`ದೇಶಕ್ಕಾಗಿ ತ್ಯಾಗ ಮಾಡಿದ ಹುತಾತ್ಮರ ನೆನಪಿನ ದಿನಾಚರಣೆ’ಯಲ್ಲಿ ಸಿಎಂ ಸಲಹೆಗಾರ ಪಾಟೀಲ್
ದಾವಣಗೆರೆ, ಜ. 30- ಕೋಮುವಾದ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಗಾಂಧೀಜಿ ಸಿದ್ಧಾಂತದಂತೆ ದಾರಿ ಕಂಡುಕೊಳ್ಳಬೇಕಿದೆ. ಗಾಂಧೀ ಮಾರ್ಗ ಬಿಟ್ಟರೆ ನಮಗೆ ಬೇರೆ ದಾರಿ ಇಲ್ಲ ಎಂದು ಮುಖ್ಯಮಂತ್ರಿಗಳ ಸಲಹೆಗಾರ, ಆಳಂದ ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ರಾಜ್ಯ ರೈತ ಸಂಘಗಳ ಒಕ್ಕೂಟ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ `ದೇಶಕ್ಕಾಗಿ ತ್ಯಾಗ ಮಾಡಿದ ಹುತಾತ್ಮರ ನೆನಪಿನ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದುಡಿಯುವ ಕೈಗಳೇ ದೇಶದ ಸಂಪತ್ತು ಎಂದು ಗಾಂಧೀಜಿ ಹೇಳಿದ್ದರು. ಆದರೆ ಆ ಕೈಗಳಿಗೆ ಇಂದು ಕೆಲಸ ಇಲ್ಲವಾಗಿದೆ. ರಾಮರಾಜ್ಯ, ಗ್ರಾಮ ಸ್ವರಾಜ್ಯದ ಕಲ್ಪನೆ ನನಸಾಗುತ್ತಿಲ್ಲ. ಗಾಂಧೀಜಿ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಚಿಂತಿಸಿದ್ದರು. ಆದರೆ ಇಂದು ಮತ್ತೆ ಅಧಿಕಾರ ಕೇಂದ್ರೀಕರಣದತ್ತ ಸಾಗುತ್ತಿದೆ. ಏಕ ವ್ಯಕ್ತಿ ಉಪಾಸನೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ತಂದು ಕೊಟ್ಟವರನ್ನು ಮರೆಯುತ್ತಿರುವುದಷ್ಟೇ ಅಲ್ಲ, ಅವರನ್ನು ಅವಹೇಳನ ಮಾಡಲಾಗುತ್ತಿದೆ. ಗಾಂಧೀಜಿಯನ್ನು ಖಳನಾಯಕನನ್ನಾಗಿ ಬಿಂಬಿಸಿದರೆ, ಗಾಂಧೀಜಿ ಕೊಂದ ಗೂಡ್ಸೆ ಹೆಸರಲ್ಲಿ ದೇವಸ್ಥಾನಗಳು ನಿರ್ಮಾಣವಾಗುತ್ತಿವೆ. ರಾಮನ ಭಕ್ತರಾಗಿದ್ದ ಗಾಂಧಿಯನ್ನು ರಾಮ ಭಕ್ತರೇ ಅವಹೇಳನ ಮಾಡುತ್ತಿರುವುದು ವಿಷಾದನೀಯ. ಇದೇ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ ಶಾಂತಿ ಸ್ಥಾಪನೆ ಅಸಾಧ್ಯ ಎಂದು ಎಚ್ಚರಿಸಿದರು.
ಸಂವಿಧಾನವನ್ನೂ ಬದಲಿಸುವ ಗಂಭೀರ ಚಿಂತನೆಗಳು ನಡೆಯುತ್ತಿವೆ. ಬಂಡವಾಳ ಶಾಹಿ ವ್ಯವಸ್ಥೆ ಮತ್ತೆ ಬಲಿಷ್ಠವಾಗುತ್ತಿದೆ. ಕೃಷಿ ರೈತರ ಕೈ ತಪ್ಪಿ ಮತ್ತೆ ಕಾರ್ಪೊರೇಟ್ ಕಡೆ ಹೋಗುತ್ತಿದೆ. ರೈತರು ಹಾಗೂ ಕೃಷಿ ಭೂಮಿಯೊಂದಿಗೆ ಇದ್ದ ಭಾವನಾತ್ಮಕ ಸಂಬಂಧ ಮರೆಯಾಗುತ್ತಿದೆ ಎಂದರು.
