೂರಜ್ಜ, ಸಾಹಿತಿ ಎನ್.ಟಿ. ಎರ್ರಿಸ್ವಾಮಿ, ಪುರುಷೋತ್ತಮನಾಯ್ಕ, ಬಿ.ಮಹೇಶ್ವರಪ್ಪ, ಬಿ.ಲೋಕೇಶ್, ನಾಗರಾಜ್ ಇದ್ದರು.