ಮಲೇಬೆನ್ನೂರು, ಜ.31- ಸಮಾಜವನ್ನು ಸುಸ್ಥಿತಿಯಲ್ಲಿಡಬೇಕಾದರೆ ಶಾಲೆ, ಉತ್ತಮ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಬಹಳ ಮುಖ್ಯ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಹೇಳಿದರು.
ಅವರು, ಕುಂಬಳೂರು ಗ್ರಾಮದ ಹೊರವಲಯದಲ್ಲಿರುವ ಚಿಟ್ಟಕ್ಕಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಚಿಟ್ಟಕ್ಕಿ ಸಾಂಸ್ಕೃತಿಕ ಉತ್ಸವ- 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಆದ ವಚನ ಕ್ರಾಂತಿ ಜಗತ್ತಿನ ಅತಿದೊಡ್ಡ ಜ್ಞಾನ ಕ್ರಾಂತಿಯಾಗಿದ್ದು, ಅಂದಿನಿಂದ ಇಂದಿನವರೆಗೂ ಶಿಕ್ಷಣ, ವಿಜ್ಞಾನದಲ್ಲಿ ಭಾರತ ಜಗತ್ತಿಗೆ ಕೊಟ್ಟ ಕೊಡುಗೆ ಬಹಳ ದೊಡ್ಡದು ಎಂದು ಹೇಳಲು ಭಾರತೀಯರಾದ ನಾವು ಹೆಮ್ಮೆ ಪಡುತ್ತೇವೆ.
ಜ್ಞಾನವನ್ನು ಹುಡುಕಿಕೊಂಡು ಹೋಗುವ ನಾವು ಹೊಸತನವನ್ನು ಕಲಿತು, ಅದನ್ನು ಜಗತ್ತಿಗೆ ಪರಿಚಯಸುತ್ತಾ ಬಂದಿದ್ದೇವೆ. ಇಂತಹ ವಾತಾವರ ಣದಲ್ಲಿ ಹುಟ್ಟಿದ ಚಿಟ್ಟಕ್ಕಿ ಶಾಲೆ 2 ವರ್ಷಗಳಲ್ಲೇ ಗಮನ ಸೆಳೆಯುವಂತಹ ಸಾಧನೆ ಮಾಡಿದ್ದು, ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದು ಗುರುರಾಜ ಕರ್ಜಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪೋಷಕರು ಮಕ್ಕಳ ಅಂಕಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮಕ್ಕಳ ನಡೆ-ನುಡಿಯಲ್ಲಿ ಬದಲಾವಣೆಯನ್ನು ಗಮನಿಸಬೇಕು. ಶಿಕ್ಷಕರು ವಿದ್ಯಾರ್ಥಿ ಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಮೌಲ್ಯಗಳನ್ನು ಕಲಿಸಬೇಕು. ಮಕ್ಕಳನ್ನು ಬರೀ ಕಲಿಕೆಗೆ ಸಿಮೀತಗೊಳಿಸದೇ ಆಟ, ಮನರಂಜನೆ, ಸಂಗೀತ, ಪ್ರವಾಸಗಳ ಜೊತೆಗೆ ಪ್ರೀತಿ, ಗೌರವವನ್ನೂ ಪರಿಚಯಿಸ ಬೇಕೆಂದು ಕರ್ಜಗಿ ಪೋಷಕರಿಗೆ ಹೇಳಿದರು.
ಬೆಂಗಳೂರಿನ ಸೃಜನಾಶೀಲ ತರಬೇತಿ ಅಕಾಡೆಮಿಯ ವೈ.ಜಿ.ಪಾಟೀಲ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದರು.
ಚಿಟ್ಟಕ್ಕಿ ಶಾಲೆಯ ಆಡಳಿತಾಧಿಕಾರಿ ಎಸ್.ಕೆ.ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೈದರಾಬಾದ್ ಉದ್ಯಮಿ ಸುಧೀರ್ ರಮಣಿ, ಎಸ್‌ಡಿಎಲ್ ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ಸುಧಾ ರಮೇಶ್, ಕಾರ್ಯದರ್ಶಿ ಮಹಾಂತೇಶ್ ಸ್ವಾಮಿ, ಶಾಲೆ ಪ್ರಿನ್ಸಿಪಾಲ್ ಅಖಿಲೇಶ್ವರಿ ವೇದಿಕೆಯಲ್ಲಿದ್ದರು.
ಎಸ್‌ಡಿಎಲ್ ವಿದ್ಯಾಸಂಸ್ಥೆ ಅಧ್ಯಕ್ಷ ಹಾಗೂ ಉದ್ಯಮಿ ಚಿಟ್ಟಕ್ಕಿ ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಅಭಿಷೇಕ್ ಸ್ವಾಗತಿಸಿ ದರು. ಶಿಕ್ಷಕ ವೀರಭದ್ರಾಚಾರ್ ವಂದಿಸಿದರು.