ಮಾರ್ಚ್‌ ವೇಳೆಗೆ ಹೊರ ಗುತ್ತಿಗೆ ನೌಕರರು ಶೋಷಣೆ ಮುಕ್ತ

ಮಾರ್ಚ್‌ ವೇಳೆಗೆ  ಹೊರ ಗುತ್ತಿಗೆ ನೌಕರರು ಶೋಷಣೆ ಮುಕ್ತ

ದಿಶಾ ಸಮಿತಿ ಸಭೆಯಲ್ಲಿ ಸಂಸದರಿಗೆ ಅಧಿಕಾರಿಗಳ ಮಾಹಿತಿ

ದಾವಣಗೆರೆ, ಜ. 28- ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರರು ಬರುವ ಮಾರ್ಚ್‌ ವೇಳೆಗೆ ಏಜೆನ್ಸಿಗಳು ಹಾಗೂ ಮಧ್ಯವರ್ತಿಗಳ ಶೋಷಣೆಯಿಂದ ಬಹುತೇಕ ಮುಕ್ತರಾಗಲಿದ್ದಾರೆ.

ಅಧಿಕಾರಿಗಳು ಮತ್ತು ಕಾರ್ಮಿಕ ಪ್ರತಿನಿಧಿಗಳನ್ನು ಒಳಗೊಂಡ ‘ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ಧೇಶ ಸಹಕಾರ ಸಂಘ’ (ಸೊಸೈಟಿ)ದ ಮೂಲಕ ಹೊರ ಗುತ್ತಿಗೆ ನೌಕರರಿಗೆ ಮಾರ್ಚ್‌ ವೇಳೆಗೆ ವೇತನ ಪಾವತಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

ಜಿಲ್ಲಾ ಪಂಚಾಯ್ತಿಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದರು.

ಹೊರ ಗುತ್ತಿಗೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಈ ಬಗ್ಗೆ ಬರುತ್ತಿರುವ ದೂರುಗಳ ಕುರಿತು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ದನಿಗೂಡಿಸಿದ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಮಹಾನಗರ ಪಾಲಿಕೆ ಮೇಯರ್ ಚಮನ್ ಸಾಬ್, ಆದಷ್ಟು ಬೇಗನೆ ಹೊರ ಗುತ್ತಿಗೆ ನೌಕರರನ್ನು ಷೋಷಣೆ ಮುಕ್ತರನ್ನಾಗಿ ಮಾಡಬೇಕಿದೆ ಎಂದರು.

ಈ ವೇಳೆ ಮಾತನಾಡಿದ ಜಿ.ಪಂ ಸಿಇಒ ಸುರೇಶ್ ಬಿ.ಇಟ್ನಾಳ್, ಈಗಾಗಲೇ ಬೀದರ್ ಹಾಗೂ ರಾಯಚೂರಿನಲ್ಲಿ ಸೊಸೈಟಿ ರಚಿಸಲಾಗಿದೆ. ಮೂರನೇ ಜಿಲ್ಲೆಯಾಗಿ ದಾವಣಗೆರೆಯಲ್ಲಿಯೂ ಸೊಸೈಟಿ ರಚನೆ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು. ಈಗಾಗಲೇ ನೌಕರರಿಂದ ಷೇರು ಸಂಗ್ರಹ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದಾದ ನಂತರ ಎಲ್ಲ ಇಲಾಖೆಗಳಲ್ಲಿ ಇರುವ ಎಲ್ಲ ಹೊರಗುತ್ತಿಗೆ ನೌಕರರು ಸೊಸೈಟಿಯ ಸದಸ್ಯರಾಗಲಿದ್ದಾರೆ. ಸಂಘದಿಂದಲೇ ವೇತನ ಪಾವತಿಸುವುದರಿಂದ ಮಧ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ ಎಂದರು.

ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಚತೆ ಹಾಗೂ ತ್ವರಿತ ಸೇವೆಗೆ ಆದ್ಯತೆ ನೀಡಬೇಕು. ರೋಗಿಗಳು ಹಾಗೂ ರೋಗಿಗಳ ಜೊತೆ ಬಂದ ಸಹಾಯಕರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಸದರು ಜಿಲ್ಲಾ ಸರ್ಜನ್ ಅವರಿಗೆ ಸೂಚಿಸಿದರು.

ಮರಣೋತ್ತರ ಪರೀಕ್ಷೆ ನಡೆಸುವ ಕಟ್ಟಡ ತುಂಬಾ ಹಾಳಾಗಿದ್ದು, ಹೊಸದಾಗಿ ನಿರ್ಮಿಸಬೇಕಿದೆ. ಇತ್ತೀಚೆಗೆ ಆರೋಗ್ಯ ಸಚಿವರು ಆಗಮಿಸಿದ್ದಾಗ ಈ ಬಗ್ಗೆ ಮನವಿ ಮಾಡಲಾಗಿದೆ ಎಂದರು.

