ಅಧಿಕಾರಗಳ ಭರವಸೆ
ತಹಶೀಲ್ದಾರ್ ತಕ್ಷಣ ಸಾರಿಗೆ ಅಧಿಕಾರಿಗೆ ಕರೆ ಮಾಡಿ ಕಟ್ಟಿಗೆಹಳ್ಳಿ ಗ್ರಾಮಕ್ಕೆ ಬಸ್ ಅಗತ್ಯವಾಗಿ ಓಡಿಸಲೇ ಬೇಕು. ಸಮಸ್ಯೆ ಗಂಭೀರವಾಗಿದೆ ಎಂದು ಸೂಚಿಸಿದರು. ಡಿಟಿಓ ಫಕೃದ್ಧಿನ್ ಸಾಬ್ ಫೆ.7 ರಂದು ಗ್ರಾಮಕ್ಕೆ ಬಸ್ ಬಿಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಜಗಳೂರು, ಜ. 31- ತಾಲ್ಲೂಕಿನ ಕಟ್ಟಿಗೆಹಳ್ಳಿ ಗ್ರಾಮಕ್ಕೆ ಕೆಎಸ್ಆರ್ಟಿಸಿ ಬಸ್ ಬಿಡುವಂತೆ ಆಗ್ರಹಿಸಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸೈಯದ್ ಕಲೀಂಉಲ್ಲಾರಿಗೆ ಮನವಿ ಸಲ್ಲಿಸಿದರು.
ಡಿಎಸ್ಎಸ್ ತಾಲ್ಲೂಕು ಸಂಚಾಲಕ ಮಲೆ ಮಾಚಿಕೆರೆ ಸತೀಶ್ ಮಾತನಾಡಿ, ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಕುಗ್ರಾಮವಾದ ಕಟ್ಟಿಗೆಹಳ್ಳಿಗೆ ಇದುವರೆಗೂ ಕೆಎಸ್ಆರ್ಟಿಸಿ ಬಸ್ ಸೌಲಭ್ಯ ಕಲ್ಪಿಸಿಲ್ಲ. ವಿದ್ಯಾರ್ಥಿಗಳು ದಿನಕ್ಕೆ ಎಂಟು ಕಿ.ಮೀ ನಡೆದೇ ಶಾಲೆಗೆ ಹೋಗಬೇಕು.
ಜಗಳೂರು ಪಟ್ಟಣಕ್ಕೆ ಬರುವ ಕಾಲೇಜು ವಿದ್ಯಾರ್ಥಿಗಳಿಗೂ ಬಸ್ ವ್ಯವಸ್ಥೆ ಕಲ್ಪಿಸದೇ ಕೆಎಸ್ಆರ್ಟಿಸಿ ಅಧಿಕಾರಿಗಳು ಇಲ್ಲ ಸಲ್ಲದ ಸಬೂಬು ಹೇಳುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.
ಕರ್ನಾಟಕ ನವ ನಿರ್ಮಾಣ ವೇದಿಕೆಯ ಮಹಾಲಿಂಗಪ್ಪ ಮಾತನಾಡಿ, ಕೆಎಸ್ಆರ್ಟಿಸಿ ಬಸ್ ಬಿಡುವಂತೆ ಆಗ್ರಹಿಸಿ ಕಳೆದ 15 ದಿನಗಳಿಂದ ಅಧಿಕಾರಿಗಳನ್ನು ಒತ್ತಾಯಿಸುತ್ತಿರುವ ಗ್ರಾಮಸ್ಥರಿಗೆ ಸ್ಪಂದಿಸುತ್ತಿಲ್ಲ. ಡಿಪೋ ಬೇಡಿಕೆಗಾಗಿ ಮತ್ತು ಗ್ರಾಮೀಣ ಬಸ್ ಸೌಲಭ್ಯಕ್ಕಾಗಿ ದಾವಣಗೆರೆವರೆಗೂ ಪಾದಯಾತ್ರೆ ಮಾಡಿದ್ದೇವೆ. ಆದರೂ ಯಾವೊಬ್ಬ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ಆರ್.ಓಬಳೇಶ್, ಯು.ಸಿ.ರವಿ, ಆದಮ್, ಮಂಜುನಾಥ್ ಗುರೂಜಿ, ಗ್ರಾಕೋಸ್ ಅಧ್ಯಕ್ಷೆ ಸುಧಾ ಪಲ್ಲಾಗಟ್ಟೆ, ಬಿ.ಎಂ. ಅನಂತರಾಜ್, ಸತ್ಯಮೂರ್ತಿ, ಗ್ರಾಪಂ ಸದಸ್ಯರಾದ ಭಾರತಿ ಮಂಜುನಾಥ್, ಶರಣಯ್ಯ, ಸಿದ್ದಲಿಂಗಯ್ಯ, ಭೋವಿ ತಿಪ್ಪೇಸ್ವಾಮಿ ಸೇರಿದಂತೆ, ನೂರಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದರು.