ದಾವಣಗೆರೆ, ಜ. 30- ಕೇಂದ್ರ ಸರ್ಕಾರ ಮನುಸ್ಮೃತಿ ಸಂವಿಧಾನ ಜಾರಿಗೆ ತರಲು ಮುಂದಾಗಿರುವುದನ್ನು ವಿರೋಧಿಸಿ, ಜಿಲ್ಲೆಯ ದಲಿತ ಪರ, ಬಸವ ಪರ, ಪ್ರಗತಿ ಪರ ಸಂಘಟನೆಗಳ ಸಹಯೋಗದಲ್ಲಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಿಸಿ, ಮನುಸ್ಮೃತಿ ಸಂವಿಧಾನವನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸುತ್ತಿದ್ದು, ಮನುಸ್ಮೃತಿ ಸಂವಿಧಾನ ಜಾರಿಗೆ ತರಲು ಮುಂದಾದರೆ, ದೇಶಾದ್ಯಂತ ರಕ್ತಪಾತ ನಡೆಯಲಿದೆ ಎಂಬುದನ್ನು ಸರ್ಕಾರ ಮನಗಾಣಬೇಕಾಗಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಭಾರತದ ಸಂವಿಧಾನ ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಅವರನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಸಂವಿಧಾನ ಅನುಷ್ಠಾನಗೊಂಡ ಕಾರಣಕ್ಕಾಗಿ ಧರ್ಮ, ಜಾತಿ ಆಧಾರದ ತಾರತಮ್ಯ ನಿವಾರಣೆಯಾಗುತ್ತಿದೆ. ಪ್ರತಿಯೊಬ್ಬ ಪ್ರಜೆಯೂ ಗೌರವಯುತವಾಗಿ ಬಾಳುವ ಅವಕಾಶ ಸಿಕ್ಕಿದೆ. ಇಂತಹ ಶ್ರೇಷ್ಠ ಸಂವಿಧಾನದ ವಿರುದ್ಧ ಧ್ವನಿ ಎತ್ತುತ್ತಿದ್ದ ಶಕ್ತಿಗಳೇ ಪರ್ಯಾಯ ಸಂವಿಧಾನ ರಚನೆಗೆ ಮುಂದಾಗಿವೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಭಾರತದ ಸಂವಿಧಾನ ಏಳು ದಶಕಗಳಲ್ಲಿ ತಂದ ಸರ್ವ ಸಮಾನತೆಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಬದಲಾವಣೆಗಳನ್ನು ಸಹಿಸದ ಕೆಲವು ಮೂಲಭೂತವಾದಿ ಮನಸ್ಥಿತಿಗಳು ಅಸಮಾನತೆಯ ಕೂಪವಾಗಿದ್ದ ಮನುವಾದವನ್ನು ಮತ್ತೆ ಜಾರಿಗೆ ತರುವ ನೆಲೆಯಲ್ಲಿ ಸಂವಿಧಾನವನ್ನು ಬದಲಿಸುತ್ತೇವೆ ಎಂಬ ಹೇಳಿಕೆಯನ್ನು ಬಹಿರಂಗವಾಗಿ ನೀಡುತ್ತಾ ಬರುತ್ತಿದ್ದಾರೆ. ಸಂವಿಧಾನದ ಆಶಯ, ಏಕತೆಗೆ ಧಕ್ಕೆ ತರುವ ಪ್ರಯತ್ನದ ಭಾಗವಾಗಿ ಪರ್ಯಾಯ ಸಂವಿಧಾನದ ಕರಡು ಘೋಷಣೆಗೆ ಪ್ರಯಾಗ್ ರಾಜ್ ನ ಮಹಾಕುಂಭ ಮೇಳದಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ಈ ಕ್ರಮವು ಭಾರತದ ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಾಗೃತ ಭಾರತ ವಿಚಾರ ವೇದಿಕೆ ಸಂಚಾಲಕ ಡಾ.ಕೆ.ಎ. ಓಬಳೇಶ್, ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಅಗಡಿ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಗೋಪನಾಳು ರುದ್ರಗೌಡ, ವಿವಿಧ ಸಂಘಟನೆಗಳ ಪ್ರಮುಖರಾದ ವಿಶ್ವೇಶ್ವರಯ್ಯ ಹೆಮ್ಮನಬೇತೂರು, ಶಿವಮೂರ್ತಯ್ಯ ಹಿರೇಮೇಗಳಗೆರೆ, ಮರುಳಸಿದ್ಧಯ್ಯ ಬಸವನಹಾಳು, ಶಶಿಧರ ಬಸಾಪುರ, ಹನುಮಂತಪ್ಪ ಕರೂರು, ಕೊಟ್ರೇಶ್ ಐರಣಿ, ಗೋವರ್ಧನ್, ಲಕ್ಷ್ಮಣ್ ರಾಮಾವತ್, ಸಿದ್ಧಯ್ಯ, ಪ್ರೊ. ಹದಡಿ ಯಲ್ಲಪ್ಪ, ಬುಳಸಾಗರದ ಸಿದ್ರಾಮಣ್ಣ ಮತ್ತಿತರರು ಭಾಗವಹಿಸಿದ್ದರು.