ಕೆಳ ಹಂತದಲ್ಲಿನ ಸಿಬ್ಬಂದಿಗಳ ಕಾರ್ಯವೈಖರಿ ಹೇಗಿದೆ ಎಂದು ವರದಿ ನೀಡಿ. ಅಲ್ಲಿ ಇಲ್ಲಿ ಪ್ರಭಾವ ಬಳಸಿ ವರ್ಗಾವಣೆ ಮಾಡಿಸಿಕೊಂಡು ಬಂದು ಕೆಲಸ ಮಾಡದೇ ಇರುತ್ತಾರೆ. ಈ ಬಗ್ಗೆ ಗಮನ ಹರಿಸಬೇಕು. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಇಲಾಖೆಗೆ ಉತ್ತಮ ಹೆಸರು ಬರುತ್ತದೆ ಎಂದು ಸಲಹೆ ನೀಡಿದರು.

ಸರ್ಕಾರವು ಗರ್ಭಿಣಿಯರ ಆರೋಗ್ಯಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿದೆ. ಇದು ಸದ್ಭಳಕೆಯಾಗಬೇಕು. ತಾಯಿ ಹಾಗೂ ಮಗುವಿನ ಆರೋಗ್ಯ ತುಂಬಾ ಮಹತ್ವದ್ದು. ಈ ನಿಟ್ಟಿನಲ್ಲಿ ಹೆಚ್ಚು ಅಪಾಯದ ಗರ್ಭಿಣಿಯರನ್ನು ಸರ್ವೇ ನಡೆಸಿ, ಅವರನ್ನು ಎರಡು ವಾರಗಳ ಕಾಲ ಮನೆಯಿಂದ ಕರೆತಂದು ಹೆರಿಗೆೆ ಸೌಲಭ್ಯ ಇರುವ ಕಡೆ ಇಟ್ಟು ಆರೈಕೆ ಮಾಡುವ ಕೆಲಸ ಮಾಡಿದಾಗ ಪ್ರಾಣಾಪಾಯದಿಂದ ಕಾಪಾಡುಬಹುದು ಎಂದು ಡಿಹೆಚ್‌ಒ ಅವರಿಗೆ ಸಂಸದರು ಸೂಚಿಸಿದರು.

ಗಾಜಿನ ಮನೆಯಲ್ಲಿ ಮೂಲ ಸೌಲಭ್ಯಗಳಿರಲಿ: ಗಾಜಿನ ಮನೆಗೆ ರಸ್ತೆ, ಶೌಚಾಲಯ ಸೇರಿ ಮೂಲ ಸೌಲಭ್ಯ ಕಲ್ಪಿಸುವಂತೆ ಸಂಸದರು ತೋಟಗಾರಿಕೆ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಗಾಜಿನ ಮನೆ ಆವರಣದಲ್ಲಿ ಶೀಘ್ರ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ. ಸಾರ್ವಜನಿಕರು ಒಂದು ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಿದ್ದು,  ನೆರಳಿಗಾಗಿ ಮಾರ್ಗದುದ್ದಕ್ಕೂ ಸಸಿಗಳನ್ನು ನಡೆಸಿ. ಹೊರ ಊರುಗಳಿಂದ ಹೆದ್ದಾರಿ ಮಾರ್ಗವಾಗಿ ಬರುವವರಿಗೆ ರಸ್ತೆ ವ್ಯವಸ್ಥೆ  ಕಲ್ಪಿಸಿ ನಾಮ ಫಲಕ ಅಳವಡಿಸಿರಿ ಎಂದು ಸೂಚಿಸಿದರು.

ಪಿ.ಬಿ. ರಸ್ತೆ ವಿಭಜಕದಲ್ಲಿನ ಗಿಡಗಳನ್ನು ಕಾಪಾಡಿಕೊಳ್ಳಿ: ಪಿ.ಬಿ. ರಸ್ತೆ ವಿಭಜಕದಲ್ಲಿ ಉತ್ತಮ ಗಿಡಗಳನ್ನು ಬೆಳೆಸಲಾಗಿದೆ. ಆದರೆ ಅವುಗಳ ನಿರ್ವಹಣೆ ಮಾಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ನೀರು ನೀಡುವುದು.  ಕೊಂಬೆಗಳನ್ನು ಕತ್ತರಿಸುವುದು ಸೇರಿದಂತೆ ಸಮರ್ಪಕ ನಿರ್ವಹಣೆ ಮಾಡಿ ಗಿಡಗಳನ್ನು ಕಾಪಾಡಿಕೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

ಸಭೆಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ, ಪಾಲಿಕೆ ಮೇಯರ್ ಕೆ.ಚಮನ್ ಸಾಬ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್ ಮತ್ತಿತರರಿದ್ದರು.

error: Content is protected !!