ಗಾಂಧೀಜಿ ಭಾರತ ನಿರ್ಮಾಣ ಇಂದಿನ ಅನಿವಾರ್ಯತೆ ಯಾಗಿದೆ. ಈ ಹಿನ್ನೆಲೆಯಲ್ಲಿಯೇ ಸರ್ಕಾರ ಇಡೀ ವರ್ಷ ಗಾಂಧೀ ಭಾರತ ಆಚರಿಸುತ್ತಿದೆ ಎಂದು ಹೇಳಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಹುತಾತ್ಮರೆಲ್ಲರೂ ರೈತ ಕುಟುಂಬದಿಂದ ಬಂದವರೇ. ಹುತಾತ್ಮರಾದಾಗ ಸರ್ಕಾರದಿಂದ ಶವ ಸಂಸ್ಕಾರದ ವೇಳೆ ಗೌರವ ಸಲ್ಲಿಸುವುದು ಬಿಟ್ಟರೆ, ಯಾವೊಬ್ಬ ರಾಜಕಾರಣಿಯು ಅವರ ಮನೆಗಳಿಗೆ ಭೇಟಿ ನೀಡುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಹಕ್ಕೊತ್ತಾಯ ಮಂಡಿಸುವ ಮೂಲಕ ಸರ್ಕಾರಕ್ಕೆ, ರಾಜಕಾರಣಿಗಳಿಗೆ ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ ಮುಂದಿನ ಪೀಳಿಗೆಗೆ ಹುತಾತ್ಮರ ಇತಿಹಾಸ ತಿಳಿಸಬೇಕಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಹೆಚ್ಚು ವರ್ಷ ಮೀಸಲಾತಿ ಇರಬಾರದು ಎಂದು ಹೇಳಲಾಗಿದೆ. ಆದರೆ ಮೂವತ್ತು ವರ್ಷಗಳಾದರೂ ಮೀಸಲಾತಿ ಮುಂದುವರೆದಿದೆ. ಅದೇ ವರ್ಗದ ತಳ ವರ್ಗದ, ಸಾಮಾಜಿಕವಾಗಿ ಹಿಂದುಳಿದವರು ಮೀಸಲಾತಿ ವಂಚಿತರಾಗುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಿಸುವ ಸರ್ಕಾರ, ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ. ಸ್ವಾಮಿನಾಥನ್ ವರದಿ ಜಾರಿ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು ಸೇರಿದಂತೆ ಅನೇಕ ಬೇಡಿಕೆಗಳ ಹೋರಾಟಕ್ಕೆ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದರು.
ಪ್ರತಿ ವರ್ಷ ಜ.30ರಂದು ಹುತಾತ್ಮರ ದಿನ ಆಚರಿಸಬೇಕು ಹುತಾತ್ಮರ ಕುಟುಂಬದವರ ಬೇಡಿಕೆ ಈಡೇರಿಸಬೇಕು. ತಲಾ 2 ಎಕರೆ ಜಮೀನು ಹಂಚಬೇಕು. ಬರುವ ಡಿಸೆಂಬರ್ವೊಳಗೆ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಇದೇ ಸಂದರ್ಭದಲ್ಲಿ ಹಕ್ಕೊತ್ತಾಯ ಮಂಡಿಸಲಾಯಿತು.
ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೈತ ಸಂಘದ ಜಿಲ್ಲಾಧ್ಯಕ್ಷ ರಾಂಪುರದ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಎಸ್ಪಿ ಉಮಾ ಪ್ರಶಾಂತ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡಿದಾಳ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ. ಯಲ್ಲಪ್ಪ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್, ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ. ಕರಿಬಸಪ್ಪ ಗೌಡ್ರು, ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪೂಜಾರ್ ಅಂಜಿನಪ್ಪ ಇತರರು ಈ ಸಂದರ್ಭದಲ್ಲಿದ್ದರು.