ಮುಖ್ಯಮಂತ್ರಿಗಳ ಸಮ್ಮುಖದ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ
ಬೆಂಗಳೂರು, ಜ. 28 – ದೇವದಾಸಿ ಮಹಿಳೆಯರ ಮಕ್ಕಳಿಗೆ ನಿವೇಶನ ಮತ್ತು ಮನೆ ನಿರ್ಮಿಸಿಕೊಳ್ಳಲು ಸರ್ಕಾರ 10 ಲಕ್ಷ ರೂ. ನೀಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಬೇಕು. ವೈಜ್ಞಾನಿಕವಾಗಿ ದೇವದಾಸಿ ಮಹಿಳೆಯರ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸಬೇಕು. ಆದರೆ ಅಧಿಕಾರಿಗಳು ಈ ಕೆಲಸ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿಗಳ ಗಮನ ತಂದರು.
ದೇವದಾಸಿ ಮಹಿಳೆಯರ ಮಕ್ಕಳಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಪ್ರಸ್ತುತ 2 ಲಕ್ಷ ರೂ. ಹಣ ನೀಡುತ್ತಿದೆ. ಆದರೆ 2 ಲಕ್ಷ ರೂ.ಗೆ ಸಿಮೆಂಟ್, ಮರಳು ತರಲು ಆಗುವುದಿಲ್ಲ. ಮನೆ ಕಟ್ಟಿಕೊಳ್ಳುವುದು ಕನಸಿನ ಮಾತು. ಹೀಗಾಗಿ ಸರ್ಕಾರ ಕನಿಷ್ಠ 10 ಲಕ್ಷ ರೂ. ನೀಡಿದರೆ ಒಂದು ಸೂರು ಕಟ್ಟಿಕೊಳ್ಳಲು ಸಾಧ್ಯವಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ಸ್ಥಳೀಯ ಸಂಸ್ಥೆಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಸಾರ್ವಜನಿಕರಿಂದ, ನಿವೇಶನಗಳಿಗೆ ಅರ್ಜಿ ಆಹ್ವಾನಿಸಿದ ಸಂದರ್ಭದಲ್ಲಿ ದೇವದಾಸಿ ಮಕ್ಕಳಿಗೆ ಶೇ. 5 ರಷ್ಟು ನಿವೇಶನ ಮೀಸಲಿಡಬೇಕು. ಶಾಲಾ- ಕಾಲೇಜು ಮತ್ತು ಪ್ರತಿಷ್ಠಿತ ವಸತಿ ನಿಲಯಗಳಿಗೆ ಹಾಗೂ ಉನ್ನತ ಶಿಕ್ಷಣ ಪಡೆದ ಮಕ್ಕಳಿಗೆ, ಸರ್ಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದಲ್ಲಿ ಇನ್ನೂ ದೇವದಾಸಿ ಪದ್ಧತಿ ಮುಂದುವರೆದಿದೆ. ಇದನ್ನು ತಡೆಯಲು ಅಧಿಕಾರಿಗಳು ಮುಂದಾಗುತ್ತಿಲ್ಲ. ನರದೌರ್ಬಲ್ಯದಿಂದ ಮಹಿಳೆಯರಿಗೆ ಕೂದಲು ಗಂಟು ಬೀಳುತ್ತವೆ. ಇದು ದೇವರ ಮುಡಿ ಎಂದು ಬಿಟ್ಟುಕೊಳ್ಳುತ್ತಾರೆ. ಈ ಬಗ್ಗೆ ಅಧಿಕಾರಿಗಳು ಅಂತಹ ಮಹಿಳೆಯರಿಗೆ ವೈಜ್ಞಾನಿಕವಾಗಿ ಅದರಿಂದ ಹೊರ ಬರಲು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿಲ್ಲ. ಜೊತೆಗೆ ನಕಲಿ ಜಾತಿ ಪ್ರಮಾಣ ಸೃಷ್ಟಿ ಮಾಡುವುದು ಹೆಚ್ಚಾಗುತ್ತಿದ್ದರೂ ಅಧಿಕಾರಿಗಳು ತಲೆಕಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದರು.
ದೇವದಾಸಿ ಪದ್ಧತಿ ಯಾವುದೇ ಜಿಲ್ಲೆಗಳಲ್ಲಿ ನಡೆದರೆ ಅದಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ನೇರ ಹೊಣೆ. ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸುವುದು ಜಿಲ್ಲಾಡಳಿತದ ಜವಾಬ್ದಾರಿ. ಈ ಕುರಿತು ಯಾವುದೇ ದೂರಿಗೆ ಅವಕಾಶವಿಲ್ಲದಂತೆ ಕಾರ್ಯ ನಿರ್ವಹಿಸಬೇಕು. ಜೊತೆಗೆ ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಲ್ಲಿ ಅಂತಹ ಪ್ರಮಾಣ ಪತ್ರ ನೀಡುವ ಅಧಿಕಾರಿಯನ್ನೂ ಸಹ ಆರೋಪಿಯನ್ನಾಗಿ ಮಾಡಲಾಗುತ್ತದೆ. ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.