ಅಹಿಂಸೆಯ ಪ್ರತೀಕ ಮಹಾತ್ಮ ಗಾಂಧೀಜೀ : ದಿನೇಶ್ ಕೆ. ಶೆಟ್ಟಿ

ಅಹಿಂಸೆಯ ಪ್ರತೀಕ ಮಹಾತ್ಮ ಗಾಂಧೀಜೀ : ದಿನೇಶ್ ಕೆ. ಶೆಟ್ಟಿ

ಮಹಾತ್ಮ ಗಾಂಧೀಜಿಯವರ 76ನೇ ವರ್ಷದ ಪುಣ್ಯಸ್ಮರಣೆ

ದಾವಣಗೆರೆ, ಜ. 30 – ಅಹಿಂಸೆಯ ಪ್ರತೀಕ ಮಹಾತ್ಮಗಾಂಧಿ ಅವರು ವಿಶ್ವಕ್ಕೆ ಮಾದರಿಯಾಗಿದ್ದು, ಇಂದು ಅವರನ್ನು ಹತ್ಯೆ ಮಾಡಿದವರನ್ನು ಬಿಜೆಪಿ ಪೂಜಿಸುತ್ತಿರುವುದು ದುರದೃಷ್ಟಕರ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ತಿಳಿಸಿದರು.

ಅವರಿಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಮೋಹನ್‍ದಾಸ್ ಕರಮ್‍ಚಂದ್ ಗಾಂಧಿಯವರ 76ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಹಿಂಸೆಯಿಂದ ಏನಾದರೂ ಸಾಧಿಸಬಹುದು ಎಂಬುದಕ್ಕೆ ಮಹಾತ್ಮಗಾಂಧಿ ಅವರು ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟವೇ ಸಾಕ್ಷಿ ಎಂದರು.

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ನಿರ್ದೇಶಕ ಮುದೇಗೌಡ್ರು ಗಿರೀಶ್ ಮಾತನಾಡಿ, ಇಂದು ದೇಶ ಓರ್ವ ಮಹಾತ್ಮರನ್ನು ಕಳೆದುಕೊಂಡಿರುವ ದಿನವಾದರೆ, ಇನ್ನೊಂದು ಅವರನ್ನು ಕೊಂದವರ ಪರವಾಗಿರುವವರು ಇಂದು ದೇಶವನ್ನು ಆಳುತ್ತಿದ್ದು, ಇಂದಿನ ಯುವಕರು ಕೊಂದವರನ್ನು ಪೂಜಿಸದೇ, ಮಹಾತ್ಮರನ್ನು ಪೂಜಿಸುವಂತಾಗಬೇಕು ಎಂದು ಕರೆ ನೀಡಿದರು.

ಮಹಾನಗರ ಪಾಲಿಕೆ ಸದಸ್ಯರಾದ ಎ. ನಾಗರಾಜ್ ಅವರು ಮಾತನಾಡಿ ಮಹಾತ್ಮ ಗಾಂಧಿ ಅವರ ಅಹಿಂಸೆಯ ಹೋರಾಟ ಕೇವಲ ಭಾರತವಲ್ಲದೇ ವಿಶ್ವಾದ್ಯಂತದ ನಾಗರಿಕ ಹಕ್ಕುಗಳ ಮತ್ತು ಸ್ವಾತಂತ್ರ್ಯ ಆಂದೋಲನಗಳಿಗೆ ಸ್ಫೂರ್ತಿ ನೀಡಿತು. ಇದರಿಂದ ಅನೇಕ ದೇಶಗಳು ಪರದೇಶಿಗರ ಆಳ್ವಿಕೆಯಿಂದ ಮುಕ್ತಿ ಪಡೆದವು ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್ ಮಾತನಾಡಿ 1921ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ನಾಯಕತ್ವ ವಹಿಸಿದ ಬಳಿಕ, ಬಡತನದ ನಿವಾರಣೆ, ಮಹಿಳಾ ಹಕ್ಕುಗಳ ವಿಸ್ತರಣೆ, ಧಾರ್ಮಿಕ ಮತ್ತು ಜನಾಂಗೀಯ ಸೌಹಾರ್ದ, ಅಸ್ಪೃಶ್ಯತೆಯ ಅಂತ್ಯ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸಲು ಹಮ್ಮಿಕೊಳ್ಳಲಾದ ರಾಷ್ಟ್ರವ್ಯಾಪಿ ಚಳುವಳಿಗಳ ನೇತೃತ್ವವನ್ನು ಗಾಂಧಿಯವರು ವಹಿಸಿಕೊಂಡರು ಎಂದರು.

ಮಹಾನಗರ ಪಾಲಿಕೆ ನಾಮ ನಿರ್ದೇಶನ ಸದಸ್ಯರಾದ ಸಾಗರ್ ಎಂ.ಹೆಚ್. ಮಾತನಾಡಿ, ಸ್ವಾತಂತ್ರ ಭಾರತ ದೇಶದಲ್ಲಿ ದೇಶಕ್ಕಾಗಿ ಹೋರಾಟ ನಡೆಸಿದವರನ್ನು ಹತ್ಯೆ ಮಾಡುವ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಭಯೋತ್ಪಾದನೆ ಹುಟ್ಟು ಹಾಕಿದ ದಿನ ಎಂದರು.

ಯುವ ಕಾಂಗ್ರೆಸ್‍ನ ರಾಕೇಶ್ ಮಾತನಾಡಿ ಬ್ರಿಟಿಷರು ಹೇರಿದ್ದ ಉಪ್ಪಿನ ತೆರಿಗೆಯನ್ನು ವಿರೋಧಿಸಲು ಹಮ್ಮಿಕೊಂಡಿದ್ದ ಅಸಹಕಾರ ಚಳವಳಿಯಲ್ಲಿ ತಮ್ಮ ಅನುಯಾಯಿಗಳ ಮುಂದಾಳತ್ವವನ್ನು ವಹಿಸಿದ್ದ ಗಾಂಧೀಜಿಯವರು 1930ರಲ್ಲಿ ದಂಡಿ ಉಪ್ಪಿನ ಯಾತ್ರೆಯನ್ನು ನಡೆಸಿ, ಆನಂತರ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿಯನ್ನು ನಡೆಸಿದರು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ನಾಮ ನಿರ್ದೇಶನ ಸದಸ್ಯರಾದ ಹನುಮಂತರಾಜ್, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಸುಭಾನ್ ಸಾಬ್, ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷೆ ಶ್ರೀಮತಿ ಮಂಜಮ್ಮ, ನಿಟುವಳ್ಳಿ ಪ್ರವೀಣ್, ದಸ್ತಗಿರಿ, ಅನಿಲ್ ಮತ್ತಿತರರಿದ್ದರು.

error: Content is protected !!