ಸಂವಿಧಾನ-ಶರಣರ ವಿಚಾರದಲ್ಲಿ ಸಾಮ್ಯತೆ

ಸಂವಿಧಾನ-ಶರಣರ ವಿಚಾರದಲ್ಲಿ ಸಾಮ್ಯತೆ

‘ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ’ದ ಸಮಾರೋಪದಲ್ಲಿ ಸಿಎಂ

ಸುತ್ತೂರು, ಜ.31- ಸಂವಿಧಾನ ಹಾಗೂ ಬಸವಾದಿ ಶರಣರ ವಿಚಾರಗಳಲ್ಲಿ ಸಾಮ್ಯತೆ ಇದ್ದು, ನಾವು ಮತ್ತು ಸರ್ಕಾರಗಳು ಅವುಗಳನ್ನು ಪಾಲಿಸಬೇಕು  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಸುತ್ತೂರು ಮಠದಿಂದ ಶುಕ್ರವಾರ ಆಯೋಜಿಸಿದ್ದ ‘ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೂಢನಂಬಿಕೆ ಹಾಗೂ ಗೊಡ್ಡು ಸಂಪ್ರದಾಯಗಳನ್ನು ಬಿಡಬೇಕು. ಆಗ ಮಾತ್ರ ಪರಿವರ್ತನೆ ಸಾಧ್ಯ  ಎಂದು ತಿಳಿಸಿದರು.

ಬಸವಣ್ಣನವರ ಆಶಯಗಳೆಲ್ಲಾ ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ. ಇದನ್ನು ಇಡೀ ಸಮಾಜ ಅರಿಯಬೇಕು. ಜಾತ್ಯತೀತ ಸಮಾಜ ನಿರ್ಮಾಣ ಸಂವಿಧಾನದ ಮೂಲ ಉದ್ದೇಶ. ಬಸವಾದಿ ಶರಣರ ಆಶಯವೂ ಇದೇ ಆಗಿದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಬಸವಣ್ಣನವರ ಆಶಯದಂತೆ ಜಾತಿ, ಧರ್ಮದ ಹೆಸರಿನ ಮನುಷ್ಯ ತಾರತಮ್ಯ ಹಾಗೂ ಮೌಢ್ಯಗಳನ್ನು ತೊರೆಯಬೇಕು ಎಂದು ಕರೆ ನೀಡಿದರು.

ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆಯೇ ಹೊರತು, ಆರ್ಥಿಕ ಹಾಗೂ ಸಾಮಾಜಿಕವಾಗಿ ಸ್ವಾತಂತ್ರ್ಯ ದೊರೆತಿಲ್ಲ. ಇದು ಸಿಗದ ಹೊರತು ಸ್ವಾತಂತ್ರ್ಯದ ಆಶಯ ಪೂರ್ಣಗೊಳ್ಳುವುದಿಲ್ಲ ಎಂಬ ಮಾತನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಜಾರಿ ಸಭೆಯಲ್ಲೇ ಹೇಳಿದ್ದರು. ಅವರ ಮಾತು ಇಂದಿಗೂ ಸತ್ಯ. ಈಗಲೂ ನಾವು ಜಾತಿ ಕೇಳುವುದನ್ನು ನಿಲ್ಲಿಸಿಲ್ಲ, ಜಾತಿ-ಧರ್ಮದ ಅನಿಷ್ಟ ತಾರತಮ್ಯವನ್ನು ಇವತ್ತಿಗೂ ಕಾಣುತ್ತಿದ್ದೇವೆ ಎಂದು ವಿಷಾದ ವ್ಯಕ್ತ‍ಪಡಿಸಿದರು.

ನಾನು ವೈಯಕ್ತಿಕವಾಗಿ ಬಸವಣ್ಣನವರ ಅಪ್ಪಟ ಹಿಂಬಾಲಕ. ಅವರ ವಿಚಾರಗಳಿಂದ ಪ್ರಭಾವಿತನಾಗಿದ್ದೇನೆ. ಅದಕ್ಕಾಗಿಯೇ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಹಾಕುವುದನ್ನು ಕಡ್ಡಾಯಗೊಳಿಸಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಕನಕಗಿರಿ ಜೈನ ಮಠದ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ, ದೇಶದಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಮಹತ್ವವನ್ನು ಕೊಡಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣವಾಗಬೇಕು. ಹಿಂದೆ, ಜಾತ್ರೆಗೆ ಬಂದರೆ ಪಾತ್ರೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಕಾಲವಿತ್ತು. ಈಗ ಸೇವೆ ಪ್ರೀತಿಯ ಭಾವನೆಗಳನ್ನು ಬೆಳೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

error: Content is protected !!